ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ನಂಬಿ ಎಂದು ಯಾರ ಮನೆಗೂ ಹೋಗಿಲ್ಲ: ಎಚ್.ಡಿ.ರೇವಣ್ಣ

ಶಾಸಕ ಪ್ರೀತಂ ಗೌಡ ವಿರುದ್ಧ ಎಚ್.ಡಿ.ರೇವಣ್ಣ ಪರೋಕ್ಷ ವಾಗ್ದಾಳಿ
Last Updated 8 ಅಕ್ಟೋಬರ್ 2021, 15:19 IST
ಅಕ್ಷರ ಗಾತ್ರ

ಹಾಸನ: ‘ನಾವು ಯಾರ ಮನೆಗೂ ಹೋಗಿ ಜೆಡಿಎಸ್‌ ನಂಬಿ ಎಂದು ಹೇಳುತ್ತಿಲ್ಲ. ಅದರ ಅವಶ್ಯಕತೆಯೂ ಇಲ್ಲ’ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

‘ಜೆಡಿಎಸ್‌ ಪರ ಮೃದುಧೋರಣೆ ಬೇಡ’ ಎಂಬ ಶಾಸಕ ಪ್ರೀತಂ ಗೌಡ ಹೇಳಿಕೆಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಫೋಟೋವನ್ನು ಅವರ ಮನೆಯಲ್ಲಿ ಇಟ್ಟುಕೊಳ್ಳಬೇಕು. 20 ತಿಂಗಳ ಆಡಳಿತ ಬಳಿಕ ಅಧಿಕಾರ ಹಸ್ತಾಂತರ ಮಾಡಲಿಲ್ಲವೆಂದು ದೇವೇಗೌಡರ ವಿರುದ್ಧ ಅಪಪ್ರಚಾರ ಮಾಡಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂತು ಹೊರತು ಸ್ವಂತ ಶಕ್ತಿಯಿಂದಲ್ಲ ’ ಎಂದು ಟೀಕಿಸಿದರು.

ಬಿಜೆಪಿಯಲ್ಲಿ ಎಲ್ಲರೂ ಕೆಟ್ಟವರಿಲ್ಲ. ಒಳ್ಳೆಯವರೂ ಇದ್ದಾರೆ. ಕೆಲವರು ಹಣದ ಮದದಲ್ಲಿ ಮನಸ್ಸಿಗೆ ತೋಚಿದಂತೆ ಮಾತನಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಪ್ರೀತಂ ಗೌಡ ವಿರುದ್ಧ ವಾಗ್ದಾಳಿನಡೆಸಿದರು.

ಕೆಳಗೆ ಬಿದ್ದಾಗ ಮೇಲೆ ಹೇಗೆ ಏಳಬೇಕು ಎಂಬುದು ದೇವೇಗೌಡರಿಗೆ ಗೊತ್ತಿದೆ. 89 ವರ್ಷ ವಯಸ್ಸಾದರೂ ಹೋರಾಟದ ಶಕ್ತಿ ಇದೆ. ಜಿಲ್ಲೆ ಹಾಗೂ ರಾಜ್ಯದಲ್ಲಿ ಮೆಕ್ಕೆಜೋಳ ದರ ಕುಸಿದು ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲವೆಪ್ರಶ್ನಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಯಲ್ಲಿ 60 ಸಿ.ಎಲ್ –7 ಬಾರ್‌ಗಳನ್ನು ತೆರೆಯಲು ಅನುಮತಿ ನೀಡಿದ್ದೆ ಅವರು ಕೊಟ್ಟ ಕೊಡುಗೆ. ‌ಗ್ರಾಮೀಣ ಭಾಗದ ಜನರು ಮದ್ಯಕ್ಕೆ ದಾಸರಾಗಿ ಪತ್ನಿಯ ಮಾಂಗಲ್ಯ, ಹೊಲ ‌ಮನೆ ಮಾರಾಟ ಮಾಡಲಿ ಎಂದು ಬಾರ್‌ಗಳಿಗೆ ಅನುಮತಿ ನೀಡಿದ್ದಾರೆ. ನಗರದ ಹೊಸ ಬಸ್‌ ನಿಲ್ದಾಣ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲು ಬಿಜೆಪಿಗೆ ಆಗಲಿಲ್ಲ. ದುದ್ದ -ಶಾಂತಿಗ್ರಾಮ ರಸ್ತೆ‌, ತಣ್ಣೀರು ಹಳ್ಳ ರಸ್ತೆ, ಹಬೀಬಿಯಾ ಸಾಮಿಲ್ ರಸ್ತೆ ನಿರ್ಮಿಸಲು ಜೆಡಿಎಸ್‌ ಅಧಿಕಾರಕ್ಕೆ ಬರಬೇಕಾಯಿತು ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಪೆಟ್ರೋಲ್‌,‌ ಡೀಸೆಲ್‌, ಎಲ್‌ಪಿಜಿ ಸಿಲಿಂಡರ್ ದರ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಜಿಎಸ್‌ಟಿ ಮೂಲಕ ಪ್ರತಿ ಲೀಟರ್‌ಗೆ ₹60 ರೂ. ತೆರಿಗೆ ನೀಡಬೇಕಾಗಿದೆ. ಇದರ ವಿರುದ್ಧ ಮಾತನಾಡಿದರೆ ಐ.ಟಿ ದಾಳಿ ನಡೆಯುತ್ತದೆ. ಐ.ಟಿ ದಾಳಿ ಬಗ್ಗೆ ಮಾತಾಡುವುದಿಲ್ಲ‌. ಕಾನೂನು ಪ್ರಕಾರ ಏನಿದೆ ಅವರು ಮಾಡುತ್ತಾರೆ ಎಂದರು.

ಸೂರ್ಯಕಾಂತಿ ಎಣ್ಣೆ ಕಲಬೆರಕೆಯಿಂದ ಕೂಡಿದೆ ಎಂಬ ಮಾಹಿತಿ ಇದೆ. ಅದನ್ನು ಸೇವಿಸಿದರೆ ಹೃದಯ ಸಂಬಂಧಿ ಕಾಯಿಲೆ ಬರಲಿದೆ. ಹಾಗಾಗಿ ಮನೆಯಲ್ಲಿ ಕೊಬ್ಬರಿ ಎಣ್ಣೆ ಬಳಸುತ್ತಿದ್ದೇನೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ನಡೆದಿಲ್ಲ. ಸರ್ಕಾರಕ್ಕೆಸಂಬಂಧಪಟ್ಟ ಇಲಾಖೆಗೆ ಅನೇಕ ಬಾರಿ ಪತ್ರ ಬರೆದು ಮನವಿ ಮಾಡಿದ್ದರೂ ಅನುದಾನ ನೀಡಿಲ್ಲ ಎಂದು ಬೇಸರವ್ಯಕ್ತಪಡಿಸಿದರು.

‘ನನಗೆ ವೈರಿಗಳ ಕಾಟದಿಂದ ಹೆಚ್ಚಿದೆ. ಅದಕ್ಕಾಗಿ ಜೇಬಿನಲ್ಲಿ ದೇವರ ಪ್ರಸಾದ ಇಟ್ಟುಕೊಂಡಿರುತ್ತೇನೆ. ಹಾಸನಾಂಬೆ, ಲಕ್ಷ್ಮಿ ನರಸಿಂಹ ಸ್ವಾಮಿ ದರ್ಶ‌ನ ಮಾಡುತ್ತೇನೆ. ಚಾಮುಂಡೇಶ್ವರಿ ದರ್ಶನ ಪಡೆಯುವೆ. ದೇವರ ದರ್ಶನ ಪಡೆಯುತ್ತಿರುವುದರಿಂದ ಯಾರಾದರೂ ಮಾಟ, ಮಂತ್ರ ಮಾಡಿಸಿದ್ದರೆ ತಾಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT