ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

12 ಮಕ್ಕಳ ಮನೆಗೆ ಚಾಲನೆ ನೀಡಿದ ಶಾಸಕ ಎ.ಮಂಜು

Published 22 ಜೂನ್ 2024, 13:55 IST
Last Updated 22 ಜೂನ್ 2024, 13:55 IST
ಅಕ್ಷರ ಗಾತ್ರ

ಕೊಣನೂರು: ಅರಕಲಗೂಡು ವಿಧಾನಸಭಾಕ್ಷೇತ್ರದ 12 ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಮನೆಗೆ ಶಾಸಕ ಎ.ಮಂಜು ಶುಕ್ರವಾರ ಚಾಲನೆ ನೀಡಿದರು.

ಕೊಣನೂರು ಹೋಬಳಿಯ ಹಂಡ್ರಂಗಿ ಸೇರಿ ರಾಮನಾಥಪುರ, ಮಧುರನಹಳ್ಳಿ, ಕೇರಳಾಪುರದಲ್ಲಿ ಮಕ್ಕಳ ಮನೆಯನ್ನು ಉಧ್ಘಾಟಿಸಿ ಮಾತನಾಡಿದ ಅವರು, ‘ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ ಎಲ್ಕೆಜಿ, ಯುಕೆಜಿ ಮಾದರಿಯಲ್ಲಿ ಮಕ್ಕಳ ಮನೆಗೆ ಚಾಲನೆ ನೀಡಲಾಗಿದೆ. ಖಾಸಗಿ ಶಾಲೆ ಮಾದರಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ನೀಡುವ ಸದುದ್ದೇಶದಿಂದ ತಾಲ್ಲೂಕಿನ 12 ಸರ್ಕಾರಿ ಶಾಲೆಗಳಲ್ಲಿ ಮಕ್ಕಳಮನೆ ಶಾಲೆ ಆರಂಭಿಸಿದ್ದು ಪೋಷಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.

ಶಾಲೆಯು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಕಾರ್ಯನಿರ್ವಹಿಸಲಿದ್ದು, ಶಾಲೆಗೆ ಅಗತ್ಯವಾದ ಪೀಠೋಪಕರಣ, ಶಿಕ್ಷಕರ ವೇತನ ಮುಂತಾದ ಸೌಲಭ್ಯಗಳ ಖರ್ಚನ್ನು ನನ್ನ ಶಾಸಕರ ವೇತನ ಹಾಗೂ ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ಭರಿಸುವುದಾಗಿ ತಿಳಿಸಿದರು.

‘ಮೂರು ವರ್ಷದಿಂದ ಆರು ವರ್ಷ ವಯೋಮಿತಿ ಮಕ್ಕಳಿಗೆ ಕಾನ್ವೆಂಟ್ ಮಾದರಿ ಸಮವಸ್ತ್ರ, ಪಠ್ಯಪುಸ್ತಕ, ನುರಿತ ಶಿಕ್ಷಕರಿಂದ ಬೋಧನೆ, ಕ್ರೀಡಾ ಚಟುವಟಿಕೆ ಸೇರಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು. ಮಕ್ಕಳ ಮನೆ ವಿಶೇಷ ಮಾನದಂಡಗಳನ್ನಾಧರಿಸಿ ಆಯ್ಕೆಯಾಗಿರುವ ನುರಿತ ಖಾಸಗಿ ಶಿಕ್ಷಕರು, ಈಗಾಗಲೆ ಸಿದ್ಧಪಡಿಸಿರುವ ವಿಶೇಷ ಪಠ್ಯಕ್ರಮ ಹಾಗೂ ವಾರದ ಪ್ರತಿ ದಿನ ಪ್ರತಿ ಗಂಟೆಯು ಮಕ್ಕಳಿಗೆ ಯಾವ ವಿಷಯವನ್ನು ಭೋದಿಸಬೇಕೆಂದು ಚಾರ್ಟ್ ಸಿದ್ಧಪಡಿಸಲಾಗಿದ್ದು, ಮಕ್ಕಳಿಗೆ ವಿಶೇಷ ಅನುಭವ ನೀಡುವುದರ ಜೊತೆಗೆ, ಕಾನ್ವೆಂಟ್ ಮಕ್ಕಳಿಗೆ ಸೆಡ್ಡು ಹೊಡೆಯಬೇಕೆಂಬುದು ನಮ್ಮ ಆಶಯ’ ಎಂದರು.

‘ಶಿಕ್ಷಣ ಇಲಾಖೆ ಮತ್ತು ಸಿಡಿಪಿಒ ಅನುಮತಿ ಪಡೆದು ಪ್ರಾರಂಭಿಸಿರುವ ಈ ಶಾಲೆ ಸಕರ್ಾರಿ ಶಾಲೆಗಳಿಗೆ ಪೂರಕವಾಗಲಿದೆ’ ಎಂದರು.

ಅರಕಲಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರಕಲಗೂಡು ಕೋಟೆ, ಸಂತೆಮರೂರು, ಬೈಚನಹಳ್ಳಿ, ಮಲ್ಲಿಪಟ್ಟಣ, ಹುಲಿಕಲ್, ಹಂಡ್ರಂಗಿ, ರಾಮನಾಥಪುರ, ಮಧುರನಹಳ್ಳಿ, ಕೇರಳಾಪುರ ಹಾಗೂ ಹಳ್ಳಿ ಮೈಸೂರು ಹೋಬಳಿಯ ಬಿದರಕ್ಕ, ಓಡನಹಳ್ಳಿ ಗ್ರಾಮಗಳಲ್ಲಿ ಮೊದಲ ಹಂತದಲ್ಲಿ ಚಾಲನೆ ನೀಡಿದ್ದು ಮುಂದಿನ ವರ್ಷ ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲೂ ಮಕ್ಕಳ ಮನೆಗಳನ್ನು ವಿಸ್ತರಿಸಲಾಗುವುದು ಎಂದರು.

ಹಂಡ್ರಂಗಿ ಗ್ರಾಮದ ಹಳೆಯ ವಿದ್ಯಾರ್ಥಿ ದಿಲೀಪ್, ನಿರ್ವಾಣಿಗೌಡ, ದೇವರಾಜೇಗೌಡ, ಅಚ್ಚುತ, ಗ್ರಾ.ಪಂ ಅಧ್ಯಕ್ಷ ಶಿವಕುಮಾರ್, ಗ್ರಾ.ಪಂ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜು, ಪಿಡಿಓ ಗಿರೀಶ್, ಮುಖಂಡ ಧರ್ಮಪ್ಪ, ಚಂದ್ರು, ಶಿವಣ್ಣ, ತರಿಗಳಲೆ ಪುಟ್ಟಸ್ವಾಮಿಗೌಡ, ಶೇಖರ್, ಶಾಲೆಯ ಶಿಕ್ಷಕರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ.ರಾಧಿಕಾ, ಆರೋಗ್ಯ ನಿರೀಕ್ಷಕ ಎಂ.ಆರ್. ಆನಂದಗೌಡ ಮುಂತಾದವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT