ಬುಧವಾರ, ಫೆಬ್ರವರಿ 24, 2021
23 °C
ಇಡೀ ದಿನ ಸುರಿದ ಮಳೆ, ಮನೆಯಿಂದ ಹೊರಗೆ ಬಾರದ ಜನರು, ಗದ್ದೆಗಳು ಜಾಲವೃತ

ನುಗ್ಗಿದ ನೀರು, ಮನೆ ಗೋಡೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯಲ್ಲೂ ಆಶ್ಲೇಷ ಮಳೆ ಆರ್ಭಟ ಮುಂದುವರಿದಿದೆ. ಮಲೆನಾಡು ಭಾಗದಲ್ಲಿ ಎಡೆ ಬಿಡದೆ ಮಳೆ ಸುರಿಯುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಹಾಸನ, ಬೇಲೂರು, ಆಲೂರು, ಸಕಲೇಶಪುರ ಮತ್ತು ಅರಕಲಗೂಡು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಸಕಲೇಶಪುರ–ಸುಬ್ರಹ್ಮಣ್ಯ ನಡುವಿನ ರೈಲು ಮಾರ್ಗದಲ್ಲಿ ಮತ್ತೊಮ್ಮೆ ಗುಡ್ಡ ಕುಸಿದಿರುವ ಹಿನ್ನಲೆಯಲ್ಲಿ ಸಕಲೇಪುರ–ಮಂಗಳೂರು ನಡುವಿನ ರೈಲು ಸಂಚಾರ ಜುಲೈ 7ರಂದು ಸ್ಥಗಿತಗೊಳಿಸಲಾಗಿತ್ತು.

ಶಿರಿವಾಗಿಲು–ಸುಬ್ರಹ್ಮಣ್ಯ ರೈಲುನಿಲ್ದಾಣದ ನಡುವೆ ಮಣ್ಣು ರೈಲು ಹಳಿಗಳ ಮೇಲೆ ಬಿದ್ದಿದ್ದು, ಕಾರ್ಮಿಕರು ಮಣ್ಣು ತೆರವು ಕಾರ್ಯದಲ್ಲಿ ನಿರತರಾಗಿದ್ದಾರೆ.

ರೈಲು ಹಳಿಗಳ ದುರಸ್ತಿ ಹಾಗೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಯಶವಂತಪುರ –ಮಂಗಳೂರು ಎಕ್ಸ್‌ಪ್ರೆಸ್‌ ಸಂಚಾರ ರದ್ದುಪಡಿಸಲಾಗಿತ್ತು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಹಾಸನದಿಂದ ಬೆಳಗಾವಿ ಬಸ್‌ ಸೇವೆಯನ್ನು ರದ್ದುಪಡಿಸಿದೆ.

ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ ಬೆಳಿಗ್ಗಿಯಿಂದಲೇ ಸುರಿದ ಭಾರಿ ಮಳೆಯಿಂದ ಸಾರ್ವಜನಿಕ ಜೀವನದಲ್ಲಿ ಅಸ್ತವ್ಯಸ್ತವಾಯಿತು.

ಬಿಡುವು ನೀಡಿ ಸುರಿಯುತ್ತಿದ್ದ ಮಳೆಯಿಂದಾಗಿ ನೌಕರರು, ವ್ಯಾಪಾರಿಗಳು ಜೋರು ಮಳೆಯಲ್ಲೇ ಸಂಚರಿಸಬೇಕಾಯಿತು. ರಾತ್ರಿ ಪೂರ್ತಿ ಸುರಿಯಿತು.

ಇಳಿಜಾರು ಪ್ರದೇಶದಲ್ಲಿ ಮಳೆ ನೀರು ಮನೆಯೊಳಗೆ ನುಗ್ಗಿದ ಪರಿಣಾಮ ತೊಂದರೆಯಾಗಿತ್ತು. ಮನೆಯ ಸದಸ್ಯರು ನೀರು ಹೊರ ಹಾಕಲು ಹರಸಾಹಸ ಪಟ್ಟರು.

ನಗರದ ಸಾಲಗಾಮೆ ರಸ್ತೆ ಗುಂಡಿಮಯವಾಗಿರುವ ಪರಿಣಾಮ ಬೈಕ್‌ ಸವಾರರು ಪರದಾಡಿದರು. ಕೆಲವರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಾಯಗೊಂಡರು.

ನಗರದ ಏಳನೇ ವಾರ್ಡ್‌ನಲ್ಲಿ ಶಂಕರ ಮಠ ರಸ್ತೆಯಲ್ಲಿ ಲೆನಿನ್ ಕ್ಲಬ್ ಮುಂಭಾಗ ಭಾರಿ ಗಾತ್ರದ ಮರದ ಕೊಂಬೆ ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಆಗಿತ್ತು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ತಕ್ಷಣ ಅರಣ್ಯ ಇಲಾಖೆ ಹಾಗೂ ನಗರಸಭೆ ಸಿಬ್ಬಂದಿ ಭೇಟಿ ನೀಡಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಚಿಪ್ಪಿನಕಟ್ಟೆ ಸಮೀಪದ ಸಲೀಂ ನಗರದಲ್ಲಿ ಮಂಗಳವಾರ ರಾತ್ರಿ ಮನೆ ಕುಸಿದು ಬಿದ್ದಿದ್ದು, ದವಸ, ಧಾನ್ಯ, ಸಾಮಗ್ರಿಗಳು ಹಾನಿಯಾಗಿದೆ. ಹಳೇ ಬಸ್ ನಿಲ್ದಾಣ, ಹೊಸ ಬಸ್‌ ನಿಲ್ದಾಣ, ಎನ್‌.ಆರ್.ವೃತ್ತದಲ್ಲಿ ನೀರು ನಿಂತು ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು.

ಸಕಲೇಶಪುರ ತಾಲ್ಲೂಕಿನ ಬಹುತೇಕ ಕಡೆ ಧೋ ಎಂದು ಮಳೆ ಸುರಿಯುತ್ತಿರುವುದರಿಂದ ಹೇಮಾವತಿ ನದಿ ಸೇರಿ ಹಳ್ಳ-ಕೊಳ್ಳ ಮೈದುಂಬಿ ಹರಿಯುತ್ತಿವೆ. ತಗ್ಗು ಪ್ರದೇಶ ಸಂಪೂರ್ಣ ಜಲಾವೃತಗೊಂಡಿದ್ದು, ಗದ್ದೆಗಳು ಮುಳುಗಡೆಯಾಗಿವೆ.

ಹತ್ತಾರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಕಾಡಂಚಿನ ಜನರು ಪರದಾಡುವಂತಾಗಿದೆ. ಪಟ್ಟಣದಲ್ಲಿ ಹೇಮಾವತಿ ನದಿಗೆ ಹೊಂದಿ ಕೊಂಡಂತೆ ಇರುವ ಹೊಳೆ ಮಲ್ಲೇಶ್ವರ ದೇವಾಲಯದೊಳಗ್ಗೆ ನೀರು ನುಗ್ಗಿರುವುದರಿಂದ ಬಾಗಿಲು ಮುಚ್ಚಲಾಗಿದೆ. ಪ್ರಸ್ತುತ ಹೇಮಾವತಿ ನದಿಯಲ್ಲಿ 28.317 ಕ್ಯುಸೆಕ್ ನೀರು ಹರಿಯುತ್ತಿದೆ.

ಈ ದೃಶ್ಯ ನೋಡಲು ಸಕಲೇಶಪುರ ಹೇಮಾವತಿ ನದಿಯ ಸೇತುವೆ ಮೇಲೆ ಜನರು ನಿಂತಿದ್ದರು. ಶಿರಾಡಿ ಭಾಗದಲ್ಲಿ ಮತ್ತೆ ಭೂ ಕುಸಿತದ ಭೀತಿ ಎದುರಾಗಿದೆ.

ಬೇಲೂರು ತಾಲ್ಲೂಕಿನಲ್ಲಿ ಅಗಸರಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಬಂದ್ ಆಗಿದೆ. ಪಟ್ಟಣದ ಕುವೆಂಪು ನಗರ ಸೇರಿದಂತೆ ನಾಲ್ಕು ಮನೆ ಕುಸಿದಿವೆ. ವಿದ್ಯುತ್ ಕಂಬ ಧರೆಗುರುಳಿವೆ. ಐತಿಹಾಸಿಕ ವಿಷ್ಣು ಸಮುದ್ರ ಕೆರೆ 10 ವರ್ಷಗಳ ನಂತರ ಕೋಡಿ ಬಿದ್ದಿದೆ.

ಅರಕಲಗೂಡು ತಾಲ್ಲೂಕು ಕೊಡಕಳ್ಳಿಯಲ್ಲಿ ಮನೆ ಕುಸಿದು ಬಿದ್ದಿದ್ದು, ಅಲ್ಲಿದ್ದ ನಿವಾಸಿಗಳು ಅದೃಷ್ಟವಶಾತ್ ಅಪಾಯವಾಗಿಲ್ಲ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು