ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಲ್ಲಿ ಮೂರು ದಿನ ಖರೀದಿಗೆ ಅವಕಾಶ

ಹಾಸನ ಜಿಲ್ಲೆಯಲ್ಲಿ ಜುಲೈ 12ರ ವರೆಗೆ ಲಾಕ್‌ಡೌನ್‌ ಮುಂದುವರಿಕೆ: ಹಲವರ ಅಸಮಾಧಾನ
Last Updated 5 ಜುಲೈ 2021, 7:13 IST
ಅಕ್ಷರ ಗಾತ್ರ

ಹಾಸನ: ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗದ ಹಿನ್ನೆಲೆ ಜುಲೈ 12 ರ ವರೆಗೂ ಜಿಲ್ಲೆಯಾದ್ಯಂತ ಲಾಕ್‌ಡೌನ್‌ ವಿಸ್ತರಿಸಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅದೇಶಿಸಿದ್ದಾರೆ.

ಇದೇ 5ರ ಬಳಿಕ ಜಿಲ್ಲೆಯಲ್ಲಿ ಲಾಕ್‌ಡೌನ್ ಸಂಪೂರ್ಣ ಸಡಿಲಿಕೆ ಆಗಲಿದೆ ಎಂದು ನಿರೀಕ್ಷಿಸಿದ್ದ ಜನರಿಗೆ ನಿರಾಶೆ ಉಂಟಾಗಿದೆ. ಸೋಮವಾರದಿಂದ ಜುಲೈ 12ರ ವರೆಗೆ ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಅವಕಾಶ ನೀಡಲಾಗಿದೆ. ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಇರಲಿದೆ.

ವೈದ್ಯಕೀಯ ಸೇವೆಗಳು, ನ್ಯಾಯಬೆಲೆ ಅಂಗಡಿಗಳು, ರೈತ ಸಂಪರ್ಕ ಕೇಂದ್ರ ಮತ್ತು ಹಾಲಿನ ಬೂತ್‌ಗಳು ನಿತ್ಯ ತೆರೆಯಲು ಅವಕಾಶವಿದೆ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ, ಸಾರಿಗೆ ಸಂಸ್ಥೆ ಬಸ್‌ ಶೇ 50 ರಷ್ಟು ಹಾಗೂ ಆಟೊ, ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ಇರಲಿದೆ.

ಬ್ಯಾಂಕ್‌, ಅಂಚೆ ಕಚೇರಿ, ಎಲ್‌ಐಸಿ ವ್ಯವಹಾರಗಳು ವಾರದಲ್ಲಿ ಮೂರು ದಿನ ಬೆಳಿಗ್ಗೆ 8 ರಿಂದ 1ರ ವರೆಗೆ ಸಾರ್ವಜನಿಕ ಸೇವೆ ಹಾಗೂ ಮಧ್ಯಾಹ್ನ 2ರವರೆಗೆ ಕಚೇರಿ ಕೆಲಸಕ್ಕೆ ಅನುಮತಿ ಇದೆ.

ಆಹಾರ, ಹಣ್ಣು, ತರಕಾರಿ ಮತ್ತು ಎಲ್ಲಾ ರೀತಿಯ ದಿನಸಿ ಹಾಗೂ ಅಗತ್ಯ ವಸ್ತುಗಳ ಹೋಂ ಡೆಲಿವರಿಗೆ ಮಾತ್ರ ವಾರದ ಎಲ್ಲ ದಿನ ವಿನಾಯಿತಿ ಇದೆ. ರಸಗೊಬ್ಬರ, ಕೀಟನಾಶಕ ಮಾರಾಟ, ಕೃಷಿ ಯಂತ್ರೋಪಕರಣ ಮಳಿಗೆಗಳ ವ್ಯವಹಾರ ಮೂರು ದಿನ ಮಾತ್ರ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2ರ ವರೆಗೆ ನಡೆಸಲು ಅವಕಾಶವಿದೆ.

ಉದ್ಯಾನದಲ್ಲಿ ವಾಯುವಿಹಾರಕ್ಕೆ ತೆರಳಲು ಬೆಳಿಗ್ಗೆ 5 ರಿಂದ 10ರ ವರೆಗೆ ಅವಕಾಶವಿದ್ದು, ಈ ವೇಳೆ ಅಂತರ ಪಾಲನೆ ಕಡ್ಡಾಯವಾಗಿದೆ. ಉದ್ಯಾನಗಳಲ್ಲಿ ಗುಂಪು ಸೇರಲು ಅವಕಾಶವಿಲ್ಲ.

ಎಲ್ಲಾ ಉತ್ಪಾದನ ಘಟಕಗಳು, ಕೈಗಾರಿಕೆಗಳಲ್ಲಿ ಶೇ 50ರಷ್ಟು ಸಿಬ್ಬಂದಿ ಬಳಸಿಕೊಂಡು ಕರ್ತವ್ಯ ನಿರ್ವಹಿಸಬಹುದು. ಗಾರ್ಮೆಂಟ್ಸ್‌ಗಳಲ್ಲಿ ಶೇ 30ರಷ್ಟು ಸಿಬ್ಬಂದಿ ಕರ್ತವ್ಯ ನಿರ್ವಹಿಸಬಹುದು. ತಳ್ಳುವ ಗಾಡಿಯಲ್ಲಿ ತರಕಾರಿ, ಹಣ್ಣು ಮಾರಾಟ ಮಾಡಲು ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಅವಕಾಶವಿದೆ.

ಮದ್ಯದಂಗಡಿಗಳಲ್ಲಿ ವಾರದ ಮೂರು ದಿನ ಮಾತ್ರ ಬೆಳಿಗ್ಗೆ 6 ರಿಂದ 2ರ ವರೆಗೆ ಪಾರ್ಸೆಲ್‌ ನೀಡಲು ಅನುಮತಿ ಇದೆ. ಕಟ್ಟಡ ಕಾಮಗಾರಿಗಳ ಸಾಮಗ್ರಿ ಮಳಿಗೆಗಳು ವಾರದಲ್ಲಿ ಮೂರು ದಿನ ತೆರೆದಿರಲಿವೆ. ಹವಾ ನಿಯಂತ್ರಿತ ಅಂಗಡಿ, ಮಾಲ್‌ ಹೊರತುಪಡಿಸಿ ಎಲ್ಲಾ ರೀತಿಯ ಅಂಗಡಿಗಳನ್ನು ವಾರದಲ್ಲಿ ಮೂರು ದಿನ ನಿಗದಿತ ಸಮಯದ ವರೆಗೆ ತೆರೆಯಬಹುದು.

ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳಿಗೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಆದರೆ ಎಂದಿನಂತೆ ಪೂಜೆ ನಡೆಸಲು ಸಿಬ್ಬಂದಿಗೆ ಅವಕಾಶವಿದ್ದು, ಭಕ್ತರನ್ನು ಸೇರಿಸುವಂತಿಲ್ಲ. ಈಗಾಗಲೇ ನಿಗದಿ ಆಗಿರುವ ಮದುವೆಗಳನ್ನು ಕುಟುಂಬ ಸದಸ್ಯರು, ಸಂಬಂಧಿಕರು ಸೇರಿದಂತೆ 40 ಜನರನ್ನು ಸೇರಿಸಿ ನಡೆಸಲು ಅವಕಾಶವಿದೆ.

‘ಲಾಕ್‌ಡೌನ್‌ ಅವಧಿಯಲ್ಲಿ ಸರಕು ಸಾಗಾಟದ ವಾಹನಗಳನ್ನು ಹೊರತುಪಡಿಸಿ ಯಾವುದೇ ವಾಹನ ಸಂಚಾರ ಹಾಗೂ ವ್ಯಕ್ತಿಗಳ ಓಡಾಟಕ್ಕೆ ಅವಕಾಶವಿಲ್ಲ. ಆದರೂ ಹೊರಗೆ ಬಂದರೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT