ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ

ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ: ‌ದಿಶಾ ಸಭೆಯಲ್ಲಿ ಶಾಸಕ ರೇವಣ್ಣ ಆರೋಪ
Last Updated 19 ನವೆಂಬರ್ 2020, 11:54 IST
ಅಕ್ಷರ ಗಾತ್ರ

ಹಾಸನ: ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಕೆಲ ಅಧಿಕಾರಿಗಳು ಜೈಲಿಗೆ ಹೋಗಬೇಕಾದ ಸ್ಥಿತಿ ಬರಲಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅಧ್ಯಕ್ಷತೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ (ದಿಶಾ) 2ನೇ ದಿನದ ಸಭೆಯಲ್ಲಿ ಮಾತನಾಡಿದರು.

ಕೆಲಸ ಪೂರ್ಣಗೊಳ್ಳದಿದ್ದರೂ ಬೇಕಾದ ಗುತ್ತಿಗೆದಾರರ ಬಿಲ್‌ ನೀಡಲಾಗಿದೆ. ಯಾವ ಕಾಲುವೆಯಲ್ಲಿ ಮಣ್ಣು
ತೆಗೆಯಲಾಗಿದೆ ಎಂಬುದನ್ನು ತಿಳಿಸಲಿ. ಉಪ್ಪಾರ್ ಕನ್‌ಸ್ಟ್ರಕ್ಷನ್‌ಗೆ‌ ₹ 850 ಕೋಟಿ ಬಿಲ್‌ ನೀಡಲಾಗಿದೆ. ನರೇಂದ್ರ ಮೋದಿ ಅವರು ಹಿಂದಿನ ಸಮ್ಮಿಶ್ರ ಸರ್ಕಾರವನ್ನು ಪರ್ಸೆಂಟೆಜ್‌ ಸರ್ಕಾರ ಎಂದು ಟೀಕಿಸಿದ್ದರು. ವರ್ಷದಿಂದ ನೀರಾವರಿ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ ಎಂಬುದು ಎಲ್ಲ ಗೊತ್ತು. ಅಧಿಕಾರಿಗಳನ್ನು ಬಲಿ ಹಾಕುವುದು ಗೊತ್ತು ಎಂದು ಗುಡುಗಿದರು.

ನಗರದ ಹೊಸ ಬಸ್ ನಿಲ್ದಾಣ ಸಮೀಪದ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಭೂಮಿ ಕೊಡಲು ಒಪ್ಪದ ಸಂತ ಫಿಲೋಮಿನಾ ಶಿಕ್ಷಣ ಸಂಸ್ಥೆ ಮುಕ್ಕಾಲು ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ. ಈ ಆರೋಪವನ್ನು ದಾಖಲೆ ಸಮೇತ ಸಾಬೀತುಪಡಿಸುತ್ತೇನೆ, ಸುಳ್ಳಾಗಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ರೇವಣ್ಣ ಸವಾಲು ಹಾಕಿದರು.

ಹೊಸ ಬಸ್ ನಿಲ್ದಾಣ ಸಮೀಪದ ಕಾಮಗಾರಿ ಆರಂಭವಾಗಿ ವರ್ಷ ಕಳೆದರೂ ಪ್ರಗತಿ ಕಂಡಿಲ್ಲ. ಸಂತ ಫಿಲೋಮಿನಾ ಸಂಸ್ಥೆಯಿಂದ ಸರ್ಕಾರಿ ಜಮೀನು ಪಡೆಯಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ಸಾರ್ವಜನಿಕ ಆಸ್ತಿ ಕಬಳಿಸಲು ಸಹಕರಿಸಿದ್ದು ಯಾರು? ಸರ್ಕಾರಿ ಭೂಮಿ ವಾಪಸ್ ಪಡೆಯಲು ನೋಟಿಸ್ ಯಾಕೆ ನೀಡಬೇಕಿತ್ತು. ಚನ್ನರಾಯಪಟ್ಟಣದಲ್ಲಿ ರಸ್ತೆ ಪಕ್ಕ ಮನೆ ಕಟ್ಟಿಕೊಂಡಿದ್ದ ಕುಟುಂಬಗಳನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಿಸಿದ್ದೀರಿ. ಅದೇ ಕಾನೂನು ಹಾಸನದಲ್ಲೂ ಜಾರಿಯಾಗಬೇಕಲ್ಲವೇ ಎಂದು ಪ್ರಶ್ನಿಸಿದರು.

ಬೇಲೂರಿನಿಂದ ಚಿಕ್ಕಮಗಳೂರಿಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕೆಂಬ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕನಸಿನ
ಯೋಜನೆ ನನೆಗುದಿಗೆ ಬಿದ್ದಿದೆ. ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿಲ್ಲ. ರೈಲ್ವೆ ಹಾಗೂ ಎಸ್‍ಎಲ್‍ಒ ಅಧಿಕಾರಿಗಳು ಜಿಲ್ಲಾಧಿಕಾರಿ ಗಮನಕ್ಕೆ ತರದೆ ಎಲ್ಲ ಕೆಲಸ ಮಾಡುತ್ತಿದ್ದಾರೆ. ಆಗುತ್ತಿರುವ ಅನ್ಯಾಯ ಪ್ರಶ್ನಿಸುವುದು ತಪ್ಪು ಎಂದು ಹೇಳಿದರೆ ಏನೂ ಮಾತನಾಡದೆ ಸುಮ್ಮನಿರುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್, ಒತ್ತುವರಿಯಾಗಿರುವ ಜಾಗ ಬಿಟ್ಟುಕೊಡುವಂತೆ ಶಿಕ್ಷಣ ಸಂಸ್ಥೆಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ಅವರು ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯದಿಂದ ತಕರಾರು ಅರ್ಜಿ ಬಂದಿದೆ. ನ. 28 ರಂದು ಪ್ರಕರಣ ವಿಚಾರಣೆ ಇದೆ ಎಂದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಒಂದು ವರ್ಷದಿಂದ ನಾಲ್ಕು ಫಿಲ್ಲರ್ ಅಳವಡಿಸಿದ್ದು ಬಿಟ್ಟರೆ ಮೇಲ್ಸೇತುವೆ ಕಾಮಗಾರಿ ಏನೂ ಆಗಿಲ್ಲ. ಹೀಗಾದರೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವುದು ಹೇಗೆ ಎಂದು ರೈಲ್ವೆ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್ ಅವರನ್ನು ಪ್ರಶ್ನಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೆಂದರೆ ಮೇಲ್ಮಟ್ಟದ ಇಲಾಖೆ, ಗುಣಮಟ್ಟದ ಕೆಲಸಗಳಾಗುತ್ತವೆ ಎಂಬ ನಂಬಿಕೆಯಿತ್ತು. ಆದರೆ, ಈಗ ಮಾಡುತ್ತಿರುವ ಕೆಲಸ ನೋಡಿದರೆ ತಾಲ್ಲೂಕು ಪಂಚಾಯಿತಿಗಳೇ ಒಳ್ಳೆಯದು ಎಂಬಂತಾಗಿದೆ. ಗುತ್ತಿಗೆದಾರ ಯಾರ ಕಣ್ಣಿಗೂ ಬೀಳುವುದಿಲ್ಲ. ಉಪ ಗುತ್ತಿಗೆದಾರರು ಹಣವಿಲ್ಲದೆ ಕೆಲಸ ಮಾಡುವುದಿಲ್ಲ ಎನ್ನುತ್ತಾರೆ ಎಂದು ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್‌ ವಿರುದ್ಧ ಶಾಸಕ ಶಿವಲಿಂಗೇಗೌಡ ಹರಿಹಾಯ್ದರು.

ಅರಸೀಕೆರೆಯಿಂದ ಶಿವಮೊಗ್ಗ ವರೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಎಷ್ಟು ಜಲ್ಲಿ, ಮರಳು, ಸಿಮೆಂಟ್ ಹಾಕುತ್ತಿದ್ದೀರಿ ಎಂಬುದು ಗೊತ್ತಾಗಿದೆ. ಕೆಲಸ ಮುಗಿಯಲಿ ಆ ಮೇಲೆ ಬಂಡವಾಳ ಬಯಲು ಮಾಡುತ್ತೇನೆ. ಆರೋಪ ಸುಳ್ಳಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲೆಸೆದರು.

‘ಸಂಸದರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಮಹತ್ವದ ಸಭೆಗೆ ಎನ್‍ಎಚ್‍ಎಐ ಯೋಜನಾ ನಿರ್ದೇಶಕ ಗಿರೀಶ್ ಗಂಗಾಧರ್ ಬರಬೇಕಿತ್ತು. ನೀವು ಖಾಸಗಿ ಇಂಜಿನಿಯರ್, ಇಲ್ಲಿಗೆ ಬಂದು ಉತ್ತರ ಹೇಳಲು ನೀವ್ಯಾರು? ನೀವು ಸರ್ಕಾರಿ ನೌಕರರಲ್ಲ ಎಂದ ಮೇಲೆ ಇಲ್ಲಿಗೆ ಬರುವ ಅಧಿಕಾರ ಯಾರು ಕೊಟ್ಟರು’ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಮುಂದಿನ ವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಗುಣಮಟ್ಟದ ಸಾಮಗ್ರಿ ಬಳಸದೆ ಇರುವುದು ಗೊತ್ತಾದರೆ ತನಿಖೆಗೆ ಶಿಫಾರಸ್ಸು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT