ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಾಚಾರದ ಲಾಕ್‌ಡೌನ್‌ ಪ್ರಯೋಜನವಿಲ್ಲ: ಸಂಸದ ಪ್ರಜ್ವಲ್‌ ರೇವಣ್ಣ ಆಕ್ರೋಶ

Last Updated 8 ಮೇ 2021, 12:53 IST
ಅಕ್ಷರ ಗಾತ್ರ

ಹಾಸನ: ಕೋವಿಡ್‌ ಪರೀಕ್ಷೆ ಕಡಿಮೆ ಮಾಡುವಂತೆ ಆದೇಶಿಸಿರುವ ರಾಜ್ಯ ಸರ್ಕಾರ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿನಿತ್ಯ 5 ಸಾವಿರ ಗಂಟಲು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಆದರೆ, ಈಗಎರಡೂವರೆ ಸಾವಿರಕ್ಕೆ ಇಳಿಸಲಾಗಿದೆ. ಈ ಸಂಬಂಧ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಪಾಸಿಟಿವ್ ಪ್ರಕರಣ ಹೆಚ್ಚುತ್ತಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲು ಆಗುತ್ತಿಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕಾಟಾಚಾರದ ಲಾಕ್‍ಡೌನ್ ಘೋಷಿಸಿದರೆ ಯಾವುದೇ ಕಾರಣಕ್ಕೂ ಕೋವಿಡ್‌ ನಿಯಂತ್ರಣ ಸಾಧ್ಯವಿಲ್ಲ. ಮುಂಬೈ ಮಾದರಿಯಲ್ಲಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಇನ್ನೂ ಹೆಚ್ಚಿನ ಸಾವು, ನೋವು ಸಂಭವಿಸುವ ಸಾಧ್ಯತೆ ಇದೆ. ಜಿಲ್ಲೆಗೆ ವೈದ್ಯಕೀಯ ಪರಿಕರ ಕಳುಹಿಸಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದೇನೆ. ಕೊರೊನಾ ಲಸಿಕೆ ಅಭಾವ ಉಂಟಾಗಿದ್ದು, ಕೂಡಲೇ ಲಸಿಕೆ ಪೂರೈಸುವಂತೆ ಪ್ರಧಾನಿಗೆ ಮನವಿ ಮಾಡುತ್ತೇನೆ. ಆರೋಗ್ಯ ತುರ್ತು
ಪರಿಸ್ಥಿತಿ ಎದುರಾಗಿರುವುದರಿಂದ ರಾಜಕೀಯ ಬದಿಗಿಟ್ಟು ಕೆಲಸ ಮಾಡಬೇಕು ಎಂದರು.

₹3,500 ಬೆಲೆಯ ರೆಮ್‍ಡೆಸಿವಿರ್ ಚುಚ್ಚುಮದ್ದನ್ನು ₹18 ರಿಂದ 25 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ.ಖಾಸಗಿ ಆಸ್ಪತ್ರೆ ವೈದ್ಯರೂ ಇದರಲ್ಲಿ ಭಾಗಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಹಣಕ್ಕಾಗಿ ಜನರ ಜೀವದೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ ಎಂದು ಹೇಳಿದರು.

ಕೊರೊನಾ ಲಸಿಕೆಗಾಗಿ ಪ್ರಧಾನಿ ಮೀಸಲಿಟ್ಟ ₹35 ಸಾವಿರ ಕೋಟಿ ಏನಾಯ್ತು? ಯಾವ ಆಸ್ಪತ್ರೆಯಲ್ಲಿವಿಚಾರಿಸಿದರೂ ಲಸಿಕೆ ಇಲ್ಲ ಎನ್ನುತ್ತಾರೆ. ಹಾಗಿದ್ದರೆ ಸಾವಿರಾರು ಕೋಟಿ ರೂಪಾಯಿ ಅನುದಾನ ಎಲ್ಲಿ ವಿನಿಯೋಗವಾಗಿದೆ ಎಂಬುದಕ್ಕೆ ಉತ್ತರ ಹೇಳಬೇಕು. ಆಮ್ಲಜನಕ ವ್ಯವಸ್ಥೆ ಇರುವ ಹಾಸಿಗೆ ಸಿಗದೆ ರೋಗಿಗಳು ಸಾಯುತ್ತಿದ್ದಾರೆ. ಕರ್ನಾಟಕ ಮಾಡಿರುವ ಪಾಪವಾದರೂ ಏನು ಎಂದು ಪ್ರಶ್ನಿಸಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಸ್ವರ್ಗ ಸೃಷ್ಟಿಯಾಗುತ್ತದೆ ಎಂದರು. ಅದೇ ಕಾರಣಕ್ಕೆ ಉಪ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಗೆ ಮತ ನೀಡಿದರು. ಆದರೆ, ಈಗ 25 ಬಿಜೆಪಿ ಸಂಸದರು ಸುಮ್ಮನಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಮ್ಸ್ ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ₹5 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವವರ ಸಂಪೂರ್ಣ ವಿವರ ಗೊತ್ತಿದೆ. ಆದರೆ, ಆರೋಪ, ಪ್ರತ್ಯಾರೋಪ ಮಾಡುವ ಸಮಯ ಇದಲ್ಲವಾದ್ದರಿಂದ ಸುಮ್ಮನಿದ್ದೇನೆ. ಆ ಶಾಸಕರು (ಪ್ರೀತಂ ಗೌಡ) ತಮ್ಮ ಹಿಂಬಾಲಕರಿಗೆ ಇನ್ನಾದರೂ ಬುದ್ದಿ ಹೇಳಬೇಕು. ಯಾರೋ ಒಬ್ಬರು ಲಾಭ ಮಾಡಿಕೊಳ್ಳುವುದಕ್ಕಾಗಿ ಜನರಿಗೆ ತೊಂದರೆ ನೀಡುವುದನ್ನು ಯಾರೂ ಸಹಿಸುವುದಿಲ್ಲ ಎಂದು ಪ್ರಜ್ವಲ್‌ ಹೇಳಿದರು.

ತಾಲ್ಲೂಕು ಆಸ್ಪತ್ರೆಗಳಲ್ಲಿ ಗ್ರೂಪ್‌ ಡಿ ನೌಕರರನ್ನು ಕೂಡಲೇ ನೇಮಕ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ. ವೆಂಟಿಲೇಟರ್ ಆಪರೇಟರ್‌ಗಳ ಭರ್ತಿ ಮಾಡಿಕೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT