ಮಂಗಳವಾರ, ಅಕ್ಟೋಬರ್ 19, 2021
22 °C
ಮಾತೃಸಂಸ್ಥೆ ವಿರುದ್ಧವೇ ಮಾತನಾಡುವವರ ಮನಸ್ಥಿತಿ ಅರ್ಥ ಮಾಡಿಕೊಳ್ಳಿ: ಪ್ರೀತಂ

‘ಜೆಡಿಎಸ್‌ ಪರ ಮೃದುಧೋರಣೆ ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಆರ್‌ಎಸ್‌ಎಸ್ ಕುರಿತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಶಾಸಕ ಪ್ರೀತಂ ಜೆ.ಗೌಡ, ಜೆಡಿಎಸ್ ಬಗ್ಗೆ ಮೃದು ಧೋರಣೆ ತಳೆಯುವ ಸ್ವಪಕ್ಷೀಯ ನಾಯಕರನ್ನೂ ವಿರೋಧಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾತೃಸಂಸ್ಥೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದ ಮೇಲೆ ಅವರ ಬಗ್ಗೆ ಎಚ್ಚರದಿಂದ ಇರಬೇಕು. ಇದು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ಒಂದು ಪಾಠ. ನಮ್ಮ ಕೆಲ ಶಾಸಕರು, ಸಚಿವರಾದಿಯಾಗಿ ಅನೇಕರು ಅವರನ್ನು ಓಲೈಸುತ್ತಿದ್ದರು. ಈಗ ಜೆಡಿಎಸ್ ಅಂತರಂಗ ಏನೆಂಬುದು ಬಹಿರಂಗವಾಗಿದೆ. ಮುಂದೆಯಾದರೂ ಅವರ ಪರ ಮೃದು ಧೋರಣೆ ತಳೆಯುವುದನ್ನು ನಿಲ್ಲಿಸಬೇಕು’ ಎಂದು ಕಿಡಿ ಕಾರಿದರು.

‘ನಮ್ಮನ್ನ ಬಳಸಿಕೊಂಡು ಅವರ ಬೇಳೆ ಬೇಯಿಸಿಕೊಂಡ ನಂತರ ನಮ್ಮ ಮಾತೃ ಸಂಸ್ಥೆ ವಿರುದ್ಧವೇ ಮಾತನಾಡುತ್ತಾರೆ. ಇಂಥವರ ಮನಸ್ಥಿತಿ ಮೊದಲು ಅರ್ಥ ಮಾಡಿಕೊಳ್ಳಬೇಕು. ಕೆಲ ಸ್ಥಳೀಯ ಸಂಸ್ಥೆಗಳ ಅಧಿಕಾರ  ಹಿಡಿಯುವುದಕ್ಕೆ ಅವರ ಜೊತೆ ಕೈ ಜೋಡಿಸಿದರೆ ನಮ್ಮ ಬುಡಕ್ಕೇ ಬರುತ್ತಾರೆ ಅನ್ನೋದಕ್ಕೆ ಈ ಬೆಳವಣಿಗೆಯೇ ಸಾಕ್ಷಿ. ಶಾರ್ಟ್ ಟೈಂ ಅಧಿಕಾರಕ್ಕಾಗಿ ಅವರ ಬಗ್ಗೆ ಸಾಫ್ಟ್ ಕಾರ್ನರ್ ತಳೆದರೆ ಜನರಲ್ಲಿ ಗೊಂದಲ ಮೂಡಲಿದೆ’ ಎಂದು ಅಭಿಪ್ರಾಯಪಟ್ಟರು.

‘ರಾಜಕೀಯವಾಗಿ ಯಾವುದೇ ಕಾರಣಕ್ಕೂ ಜೆಡಿಎಸ್‌ ನಂಬಬಾರದು. ಮುಂದೆ ಎಚ್ಚರಿಕೆಯಿಂದ ಇರಬೇಕು. ರಾಜ್ಯ ನಾಯಕರು, ರಾಜ್ಯ ಘಟಕದ ಅಧ್ಯಕ್ಷರು, ಮಂತ್ರಿಗಳು, ಮುಖ್ಯಮಂತ್ರಿಗಳು ಯಾವ್ಯಾವ ಸಂದರ್ಭದಲ್ಲಿ ಜೆಡಿಎಸ್ ಬಗ್ಗೆ ಮೃದು ಧೋರಣೆ ತೋರಿದ್ದರೋ ಅವರೆಲ್ಲರಿಗೂ ಈಗ ಒಂದು ಸಂದೇಶ ನೀಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕೀಯವಾಗಿ ಜೆಡಿಎಸ್‌ನವರು ನಂಬಿಕೆಗೆ ಅರ್ಹರಲ್ಲ ಎನ್ನೋದನ್ನು ಪದೇ ಪದೆ ಸಾಬೀತು ಮಾಡಿದ್ದಾರೆ.
ಅವರ ಮುಖವಾಡ ಕಳಚಿ ಬಿದ್ದಿದೆ ಎಂದರು.

ಇದೇ ವೇಳೆ ಬಿಜೆಪಿಯಲ್ಲಿ ಬಣ ರಾಜಕೀಯ ಕುರಿತ ಪ್ರಶ್ನೆಗೆ, ಅಂಥ ಯಾವುದೇ ಬಣ ಇಲ್ಲ. ಎಲ್ಲರೂ ಸ್ವಯಂ ಸೇವಕರು, ಬಿಜೆಪಿಯ ಕಟ್ಟಾಳುಗಳು. ವಿಷಯಾಧಾರಿತ ಭಿನ್ನಾಭಿಪ್ರಾಯವಿದ್ದರೆ ದೊಡ್ಡವರು ಕುಳಿತು ಮಾತನಾಡುತ್ತಾರೆ. ಎರಡೂ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.