ಮಂಗಳವಾರ, ಮೇ 18, 2021
23 °C
ಬಿತ್ತನೆ ಬೀಜ ಕೊರತೆ ಇಲ್ಲ, ಮುಂಗಾರಿಗೆ ಜಮೀನು ಹದ

ಮುಸುಕಿನ ಜೋಳಕ್ಕೆ ಅಪಾರ ಬೇಡಿಕೆ

ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

ಹಾಸನ ತಾಲ್ಲೂಕಿನಲ್ಲಿ ರಾಗಿ ಬಿತ್ತನೆಗೆ ಭೂಮಿ ಹದ ಮಾಡುತ್ತಿರುವ ದೃಶ್ಯ.

ಹಾಸನ: ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಭೂಮಿ ಹದಗೊಳಿಸುವಲ್ಲಿ ರೈತರು ನಿರತರಾಗಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಒಟ್ಟು 2.60 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ ಈವರೆಗೂ 73,698 ಹೆಕ್ಟೇರ್‌ ಬಿತ್ತನೆ ಆಗಿದ್ದು, ಕಳೆದ ವರ್ಷಕ್ಕೆ ಹೊಲಿಸಿದರೆ ಶೇಕಡಾ 10 ಕಡಿಮೆಯಾಗಿದೆ.

ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದ ಬಿತ್ತನೆ ಕಾರ್ಯ ವಿಳಂಬವಾಗಿದ್ದು, ಈಗ ಮಳೆ ಬಿಡುವು ನೀಡಿರುವುದರಿಂದ ಜಮೀನು ಹದ ಮಾಡಿ ಬಿತ್ತನೆ ಕಾರ್ಯಕ್ಕೆ ಭೂಮಿ ಸಿದ್ದಗೊಳಿಸಲಾಗುತ್ತಿದೆ.

ಜುಲೈ ಮೊದಲ ವಾರದಿಂದಲೇ ಬಿತ್ತನೆ ಕಾರ್ಯ ಆರಂಭಗೊಳ್ಳಲಿರುವ ಕಾರಣ ಮುಸುಕಿನ ಜೋಳ ಬಿತ್ತನೆ ಬೀಜಕ್ಕೆ ಅಪಾರ ಬೇಡಿಕೆ ಸೃಷ್ಟಿಯಾಗಿದೆ. ಕೃಷಿ ಇಲಾಖೆ ಅಗತ್ಯ ಪ್ರಮಾಣದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ.

ಜಿಲ್ಲೆಯಲ್ಲಿ ಹೇಮಾವತಿ, ವಾಟೆಹೊಳೆ, ಯಗಚಿ ಜಲಾಶಯ ಇದ್ದರೂ 2 ಲಕ್ಷ ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶವಾಗಿದೆ. 50 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಇದು ಜಲಾಶಯದ ನೀರಿನ ಆಧಾರದ ಮೇಲೆ ನಿರ್ಧಾರವಾಗುತ್ತದೆ.

ಮುಸುಕಿನ ಜೋಳ, ರಾಗಿ, ಭತ್ತ ಜಿಲ್ಲೆಯ ಪ್ರಮುಖ ಬೆಳೆಗಳು. 70 ಸಾವಿರ ಹೆಕ್ಟೇರ್‌ ರಾಗಿ ಬಿತ್ತನೆಗೆ 80 ಹೆಕ್ಟೇರ್ , 50 ಸಾವಿರ ಹೆಕ್ಟೇರ್‌ ಭತ್ತ ಬಿತ್ತನೆ ಪೈಕಿ 80 ಹೆಕ್ಟೇರ್ ಹಾಗೂ ದ್ವಿದಳ ಧಾನ್ಯ 35 ಸಾವಿರ ಹೆಕ್ಟೇರ್‌ ಗುರಿ ಪೈಕಿ 23 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ವಾಣಿಜ್ಯ ಬೆಳೆಗಳಾದ ಕಬ್ಬು, ತಂಬಾಕು 12,140 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

ಪ್ರಸಕ್ತ ಹಂಗಾಮಿನಲ್ಲಿ 80 ಸಾವಿರ ಹೆಕ್ಟೇರ್‌ ಮುಸುಕಿನ ಜೋಳ ಬಿತ್ತನೆ ಗುರಿ ಪೈಕಿ 36,504 ಹೆಕ್ಟೇರ್‌ಲ್ಲಿ ಬಿತ್ತನೆ ಆಗಿದೆ. ಇದು 135 ದಿನಗಳ ಬೆಳೆಯಾಗಿದ್ದು, ಬಿತ್ತನೆ ಮಾಡಿ, ರಸಗೊಬ್ಬರ ಹಾಕಿದ ಬಳಿಕ ರೈತರು ಕೊಯ್ಲು ಸಂದರ್ಭ ಇತ್ತ ಸುಳಿಯುತ್ತಾರೆ.

ಆಲೂರು–3,300 ಹೆಕ್ಟೇರ್‌, ಅರಕಲಗೂಡು–5,240 ಹೆಕ್ಟೇರ್‌, ಅರಸೀಕೆರೆ–2,870 ಹೆಕ್ಟೇರ್‌, ಬೇಲೂರು–11,675 ಹೆಕ್ಟೇರ್‌, ಹೊಳೆನರಸೀಪುರ–3,775 ಹೆಕ್ಟೇರ್, ಚನ್ನರಾಯಪಟ್ಟಣ–20210 ಹೆಕ್ಟೇರ್‌, ಹಾಸನ–6769 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ.

ಹೈಬ್ರಿಡ್‌ ತಳಿಗಳಾದ ಗಂಗಾ ಕಾವೇರಿ, ಪಯನಿರ್‌, ಸಿಪಿ ಗೆ ಹೆಚ್ಚು ಬೇಡಿಕೆ ಇದೆ. ಐದು ಕೆ.ಜಿ. ಬ್ಯಾಗ್‌ ₹ 1100 ರಿಂದ ₹ 1200 ಕ್ಕೆ ಮಾರಾಟವಾಗುತ್ತಿದೆ.

‘ಬೆಳೆ ನಷ್ಟದಿಂದ ಶುಂಠಿ, ಆಲೂಗೆಡ್ಡೆ ಬಿತ್ತನೆ ಪ್ರದೇಶ ಕಡಿಮೆ ಆಗುತ್ತಿದೆ. ಹಾಗಾಗಿ ರೈತರು ಕಡಿಮೆ ಅವಧಿಯಲ್ಲಿ ಬೆಳೆಯುವ ಮುಸುಕಿನ ಜೋಳದತ್ತ ಹೆಚ್ಚು ಕೇಂದ್ರಕರಿಸುತ್ತಿದ್ದಾರೆ. ಎಕರೆಗೆ 20 ಕ್ವಿಂಟಲ್‌ ಇಳುವರಿ ಬರುತ್ತದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಗೆ ₹ 1300–₹ 1400 ದರ ಇದೆ. ₹ 8 ರಿಂದ 10 ಸಾವಿರ ಖರ್ಚು ಮಾಡಿದರೆ, ₹ 25 ಸಾವಿರ ಆದಾಯ ಗಳಿಸಬಹುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮದುಸೂದನ್ ತಿಳಿಸಿದರು.

ಈಗಾಗಲೇ ಬಿತ್ತನೆ ಬೀಜ 10,328 ಕ್ವಿಂಟಲ್‌ ಸರಬರಾಜು ಆಗಿದ್ದು, ಇದರಲ್ಲಿ 57,494 ರೈತರಿಗೆ 7,036 ಕ್ವಿಂಟಲ್‌ ವಿತರಿಸಲಾಗಿದೆ. ರೈತರು ಕೃಷಿ ಇಲಾಖೆಯಿಂದ ಮಾತ್ರ ಬಿತ್ತನೆ ಬೀಜ ಕೊಳ್ಳುವುದಿಲ್ಲ. ರೈತರೇ ಬೆಳೆದುಕೊಂಡಿರುವ ಬಿತ್ತನೆ ಬೀಜವನ್ನೂ ಪರಸ್ಪರ ಹಂಚಿಕೊಳ್ಳುವುದು ಉಂಟು.

ಮುಂಗಾರಿಗೆ 1,14,347 ಟನ್‌ ರಸಗೊಬ್ಬರ ನಿಗದಿಯಾಗಿದ್ದು, ಈವರೆಗೆ 26,501 ಟನ್‌ ಪೂರೈಕೆಯಾಗಿದೆ. 20 ಸಾವಿರ ಟನ್‌ ದಾಸ್ತಾನು ಇರುವುದರಿಂದ ಸದ್ಯಕ್ಕೆ ಕೊರತೆ ಇಲ್ಲ.

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.