ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಟ್ಟಿ ಜೆಡಿಎಸ್‌ನ ಆಸ್ತಿ, ಪುಟ್ಟಣ್ಣನಿಂದ ಪಕ್ಷಕ್ಕೆ ಏನೂ ಆಗಬೇಕಿಲ್ಲ: ರೇವಣ್ಣ

Last Updated 31 ಅಕ್ಟೋಬರ್ 2019, 12:11 IST
ಅಕ್ಷರ ಗಾತ್ರ

ಹಾಸನ: ‘ಚನ್ನಪಟ್ಟಣದ ಜೈಲಲ್ಲಿ ಚಡ್ಡಿ ಹಾಕ್ಕೊಂಡ್ ನಿಂತವರನ್ನು ಕರೆ ತಂದು ದೇವೇಗೌಡರು ರಾಜಕೀಯ ಭವಿಷ್ಯ ನೀಡಿದರು. ನೈತಿಕತೆ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ’ ಎಂದು ಜೆಡಿಎಸ್ ತೊರೆಯಲು ಮುಂದಾಗಿರುವ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣಗೆ ಶಾಸಕ ಎಚ್‌.ಡಿ.ರೇವಣ್ಣ ಸವಾಲು ಹಾಕಿದರು.

‘ನಾಲ್ಕು ವರ್ಷಗಳಿಂದ ಪಕ್ಷ ವಿರೋಧ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಎಂಎಲ್‌ಸಿ, ವಿಧಾನ ಪರಿಷತ್‌ ಮಾಡಿದ್ದು ಯಾರು ಎಂಬುದನ್ನು ನೆನಪು ಮಾಡಿಕೊಳ್ಳಲಿ. ಪುಟ್ಟಣ್ಣ ಅವರಿಂದ ಜೆಡಿಎಸ್ ಗೆ ಏನೂ ಆಗಬೇಕಿಲ್ಲ. ಆದರೆ, ಬಸವರಾಜ ಹೊರಟ್ಟಿ ಅವರು ಪಕ್ಷದ‌ ಆಸ್ತಿ. ಸಣ್ಣ ಪುಟ್ಟ ಸಮಸ್ಯೆಗಳನ್ನು ಕುಳಿತು ಬಗೆ ಹರಿಸಿಕೊಳ್ಳುತ್ತೇವೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಎಚ್‌.ಡಿ.ಕುಮಾರಸ್ವಾಮಿ– ಯಡಿಯೂರಪ್ಪ ನಡುವೆ ಒಳ ಒಪ್ಪಂದ ಆಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ‘ ಕುಮಾರಸ್ವಾಮಿ ಅವರು ಬಿಜೆಪಿಗೆ ಜೆಡಿಎಸ್ ಪಕ್ಷ ಬರೆದು ಕೊಡುತ್ತೇವೆ ಎಂದಿಲ್ಲ, ಬಿಜೆಪಿ ಜತೆ ಸೇರಿ ಸರ್ಕಾರ ಮಾಡುತ್ತೇವೆ ಎಂದೂ ಹೇಳಿಲ್ಲ. ನೆರೆ ಸಂತ್ರಸ್ತರ ಹಿತದೃಷ್ಟಿಯಿಂದ ಬಿಜೆಪಿ ಸರ್ಕಾರ ಮುಂದುವರಿಯಲಿ ಎಂದಿದ್ದಾರಷ್ಟೆ. ಕೆಎಂಎಫ್ ಅಧ್ಯಕ್ಷರ ಚುನಾವಣೆಯಲ್ಲಿ ಯಡಿಯೂರಪ್ಪ ಮನೆಗೆ ನಿರ್ದೇಶಕರನ್ನು ಕಳಿಸಿದ್ದು ಯಾರು? ಒಳ ಒಪ್ಪಂದ ಆಗಿದರೇ ನಾನೇ ಯಡಿಯೂರಪ್ಪ ಬಳಿ ಹೋಗಬಹುದಿತ್ತು. ವಿರೋಧ ಪಕ್ಷದ ನಾಯಕರಾಗಿರುವವರು ಜವಾಬ್ದಾರಿಯಿಂದ ಮಾತನಾಡಲಿ‌‌’ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

‘ಸಮ್ಮಿಶ್ರ ‌ಸರ್ಕಾರ ತೆಗೆಯುವ ತಪ್ಪನ್ನು ಕುಮಾರಸ್ವಾಮಿ ಏನು ಮಾಡಿದ್ದರು? ಸಿದ್ದರಾಮಯ್ಯ ಅವರಿಗೆ 14 ಶಾಸಕರನ್ನು ಹಿಡಿದಿಡಲು ಆಗುತ್ತಿರಲಿಲ್ಲವೇ?. ವಿಧಾನಸಭೆ ಚುನಾವಣೆ ವೇಳೆ ನಮ್ಮನ್ನು ಬಿಜೆಪಿಯ ಬಿ ಟೀಂ ಅಂದರು. ನಂತರ ಅವರೇ ನಮ್ಮ ಬಳಿ ಬಂದರು, ನನ್ನಿಂದ ಬೆಂಗಳೂರು ನಗರಕ್ಕೆ ಸರ್ಕಲ್‌ ಇನ್‌ಸ್ಪೆಕ್ಟರ್‌, ಡಿವೈಎಸ್‌ಪಿ ಅವರನ್ನು ವರ್ಗಾವಣೆ ಮಾಡಿಸಲು ಆಗಲಿಲ್ಲ. ನನ್ನನ್ನು ಸೂಪರ್‌ ಸಿ.ಎಂ ಎಂದು ಬಿಂಬಿಸಿದರು’ ಎಂದು ಹೆಸರು ಹೇಳದೆಯೇ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT