ಬುಧವಾರ, ಅಕ್ಟೋಬರ್ 21, 2020
21 °C
ಗಾಂಧೀಜಿ, ಲಾಲ್‌ ಬಹದ್ದೂರ್‌ ಜಯಂತಿಯಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್ ಅಭಿಮತ

ಅಹಿಂಸಾ ಹೋರಾಟ ಜಗತ್ತಿಗೆ ಮಾದರಿ: ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಗಾಂಧೀಜಿ ಅವರ ಚಿಂತನೆ ಮತ್ತು ಆದರ್ಶ ಸದಾ ಅನುಕರಣೀಯ. ಶಾಂತಿ ಹಾಗೂ ಅಹಿಂಸಾ ಹೋರಾಟದ ಮೂಲಕ ಜಗತ್ತಿಗೆ ಮಾದರಿ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಗಾಂಧೀಜಿ ಅವರ ಜೀವನ ಮೌಲ್ಯಗಳು ವಿಶ್ವಮಾನ್ಯವಾಗಿದೆ. ಶ್ರದ್ಧೆ ಹಾಗೂ ತಾಳ್ಮೆಯಿಂದ ಮಾತ್ರ ಪ್ರತಿಯೊಂದು ಕೆಲಸದಲ್ಲೂ ಜಯ ಗಳಿಸಲು ಸಾಧ್ಯ. ಅವರ ಮಾರ್ಗವನ್ನು ಎಲ್ಲರೂ ಪಾಲಿಸಿದರೆ ಸಮಾಜದಲ್ಲಿ ಶಾಂತಿ ಹಾಗೂ ಅಭಿವೃದ್ಧಿ ಸಾಧ್ಯ ಎಂದು ನುಡಿದರು.

ದಕ್ಷಿಣ ಆಫ್ರಿಕಾದಲ್ಲಿ ಜನಾಂಗೀಯ ಹಾಗೂ ನಾಗರಿಕ ಹಕ್ಕುಗಳ ಉಲ್ಲಂಘನೆ ವಿರುದ್ಧ ಹೋರಾಟ ಪ್ರಾರಂಭ ಮಾಡಿದ ಗಾಂಧೀಜಿ ನಂತರ ದೇಶಕ್ಕೆ ಮರಳಿ, ಅಸ್ಪೃಶ್ಯತೆ ಹಾಗೂ ಬ್ರಿಟಿಷರ ಆಡಳಿತದ ವಿರುದ್ಧ ಹಲವು ಸ್ವರೂಪದ ಚಳುವಳಿ ನಡೆಸಿದರು. ಅವರು ಅನುಸರಿಸಿದ ಶಾಂತಿ ಹಾಗೂ ಅಹಿಂಸಾತ್ಮಕ ಮಾರ್ಗದ ಹೋರಾಟ ಜಗತ್ತಿನ ಕಣ್ಣು ತೆರೆಸಿತು ಎಂದರು.

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅತ್ಯಂತ ಸರಳ, ಪ್ರಾಮಾಣಿಕ ಹಾಗೂ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. 1965ರಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ಗೆಲುವನ್ನು ತಂದು ಕೊಡುವುದರ ಜೊತೆಗೆ ಜೈ ಜವಾನ್ ಜೈ ಕಿಸಾನ್ ಎಂಬ ಧ್ಯೇಯ ವಾಕ್ಯ ನೀಡಿದ್ದಾರೆ ಎಂದು ಸ್ಮರಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಂ. ಶಿವಣ್ಣ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಇಬ್ಬರೂ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಅನುಸರಿಸಬೇಕು. ಅನಾಚಾರದ ಹಿಂದೆ ಹೋಗದೆ, ಸತ್ಯ ಹಾಗೂ ಶಾಂತಿ, ಸೌಹಾರ್ದತೆಯಿಂದ ಪ್ರತಿಯೊಬ್ಬರೂ ಜೀವಿಸಬೇಕು. ಗಾಂಧೀಜಿಯವರ ಜೀವನವೇ ಎಲ್ಲರಿಗೂ ದೊಡ್ಡ ಸಂದೇಶ’ಎಂದರು.

ಉಪ ವಿಭಾಗಾಧಿಕಾರಿ ಡಾ. ನವೀನ್ ಭಟ್ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಅಪ್ಪಣ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್ ನಂದಿನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸುದರ್ಶನ್, ತಹಶೀಲ್ದಾರ್ ಶಿವಶಂಕರಪ್ಪ, ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣೇಗೌಡ ಹಾಜರಿದ್ದರು.

ಕಾಂಗ್ರೆಸ್ ಕಚೇರಿ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ರ್ರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಮುಖಂಡರಾದ ದೇವರಾಜೇಗೌಡ, ಉಜ್ವಲ್‌ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ತಾರಾ ಚಂದನ್‌ ಇದ್ದರು.

ಸಿಹಿ ಹಂಚಿಕೆ: ಹಾಸನ ಶಾಸಕ ಪ್ರೀತಂ ಗೌಡ ಕಚೇರಿಯಲ್ಲಿ ಸಡಗರ, ಸಂಭ್ರಮದಿಂದ ಇಬ್ಬರೂ ಮಹನೀಯರ ಜನ್ಮ ದಿನ ಆಚರಿಸಲಾಯಿತು. ಕಾರ್ಯಕರ್ತರು ಸಿಹಿ ಹಂಚಿದರು. ನಗರ ಘಟಕದ ಅಧ್ಯಕ್ಷ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಅನಂತ್, ಮುಖಂಡರಾದ ಮೊಗಣ್ಣಗೌಡ, ಮಂಜು, ಸ್ವಾಮಿಯಣ್ಣ, ಲೋಕೇಶ್‌, ಪ್ರಸನ್ನ ಕುಮಾರ್, ರಮೇಶ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು