ಸೋಮವಾರ, ಡಿಸೆಂಬರ್ 6, 2021
27 °C
ಅರಸೀಕೆರೆ ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ: ಆರೋಪ

ವ್ಯಕ್ತಿ ಸಾವು: ಶಾಸಕ, ಗ್ರಾಮಸ್ಥರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರಸೀಕೆರೆ: ವಾಂತಿ- ಭೇದಿ ಆಗಿದ್ದರಿಂದ ಚಿಕಿತ್ಸೆಗೆಂದು ನಗರದ ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಗೆ ಸಕಾಲಕ್ಕೆ ವೈದ್ಯರು ಚಿಕಿತ್ಸೆ ನೀಡದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಶಾಸಕ ಹಾಗೂ ಮೃತಪಟ್ಟ ವ್ಯಕ್ತಿಯ ಗ್ರಾಮಸ್ಥರು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಪಡುವನಹಳ್ಳಿ ಭೋವಿ ಕಾಲೊನಿ ನಿವಾಸಿ ಸೊಲ್ಲಾಪುರಿ ಭೋವಿ (55) ಮೃತಪಟ್ಟ ವ್ಯಕ್ತಿ.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ‘ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಧೋರಣೆಯಿಂದಲೇ ಈ ಅವಘಡ ಸಂಭವಿಸಿದೆ. ಖಾಸಗಿ ಆಸ್ಪತ್ರೆಯಲ್ಲಿ ಸಿಗುವಂತಹ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲೂ ದೊರೆತರೆ ಯಾವುದೇ ಈ ರೀತಿ ಸಾವು  ಸಂಭಸಿಸುವುದಿಲ್ಲ. ಸರ್ಕಾರಿ ಆಸ್ಪತ್ರೆಗೆ ಬರುವವರೆಲ್ಲರೂ ಬಡವರು ಎಂಬ ನಿರ್ಲಕ್ಷ್ಯ ಭಾವನೆ ಕೆಲವು ವೈದ್ಯರ ಮನಸ್ಸಿನಲ್ಲಿದೆ. ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಆಸ್ಪತ್ರೆಗೆ ಬರುವ ಸಾಮಾನ್ಯ ರೋಗಿಗಳನ್ನು ನಿರ್ಲಕ್ಷಿಸಲಾಗುತ್ತಿದೆ, ವೈದ್ಯರ ಈ ಧೋರಣೆ ಸಾಮಾನ್ಯ ರೋಗಿಗಳ ಸಾವಿಗೆ ಕಾರಣವಾಗುತ್ತಿದೆ, ಈ ಸಂಸ್ಕೃತಿ ನಿಲ್ಲಬೇಕು’ ಎಂದು ಆಗ್ರಹಿಸಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ ಇದು ಇಡೀ ರಾಜ್ಯದಲ್ಲಿಯೇ ಕಂಡು ಬರುತ್ತಿರುವ ಸಮಸ್ಯೆ, ಸರ್ಕಾರಿ ಆಸ್ಪತ್ರೆಯಲ್ಲಿರುವ ವೈದ್ಯರ ಕೊರತೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು, ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ 8 ವೈದ್ಯರ ಕೊರತೆ ಇದೆ. ಸರ್ಕಾರ ಇದನ್ನು ಗಣನೆಗೆ ತೆಗೆದುಕೊಳ್ಳದಿರುವುದು ವಿಪರ್ಯಾಸ. ಪಡುವನಹಳ್ಳಿ ನಿವಾಸಿಯ ಸಾವಿಗೆ ಕಾರಣರಾಗಿರುವ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅವರ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ಇನ್ನೊಬ್ಬ ಪ್ರಸೂತಿ ತಜ್ಞ ವೈದ್ಯರನ್ನು ನಿಯೋಜಿಸಬೇಕು. ಪ್ರಸೂತಿಗಾಗಿ ಆಸ್ಪತ್ರೆಗೆ ಬರುವವರಿಗೆ ತೊಂದರೆಯಾಗಬಾರದು’ ಎಂದು ಶಾಸಕರು ಹೇಳಿದರು.

‘ಸರ್ಕಾರ ಸೂಕ್ತ ಕಾನೂನು ಜಾರಿಗೆ ತರಬೇಕು, ಇದೇ ವಿಷಯಕ್ಕೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಯಾಗಿ ರಾಷ್ಟ್ರೀಕರಣ ಮಾಡಿ ಎಂದು ಒತ್ತಾಯಿಸಲಾಗಿತ್ತು, ವಾಂತಿ– ಭೇದಿ ಕಾಯಿಲೆಗೆ ಸಂಬಂಧಿಸಿದಂತೆ ಪಡುವನಹಳ್ಳಿ ಭೋವಿ ಕಾಲೊನಿಗೆ ಹೋಗಿ ವಸ್ತುಸ್ಥಿತಿ ಅರಿತು ಆ ಗ್ರಾಮದ ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಿ ಮುಂದೆ ಯಾವುದೇ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು, ಈ ನಿಟ್ಟಿನಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್ ಜವಾಬ್ದಾರಿ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು.

ಪಡುವನಹಳ್ಳಿ ಭೋವಿ ಕಾಲೊನಿ ಗ್ರಾಮಸ್ಥರು,ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸತೀಶ್‌ಕುಮಾರ್, ಶಾಸಕ ಕೆ.ಎಂ. ಶಿವಲಿಂಗೇಗೌಡ, ತಹಶೀಲ್ದಾರ್ ಸಂತೋಷ್‌ಕುಮಾರ್, ಡಿವೈಎಸ್ಪಿ ಎಲ್. ನಾಗೇಶ್, ವೈದ್ಯರೆಲ್ಲರೂ ಸೇರಿ ನಡೆಸಿದ ಶಾಂತಿ ಸಭೆಯ ಬಳಿಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ, ‘ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸತ್ಯಾಸತ್ಯತೆ ತಿಳಿದು ಈ ಅವಘಡಕ್ಕೆ ಕಾರಣವಾದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಭರವಸೆ ನೀಡಿದರು.

ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೂಪಾ ಗುರುಮೂರ್ತಿ, ಬಜರಂಗದಳದ ಮೀನಾಕ್ಷ ಚಂದ್ರು, ಭೋವಿ ಕಾಲೊನಿ ಮುಖಂಡ ಶಿವಣ್ಣ, ಚಿಟ್ಟನಹಳ್ಳಿ ಮಲ್ಲೇಶ್, ತಾಲ್ಲೂಕು ಆರೋಗ್ಯಾಧಿಕಾರಿ ನಾಗಪ್ಪ, ಡಾ.ಷಡಕ್ಷರಿ, ಡಾ.ಕರಿಯಪ್ಪ, ನಗರಸಭೆ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು