ಮಂಗಳವಾರ, ಜೂನ್ 28, 2022
23 °C

31ರಿಂದ ಮಂಗಳೂರಿನಲ್ಲಿ ಮುಸ್ಲಿಂ ಸಮಾವೇಶ: ಧರ್ಮೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಮಂಗಳೂರಿನ ಪುರಭವನದಲ್ಲಿ ಮೇ 31 ಮತ್ತು ಜೂನ್ 1ರಂದು ಮುಸ್ಲಿಂ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಸಿಪಿಎಂ ಕಾರ್ಯದರ್ಶಿ ಧರ್ಮೇಶ್ ತಿಳಿಸಿದರು.

ಜಾತ್ಯಾತೀತತೆ, ಸಬಲೀಕರಣ ಮತ್ತು ಮುನ್ನಡೆ ಎಂಬ ಘೋಷಣೆಯೊಂದಿಗೆ ಏರ್ಪಡಿಸಿರುವ ಸಮಾವೇಶವನ್ನು ಕೇರಳ ಮಾಜಿ ಸಚಿವ ಡಾ. ಕೆ.ಟಿ.ಜಲೀಲ್ ಉದ್ಘಾಟಿಸಲಿದ್ದು, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಅಧ್ಯಕ್ಷ ಮಾವಳ್ಳಿ ಶಂಕರ್, ಸಾಹಿತಿ ಡಾ. ಕೆ. ಶರೀಫ್ ಭಾಗವಹಿಸಲಿದ್ದಾರೆ. ಕರ್ನಾಟಕದಲ್ಲಿ ಕೋಮುವಾದ ಮತ್ತು ಮುಸ್ಲಿಮರ ಸ್ಥಿತಿಗತಿ ಕುರಿತು ನಡೆಯುವ ಗೋಷ್ಠಿಯಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಚಂದ್ರ ಪೂಜಾರಿ, ಪತ್ರಕರ್ತ ಬಿ.ಎಂ. ಹನೀಫ್ ಮತ್ತು ಚಿಂತಕ ಬಿ. ಪೀರ್ ಬಾಷಾ ವಿಷಯ ಮಂಡಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಅಸಹಾಯಕ, ದಮನಿತ, ಆಳುವ ಜನಗಳ ಅನಾದರಕ್ಕೆ ಗುರಿಯಾದ ಮುಸ್ಲಿಂ ಸಮುದಾಯದ ನೈಜ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಬೇಕು. ನೋವು, ನಲಿವು, ಅಪಪ್ರಚಾರದ ವಾಸ್ತವಗಳನ್ನು ಜನರ ಮುಂದಿಡಬೇಕು. ಸಮುದಾಯಕ್ಕೆ ಆತ್ಮ ವಿಶ್ವಾಸ ತುಂಬುವ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ನ್ಯಾಯಯುತ ಪಾಲು ಒದಗಿಸಿಕೊಡಲು ಸಂಘಟಿತ ಪ್ರಯತ್ನ ನಡೆಸಬೇಕೆಂಬ ಉದ್ದೇಶದೊಂದಿಗೆ ಸಮಾವೇಶ ಹಮ್ಮಿಕೊಂಡಿದೆ’ ಎಂದರು.

‘ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 15ರಷ್ಟಿರುವ ಮುಸ್ಲಿಂ ಸಮುದಾಯ ಪ್ರಭುತ್ವ ಪ್ರೇರಿತ ದ್ವೇಷ ರಾಜಕಾರಣಕ್ಕೆ ಗುರಿಯಾಗಿ ಯಾತನೆ ಅನುಭವಿಸುತ್ತಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ಆರ್ಥಿಕ ಸ್ಥಿತಿಗತಿಗಳಲ್ಲಿ ಶೋಷಿತ ದಲಿತ ಸಮುದಾಯಕ್ಕಿಂತಲೂ ಹಿಂದುಳಿದಿದ್ದಾರೆ ಎಂದು ಜಸ್ಟಿಸ್ ಸಾಚಾರ್ ವರದಿ ಅಂಕಿ ಅಂಶಗಳ ಸಹಿತ ವರದಿ ಮಾಡಿದೆ. ಹುಬ್ಬಳ್ಳಿ ಈದ್ಗಾ, ಬಾಬಾ ಬುಡನ್‍ಗಿರಿ, ಲವ್ ಜಿಹಾದ್ ಮುಂತಾದ ವಿವಾದಗಳ ಕಾಲ ದಾಟಿ ಈಗ ನೇರವಾಗಿ ಬಹಿಷ್ಕಾರ ಅಭಿಯಾನಕ್ಕೆ ಮುಸ್ಲಿಂ ದ್ವೇಷದ ರಾಜಕಾರಣ ತಲುಪಿದೆ. ರಾಜ್ಯದ ಬಿಜೆಪಿ ಸರ್ಕಾರ ತನ್ನ ಆಡಳಿತ ವೈಫಲ್ಯ ಮುಚ್ಚಿ ಹಾಕಲು ಪೂರ್ತಿಯಾಗಿ ಕೋಮುವಾದದ ಮೊರೆ ಹೋಗಿದೆ’ ಎಂದು ಆರೋಪಿಸಿದರು.

‘ಹಿಜಾಬ್ ವಿವಾದದ ನಂತರ ಜಾತ್ರೆ, ಸಂತೆಗಳಲ್ಲಿ ಅವರ ಅಂಗಡಿ ಇಡಬಾರದು ಎಂಬ ಅಭಿಯಾನ ಸಹಜ ಸಂಬಂಧಗಳನ್ನು ಹಾಳು ಮಾಡುತ್ತಿವೆ. ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟ ಮುಸ್ಲಿಮರಿಗೆ, ನರಗುಂದದಲ್ಲಿ ಕೋಮುವಾದಿ ಶಕ್ತಿಗಳಿಂದ ಕೊಲೆಯಾದ ಅಮಾಯಕ ಯುವಕ ಸಮೀರ್‌ಗೆ ಸರ್ಕಾರ ಯಾವುದೇ ಪರಿಹಾರ ಧನ ವಿತರಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಆಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಶಿರ್ ಅಹಮದ್, ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಬ್, ಕರ್ನಾಟಕ ವೀರ ಕನ್ನಡಿಗ ಟಿಪ್ಪು ಸೇನೆ ಜಿಲ್ಲಾ  ಉಪಾಧ್ಯಕ್ಷ ಜಮೀರ್ ಖಾನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು