ಶನಿವಾರ, ಆಗಸ್ಟ್ 13, 2022
27 °C
ಕೃಷಿ ಕಾಲೇಜಿನ ವಿದ್ಯಾರ್ಥಿನಿಯರ ವಸತಿ ನಿಲಯ ಉದ್ಘಾಟಿಸಿದ ಶೋಭಾ ಕರಂದ್ಲಾಜೆ

‘ಕೃಷಿ ಉತ್ಪನ್ನಗಳ ರಫ್ತಿಗೂ ಆದ್ಯತೆ ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೃಷಿ ಕ್ಷೇತ್ರದಲ್ಲಿ ಕೇವಲ ಉತ್ಪಾದನೆ ‌ಮಾತ್ರವಲ್ಲ, ಮಾರುಕಟ್ಟೆ ಹಾಗೂ ರಫ್ತಿನ ಬಗ್ಗೆಯೂ ಗಮನ ಹರಿಸಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ತಾಲ್ಲೂಕಿನ ಕಾರೆಕೆರೆಯ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಸೋಮವಾರ ವಿದ್ಯಾರ್ಥಿನಿಯರ ವಸತಿ ನಿಲಯ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದ ಕೋರಿಕೆಯಂತೆ ಮುಂದಿನ ವರ್ಷ ‘ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ’ ಎಂದು ಘೋಷಿಸಲಾಗಿದೆ. ಇದನ್ನು ದೇಶದ ರೈತರು ಸದ್ಬಳಕೆ ಮಾಡಿಕೊಳ್ಳಬೇಕು, ಹಿಂದೆ ಭಾರತ ಜಗತ್ತಿಗೆ ಜ್ಞಾನ ಕೊಡುತ್ತಿದ್ದ ದೇಶವಾಗಿತ್ತು, ಈಗ ವಿಶ್ವಕ್ಕೆ ಆಹಾರ ಕೊಡುವ ದೇಶವಾಗಬೇಕು’ ಎಂದರು‌.

‘ದೇಶದಲ್ಲಿ ಕೃಷಿ‌ ಕ್ಷೇತ್ರದಲ್ಲಿ ಗಣನೀಯ ಪ್ರಗತಿಯಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹ ಶಕ್ತಿ ತುಂಬುತ್ತಿವೆ. ಕೃಷಿ ವಿಜ್ಞಾನ ಅಧ್ಯಯನಕ್ಕೆ ಭಾರಿ ಬೇಡಿಕೆ ಇದ್ದರೂ, ಅವಕಾಶ ಹೆಚ್ಚಿಸುವ ಕೆಲಸ ಮಾಡಬೇಕಿದೆ’ ಎಂದರು.

‘ಕರ್ನಾಟಕದಲ್ಲಿ ಕೃಷಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇಶದಾದ್ಯಂತ ರಾಜ್ಯದವರು ವಿಜ್ಞಾನಿಗಳು ಹಾಗೂ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಕೃಷಿ ಮತ್ತು ತೋಟಗಾರಿಕೆ ವ್ಯಾಪ್ತಿ ಇಡೀ ದೇಶಕ್ಕೆ ವಿಸ್ತರಿಸಿದೆ’ ಎಂದು ತಿಳಿಸಿದರು.

‘ಹಸಿರು ಕ್ರಾಂತಿಯಿಂದ ಭಾರತ ಆಹಾರದಲ್ಲಿ ಸ್ವಾವಲಂಬಿ ಆಗಿದೆ. ತರಕಾರಿ, ಹಣ್ಣಿನ ರಫ್ತಿನಲ್ಲಿ ಭಾರತ ವಿಶ್ವದಲ್ಲಿ 9ನೇ ಸ್ಥಾನದಲ್ಲಿದೆ. ಇದನ್ನು ಇನ್ನಷ್ಟು ಉತ್ತಮಪಡಿಸುವ ಅವಕಾಶ ಇದೆ. ಇದಕ್ಕೆ ರೈತರಿಗೆ ಸೂಕ್ತ ತರಬೇತಿ, ತಂತ್ರಜ್ಞಾನದ ನೆರವು ನೀಡಬೇಕು‌’ ಎಂದು ಸಲಹೆ ನೀಡಿದರು.

ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ‘ಅನ್ನ ಕೊಡುವ ಅನ್ನದಾತನನ್ನು ರಕ್ಷಿಸಿ‌ ಪ್ರೋತ್ಸಾಹಿಸಲು ಹಲವು ರೀತಿಯ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಅದನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕಿದೆ‌. ಕೃಷಿ ವಿಜ್ಞಾನ ಅಧ್ಯಯನ ಮಾಡುವವರು ಅಗ್ರಿ ಕ್ಲಿನಿಕ್ ತೆರೆಯಬೇಕು .ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು, ಶ್ರಮ ಹಾಗೂ ಅಗತ್ಯ ವಿಜ್ಞಾನ, ತಂತ್ರಜ್ಞಾನ ಬಳಕೆಯಿಂದ ಕೃಷಿ ಲಾಭದಾಯಕವಾಗಿ ಮಾಡಬಹುದು’ ಎಂದರು.

‘ಕೃಷಿ ಅಂದರೆ ನಿರ್ಲಕ್ಷ್ಯ ಬೇಡ. ಪ್ರಧಾನಿ ನರೇಂದ್ರ ಮೋದಿ ರೈತರ ಆದಾಯ ದ್ವಿಗುಣಗೊಳಿಸಲು ಗುರಿ ಇರಿಸಿಕೊಂಡಿದ್ದು, ಆಹಾರ ಸಂಸ್ಕರಣಾ ಘಟಕ ತೆರೆಯಲು ಆತ್ಮನಿರ್ಭರ ಯೋಜನೆಯಡಿ ಶೇ 50ರಷ್ಟು ಸಬ್ಸಿಡಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ದೇಶದಲ್ಲೇ ‌ಮೊದಲ ಬಾರಿಗೆ ರಾಜ್ಯದಲ್ಲಿ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಪ್ರಾರಂಭಿಸಲಾಗಿದೆ. ಶೈಕ್ಷಣಿಕೆ ನೆರವಿಗಾಗಿ ವಿದ್ಯಾರ್ಥಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡಲಾಗುತ್ತಿದೆ. ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿ ಒಟ್ಟು ₹ 10 ಸಾವಿರ ನೀಡುತ್ತಿವೆ. ಅದೇ ರೀತಿ ರಾಜ್ಯದಲ್ಲಿ ಮೊದಲ ಬಾರಿಗೆ ಡೀಸೆಲ್ ಸಬ್ಸಿಡಿ ನೀಡಲಾಗುತ್ತಿದೆ’ ಎಂದು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ರಾಜೇಂದ್ರ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ‘1996 ರಲ್ಲಿ‌ ಸಂಸ್ಥೆ ಸ್ಥಾಪನೆಯಾಗಿದ್ದು, 2006 ರಲ್ಲಿ ಕಾರೆಕೆರೆಯ ಕಟ್ಟಡದಲ್ಲಿ ಕಾಲೇಜು ಪ್ರಾರಂಭವಾಗಿದೆ ನಮ್ಮಲ್ಲಿ ಕೃಷಿ ಪದವಿ ಪಡೆದ ಹಲವಾರು ವಿದ್ಯಾರ್ಥಿಗಳು ರಾಜ್ಯದ ಕೃಷಿ ಇಲಾಖೆ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ’ ಎಂದರು.

ಕೃಷಿ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ರಾಮಾಂಜನೇಗೌಡ, ಅರವಿಂದ್, ಶಿವರಾಮ್, ಡೀನ್ ವಾಸುದೇವ್ ಹಾಜರಿದ್ದರು.

‘300 ಕೃಷಿ ಅಧಿಕಾರಿಗಳ ನೇಮಕ ಶೀಘ್ರ’

ರಾಜ್ಯದಲ್ಲಿ 300 ಜನ ಕೃಷಿ ಅಧಿಕಾರಿಗಳ ನೇಮಕಾತಿಗೆ ಅನುಮತಿ ದೊರೆತಿದ್ದು, ಶೀಘ್ರ ಭರ್ತಿ ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ ಹೇಳಿದರು.

ಹಾಸನ ಹಾಗೂ ಸಕಲೇಶಪುರದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಸೆಂಟರ್ ಪಾರ್ ಎಕ್ಸಲೆನ್ಸ್ ಕೇಂದ್ರಗಳ ನಿರ್ಮಾಣಕ್ಕೆ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಅವರಣದಲ್ಲಿ ಸೋಮವಾರ ಆಯೋಜಿಸಿದ್ದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳಪೆ ರಸಗೊಬ್ಬರ, ಬಿತ್ತನೆ ಬೀಜ ಮಾರಾಟ ತಡೆಗೆ ಮೈಸೂರಿನಲ್ಲಿ ಜಂಟಿ ಕೃಷಿ ನಿರ್ದೇಶಕರನ್ನು ಒಳಗೊಂಡ ಪ್ರತ್ಯೇಕ ಕೃಷಿ ಜಾಗೃತದಳ ಪ್ರಾರಂಭಿಸಲಾಗುತ್ತಿದೆ. ಶೀಘ್ರದಲ್ಲೇ ಹಾಸನ ಜಿಲ್ಲೆಯಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕರಾದ ಎಚ್.ಕೆ ಕುಮಾರಸ್ವಾಮಿ, ಕೆ.ಎಂ ಶಿವಲಿಂಗೇಗೌಡ, ಎ.ಟಿ ರಾಮಸ್ವಾಮಿ, ಸಿ.ಎನ್. ಬಾಲಕೃಷ್ಣ, ಕೆ.ಎಸ್. ಲಿಂಗೇಶ್, ಪ್ರೀತಂ ಗೌಡ. ಮಾತನಾಡಿದರು. ಜಿಲ್ಲಾಧಿಕಾರಿ ಆರ್ .ಗಿರೀಶ್, ಎಸ್ಪಿ ಹರಿರಾಂ ಶಂಕರ್, ಜಿಲ್ಲಾ ಪಂಚಾಯಿತಿ ಸಿಇಒ ಕಾಂತರಾಜ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕೃಷ್ಣೇಗೌಡ, ಜಂಟಿ ಕೃಷಿ ನಿರ್ದೇಶಕ ಡಾ ಕೆ.ಎಚ್. ರವಿ ಹಾಜರಿದ್ದರು.

ಕೃಷಿ ಇಲಾಖೆ ಹೊರತಂದಿರುವ ಬೆಳೆ ಸಮೀಕ್ಷೆ, ಇಲಾಖಾ 2022-23ನೇ ಸಾಲಿನ ಕಾರ್ಯಕ್ರಮಗಳು, ಬೆಳೆ ವಿಮೆ ಕುರಿತ ಮಾಹಿತಿ ಕಿರುಹೊತ್ತಿಗೆ, ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.