ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಬಿತ್ತನೆ ಕಾರ್ಯ ಬಲು ಚುರುಕು

ಚನ್ನರಾಯಪಟ್ಟಣ ತಾಲ್ಲೂಕಿನಾದ್ಯಂತ ಶೇ 75ರಷ್ಟು ಕೃಷಿ ಚಟುವಟಿಕೆ ಪೂರ್ಣ
Last Updated 18 ಆಗಸ್ಟ್ 2021, 3:57 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ತಾಲ್ಲೂಕಿನ ಪ್ರಮುಖ ಬೆಳೆ ರಾಗಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ.

ಈ ಬಾರಿ ಪೂರ್ವ ಮುಂಗಾರಿ ನಿಂದಲೂ ವರುಣ ಕೃಪೆ ತೋರಿದ್ದು, ವಾಡಿಕೆ ಮಳೆ 308 ಮಿ.ಮೀ, ಆದರೆ, 415 ಮಿ.ಮೀ ಮಳೆಯಾಗಿದೆ. ಹಾಗಾಗಿ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಪ್ರಸಕ್ತ ವರ್ಷ 18,540 ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ 14 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಹಿರೀಸಾವೆ, ನುಗ್ಗೇಹಳ್ಳಿ, ಬಾಗೂರು ಹಾಗೂ ಶ್ರವಣಬೆಳಗೊಳ ಹೋಬಳಿ ವ್ಯಾಪ್ತಿಯಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಜುಲೈ ಕೊನೆ ವಾರದಲ್ಲಿ ರಾಗಿ ಬಿತ್ತನೆ ಆರಂಭಗೊಂಡಿದೆ. ಈ ತಿಂಗಳ ಅಂತ್ಯದವರೆಗೂ ಬಿತ್ತನೆ ಕಾರ್ಯ ನಡೆಯಲಿದೆ.

ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುತ್ತಿರುವುದು ಸಹ ರೈತರು ರಾಗಿ ಬೆಳೆಯಲು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಹಾಗಾಗಿ ರಾಗಿ ಬೆಳೆಯುವ ಪ್ರದೇಶವೂ ವಿಸ್ತಾರವಾಗುತ್ತಿದೆ. ರಾಗಿಯಿಂದ ಉಪ ಉತ್ಪನ್ನಗಳಾದ ಬಿಸ್ಕೆಟ್, ಹಪ್ಪಳ, ಚಕ್ಕಲಿ ತಯಾರು ಮಾಡಲಾಗುತ್ತದೆ.
‌ ‘ಹೇಮಾವತಿ ಎಡದಂಡೆ ನಾಲೆ, ಶ್ರೀರಾಮ ದೇವರ ನಾಲೆಗೆ ನೀರು ಹರಿಸಿರುವುದರಿಂದ ಭತ್ತ ಬೆಳೆಯಲು ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ವಾರದಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡಲಾಗುತ್ತದೆ’ ಎನ್ನುತ್ತಾರೆ ರೈತರು.

ಮುಸುಕಿನ ಜೋಳ 8,500 ಹೆಕ್ಟೇರ್ ಬಿತ್ತನೆ ಗುರಿ ಪೈಕಿ 6,300 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ತಾಲ್ಲೂಕಿನಲ್ಲಿ ತೆಂಗು ಸಹ ಹೆಚ್ಚು ಬೆಳೆಯಲಾಗುತ್ತದೆ.

ಕಸಬಾ ಹಾಗೂ ದಂಡಿಗನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಮುಸುಕಿನ ಜೋಳ ಸೇರಿ ಮುಂಗಾರು ಬೆಳೆಗಳು ನಿರೀಕ್ಷೆಯಂತೆ ಬೆಳೆದಿದ್ದು, ಕಟಾವಿನ ನಂತರ ರಾಗಿ ಅಥವಾ ಮುಸುಕಿನ ಜೋಳ ಬಿತ್ತನೆಯಾಗಲಿದೆ.

ಕಬ್ಬು ಬಿತ್ತನೆ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸಿಲ್ಲ. 675 ಹೆಕ್ಟೇರ್‌ ಪೈಕಿ 383 ಹೆಕ್ಟೇರ್‌ನಲ್ಲಿ ಕಬ್ಬು ಬಿತ್ತನೆಯಾಗಿದೆ. ತಾಲ್ಲೂಕಿನ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಆಧುನೀಕರಣ ಮಾಡಿರುವುದರಿಂದ ಮುಂಬರುವ ವರ್ಷಗಳಲ್ಲಿ ಪ್ರತಿ ವರ್ಷ 8 ಲಕ್ಷ ಟನ್ ಕಬ್ಬು ಅರೆಯಲಾಗುತ್ತದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಕಬ್ಬು ಬೆಳೆಯುವ ಪ್ರದೇಶ ಸಹ ವಿಸ್ತಾರಗೊಳ್ಳುವ ಸಾಧ್ಯತೆ ಇದೆ.

ಅಲಸಂದೆ, ಉದ್ದು, ಹೆಸರು, ಎಳ್ಳು ಬೆಳೆ ಕಟಾವು ಮಾಡಲಾಗಿದೆ. ತೊಗರಿ, ಅವರೆ ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT