ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಗೌಡನಹಳ್ಳಿಯ ನಾಲ್ವರ ಕೊಲೆ ಪ್ರಕರಣ: ಐವರ ಬಂಧನ, ಉಳಿದವರಿಗೆ ಶೋಧ

Last Updated 29 ಮೇ 2021, 2:56 IST
ಅಕ್ಷರ ಗಾತ್ರ

ಹಾಸನ: ‘ಹೊಳೆನರಸೀಪುರ ತಾಲ್ಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ಮೇ 24ರಂದು ಆಸ್ತಿ ವಿಚಾರವಾಗಿ ನಡೆದಿದ್ದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನರನ್ನು ವಶಕ್ಕೆ ಪಡೆದಿದ್ದು, ಇನ್ನಷ್ಟು ಆರೋಪಿಗಳ ಬಂಧನವಾಗಬೇಕಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‍ಗೌಡ ತಿಳಿಸಿದರು.

‘ಗ್ರಾಮದ ಮಲ್ಲೇಶ್ ಹಾಗೂ ಪಾಪಣ್ಣ ಎಂಬ ದಾಯಾದಿಗಳ ನಡುವೆ ಉಂಟಾದ ಕಲಹದಲ್ಲಿ ಅವರಿಬ್ಬರು ಸೇರಿ ಮಲ್ಲೇಶ್ ಅವರ ಕಿರಿಯ ಸಹೋದರನ ಮಗ ಮಂಜೇಶ್ ಹಾಗೂ ಅಳಿಯ ರವಿಕುಮಾರ್ ಹತರಾಗಿದ್ದರು. 2.4 ಎಕರೆ ಜಮೀನಿಗಾಗಿ ನಡೆದ ಜಗಳ ತಾರಕಕ್ಕೇರಿತ್ತು’ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.

‘ರಾಜೇಗೌಡರ ಎಬುವವರ ಪುತ್ರರಾದ ರವಿ, ಪ್ರದೀಪ್, ಸಣ್ಣೇಗೌಡರ ಮಗ ಯೋಗ, ಸಚಿನ್ ಹಾಗೂ ಭಾನುಪ್ರಕಾಶ್ ಎಂಬುವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದರು.

‘ಮಲ್ಲೇಶ್ ಹಾಗೂ ಸ್ವಾಮಿಗೌಡ ಅವರಿಗೆ ಪಿತ್ರಾರ್ಜಿತ ಆಸ್ತಿ ಭಾಗ ಮಾಡುವಾಗ ವ್ಯಾಜ್ಯ ನ್ಯಾಯಾಲಯ ಮೆಟ್ಟಿಲೇರಿತ್ತು. ಹತ್ತು ವರ್ಷಗಳ ಹಿಂದೆಯೇ ಎಲ್ಲ ಆಸ್ತಿ ಮಲ್ಲೇಶ್‍ಗೆ ಸೇರಿದೆ ಎಂದು ನ್ಯಾಯಾಲಯ ಹೇಳಿತ್ತು. ಕೋರ್ಟ್ ಆದೇಶಕ್ಕೆ ಮನ್ನಣೆ ನೀಡಿದ್ದ ಸ್ವಾಮಿಗೌಡ ಆಸ್ತಿ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಸ್ವಾಮಿಗೌಡರ ಪುತ್ರ ಪಾಪಣ್ಣ ತಮಗೂ ಆಸ್ತಿಯಲ್ಲಿ ಪಾಲು ಬೇಕೆಂದು ಆಗಾಗ ಗಲಾಟೆ ನಡೆಸುತ್ತಿದ್ದ. ಈ ಸಂಬಂಧ ಕೆಲ ದಿನಗಳ ಹಿಂದಷ್ಟೇ ರಾಜಿ ಸಂಧಾನ ನಡೆದಿತ್ತು. ಆದರೆ, ಹಿರಿಯರ ಸಮ್ಮುಖದಲ್ಲಿ ಆಗಿದ್ದ ಮಾತುಕತೆಯನ್ನು ಮುರಿದು ಪಾಪಣ್ಣ ಮೇ 24ರಂದು ಜಗಳ ತೆಗೆದಿದ್ದ’ ಎಂದು ಹೇಳಿದರು.

‘ಮಲ್ಲೇಶ್ ಅವರ ಮಗ ಬಸವರಾಜ್ ಟ್ರ‍್ಯಾಕ್ಟರ್‌ನಲ್ಲಿ ಉಳುಮೆ ಮಾಡುತ್ತಿದ್ದಾಗ ಪಾಪಣ್ಣ, ಸಹೋದರರಾದ ಪ್ರದೀಪ್, ಯೋಗೇಶ್ ಹಾಗೂ ಪುತ್ರರಾದ ಪ್ರದೀಪ್, ಸಂತೋಷ್, ರವಿಕುಮಾರ್, ನಿಂಗಾಜಮ್ಮ ಬಂದು ಕಾರ್ಯಕ್ಕೆ ಅಡ್ಡಿಪಡಿಸಿದ್ದರು. ಗಲಾಟೆ ವಿಚಾರ ತಿಳಿದು ಸ್ಥಳಕ್ಕೆ ಬಂದ ಮಲ್ಲೇಶ್, ಮಂಜೇಶ್ ಹಾಗೂ ರವಿಕುಮಾರ್ ಜತೆಗೆ ತೀವ್ರ ವಾಗ್ವಾದ ನಡೆಸಿ ಪಾಪಣ್ಣ ಕಬ್ಬಿಣದ ಸ್ಪ್ಯಾನರ್‌ನಿಂದ ಮೂವರಿಗೂ ಚುಚ್ಚಿ ಗಂಭೀರ ಗಾಯಗೊಳಿಸಿದ್ದ. ನಿಂಗಾಜಮ್ಮ ಎಂಬುವವರು ಜಗಳ ಬಿಡಿಸಲು ಬಂದ ಅಕ್ಷತಾ ಎಂಬ ಮಗುವಿಗೆ ರೇಜರ್‌ನಿಂದ ಕುಯ್ದಿದ್ದಳು. ಗಂಭೀರ ಗಾಯಾಳುಗಳಾಗಿದ್ದರಿಂದ ತಕ್ಷಣವೇ ತಾಲ್ಲೂಕು ಆಸ್ಪತ್ರೆಗೆ ಕರೆ ತರಲಾಯಿತಾದರೂ ಮೂವರು ಪ್ರಾಣ ಕಳೆದುಕೊಂಡಿದ್ದರು. ಅಕ್ಷತಾ ಚಿಕಿತ್ಸೆ ಪಡೆಯುತ್ತಿದ್ದಾಳೆ’ ಎಂದರು.

ಬೆಂಗಳೂರಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಮಲ್ಲೇಶ್ ಅವರ ಅಳಿಯ ಲಾಕ್‍ಡೌನ್ ಕಾರಣಕ್ಕೆ ಮಾರಗೊಡನಹಳ್ಳಿಗೆ ಬಂದಿದ್ದ. ಗಲಾಟೆಯಾಗುತ್ತಿದ್ದ ಕಾರಣಕ್ಕೆ ಸ್ಥಳಕ್ಕೆ ತೆರಳಿ ಜೀವ ಕಳೆದುಕೊಂಡಿದ್ದಾನೆ. ಆತನ ಸ್ನೇಹಿತ ಭಾನುಪ್ರಕಾಶ್ ಸ್ಥಳದಲ್ಲೇ ಇದ್ದ ಕಾರಣ ಸ್ನೇಹಿತನ ಮೇಲೆ ನಡೆದ ಹಲ್ಲೆಯಿಂದ ಆಕ್ರೋಶಗೊಂಡ ಪಾಪಣ್ಣನಿಂದ ಸ್ಪ್ಯಾನರ್‌ ಕಸಿದುಕೊಂಡು ಆತನನ್ನು ಹೊಡೆದಿದ್ದಾನೆ. ಪಾಪಣ್ಣನ ಮೇಲೆ ಹಲ್ಲೆ ನಡೆಸಿದವರ ಪತ್ತೆ ಕಾರ್ಯ ಸವಾಲಿನದಾಗಿತ್ತು ಎಂದು ತಿಳಿಸಿದರು.

‘ಮೇ 24ರ ಸೋಮವಾರ ಎಲ್ಲ ಪಿಎಸ್‍ಐ, ಡಿವೈಎಸ್ಪಿಗಳಿಗೆ ಸಭೆ ಹಮ್ಮಿಕೊಂಡಿದ್ದರಿಂದ ಗಲಾಟೆ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹೆಡ್ ಕಾನ್‌ಸ್ಟೆಬಲ್ ಅವರನ್ನು ಕಳುಹಿಸಿ ಕೊಡಲಾಗಿತ್ತು. ಈ ಸಂಬಂಧ ಎಫ್‍ಐಆರ್ ಕೂಡಾ ದಾಖಲಾಗಿತ್ತು. ಆದರೆ, ಪಾಪಣ್ಣ ಅವರ ಆಕ್ರೋಶ ದಾಯಾದಿಗಳ ಪ್ರಾಣ ತೆಗೆಯಿತು ಮಾತ್ರವಲ್ಲದೆ ತಮ್ಮ ಪ್ರಾಣಕ್ಕೂ ಕುತ್ತು ತಂದಿತು’ ಎಂದರು.

ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಹೊಳೆನರಸೀಪುರ ವೃತ್ತ ನಿರೀಕ್ಷಕ ಆರ್.ಪಿ. ಅಶೋಕ್, ಪಿಎಸ್‍ಐ ವಿನಯ್, ಮೋಹನ್ ಕೃಷ್ಣ ಹಾಗೂ ಸಿಬ್ಬಂದಿಯನ್ನು ಎಸ್ಪಿ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT