ಶನಿವಾರ, ನವೆಂಬರ್ 28, 2020
25 °C
ನ. 5 ರಿಂದ 16ರ ವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ

ಹಾಸನಾಂಬ ಜಾತ್ರೆ: ಸಾರ್ವಜನಿಕ ದರ್ಶನಕ್ಕೆ ಅವಕಾಶವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನ. 5 ರಿಂದ 16ರ ವರೆಗೆ ನಡೆಯುವ ಹಾಸನಾಂಬ ಮತ್ತು ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಪರಿಶೀಲಿಸಿದರು.

ಸೋಮವಾರ ದೇವಾಲಯದ ಆವರಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು ಹಲವು ಸಲಹೆ, ಸೂಚನೆ ನೀಡಿದರು. ವಿದ್ಯುತ್‌ ದೀಪಾಲಂಕಾರ, ದೇವಸ್ಥಾನದ ಸುತ್ತಲು ಬ್ಯಾರಿಕೇಡ್‌ ಅಳವಡಿಕೆ, ಎಲ್‌ಇಡಿ ಪರದೆಗಳ ಅಳವಡಿಕೆ, ಸಾರ್ವಜನಿಕರಿಗೆ ಆನ್‌ಲೈನ್‌ ಮೂಲಕ ನೇರ ದರ್ಶನಕ್ಕೆ ವ್ಯವಸ್ಥೆಗಳ ಕುರಿತು ಚರ್ಚಿಸಿ, ಯಾವುದೇ ಲೋಪಗಳಿಲ್ಲದಂತೆ ಸಿದ್ಧತೆ ಕೈಗೊಳ್ಳುವಂತೆ ಸೂಚನೆ ನೀಡಿದರು.

ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಆರ್‌.ಗಿರೀಶ್‌, ಕೋವಿಡ್‌-19 ಪ್ರಕರಣ ಹೆಚ್ಚುತ್ತಿರುವುದರಿಂದ ಈ ಬಾರಿ ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ. ದೇವಸ್ಥಾನದ ಬಳಿ ನಾಲ್ಕು ಕಡೆ ಎಲ್‌ಇಡಿ ಪರದೆ ಮೂಲಕ ನೇರ ದರ್ಶನಕ್ಕೆ ಅವಕಾಶ ಮಾಡಲಾಗಿದೆ ಎಂದರು.

ತಣ್ಣೀರುಹಳ್ಳ ಬಳಿಯ ಆಟೊ ನಿಲ್ದಾಣ, ಜಿಲ್ಲಾ ಕ್ರೀಡಾಂಗಣ, ಹೊಸ ಬಸ್‌ ನಿಲ್ದಾಣ, ವಿದ್ಯಾನಗರ ಮಹಿಳಾ ಹಾಸ್ಟೆಲ್‌ ಬಳಿ ಎಲ್‌ಇಡಿ ಪರದೆ ಅಳವಡಿಸಲಾಗುವುದು. 12 ದಿನವೂ ಪೂಜಾ ಕಾರ್ಯಕ್ರಮಗಳ ನೇರ ಪ್ರಸಾರದ ವೆಬ್‌ಸೈಟ್‌ ಲಿಂಕ್‌ ಕಳಿಸಲಾಗುವುದು. ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ‌ ಜಾಲತಾಣಗಳ ಮೂಲಕ‌ವೂ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು, ಅಲ್ಲಿಯೇ ವೀಕ್ಷಣೆ ಮಾಡಬಹುದಾಗಿದೆ ಎಂದು ಹೇಳಿದರು.

ಹಾಸನಾಂಬ ದೇವಸ್ಥಾನದ ಬಾಗಿಲು ತೆರೆಯುವ ಮತ್ತು ಮುಚ್ಚುವ ದಿನ ಆಹ್ವಾನಿತ ಜನಪ್ರತಿನಿಧಿಗಳಿಗೆ ಮಾತ್ರವೇ ಅವಕಾಶ ಇರಲಿದೆ. ನ. 10 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೇವಾಲಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಉಳಿದ ದಿನಗಳಲ್ಲಿ ಪೂಜೆ ನಡೆಯಲಿದೆ. ಕರ್ತವ್ಯ ನಿರತ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರಿಗೂ ದೇವಸ್ಥಾನದ ಒಳಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು.

ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಇಲ್ಲ. ಕರ್ತವ್ಯ ನಿರತ ಸಿಬ್ಬಂದಿಗೆ ಮಾತ್ರ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಊಟ, ಉಪಹಾರ ವ್ಯವಸ್ಥೆ ಮಾಡಲಾಗುವುದು ಎಂದರು.

ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ಗೌಡ ಮಾತನಾಡಿ, ಕರ್ತವ್ಯ ನಿರತ ಸಿಬ್ಬಂದಿ ಯಾವುದೇ ಕಾರಣಕ್ಕೂ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ದರ್ಶನ ಮಾಡಿಸುವ ಭರವಸೆ ನೀಡಬಾರದು. ಸಿಬ್ಬಂದಿಗಳೇ ನಿಯಮ ಪಾಲನೆ ಮಾಡದಿದ್ದರೆ ಸಾರ್ವಜನಿಕರಿಂದ ಟೀಕೆಗೆ ಗುರಿ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್‌, ಡಿವೈಎಸ್‌ಪಿ ಪುಟ್ಟಸ್ವಾಮಿಗೌಡ, ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ತಹಶೀಲ್ದಾರ್‌ ಶಿವಶಂಕರಪ್ಪ, ಪ್ರವಾಸೋದ್ಯಮ ಇಲಾಖೆ ಉಪ ನಿದೇರ್ಶಕ ಸಂಜಯ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.