ಸೋಮವಾರ, ಆಗಸ್ಟ್ 15, 2022
21 °C
ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆಗೆ ಅವಕಾಶ: ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಒಪಿಡಿ ಬಂದ್‌: ಚಿಕಿತ್ಸೆಗೆ ಅಲೆದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೇಂದ್ರ ಸರ್ಕಾರವು ಆಯುರ್ವೇದ ವೈದ್ಯರಿಗೆ ಕೆಲವು ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ಅಲೋಪಥಿ ವೈದ್ಯರು ಶುಕ್ರವಾರ ಹೊರ ರೋಗಿ ವಿಭಾಗದ (ಒಪಿಡಿ)ಸೇವೆ ಸ್ಥಗಿತಗೊಳಿಸಿದ್ದರು.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ), ಇಂಡಿಯನ್ ಡೆಂಟಲ್ ಅಸೋಸಿಯೇಷನ್ (ಐಡಿಎ) ಜಿಲ್ಲಾ ಶಾಖೆ ವತಿಯಿಂದ ನಗರದ ಹೇಮಾವತಿ ಪ್ರತಿಮೆ ಬಳಿ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ದಾದಿಯರು ಕೈಗೆ ಕಪ್ಪುಪಟ್ಟಿ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ತುರ್ತು ಚಿಕಿತ್ಸೆ, ಔಷಧ ಅಂಗಡಿ, ಆಂಬುಲೆನ್ಸ್‌, ಒಳಗೋರಿಗ ವಿಭಾಗದ ಸೇವೆಗಳು ಲಭ್ಯ ಇದ್ದವು. ಬೆಳಗ್ಗೆ 6 ರಿಂದ ಸಂಜೆ 6 ಗಂಟೆ ವರೆಗೆ ಒಪಿಡಿ ಸೇವೆ ಬಂದ್‌ ಆಗಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಗಳು ತೊಂದರೆ ಅನುಭವಿಸಬೇಕಾಯಿತು.

ದೂರದ ಊರುಗಳಿಂದ ಆಸ್ಪತ್ರೆಗಳಿಗೆ ಬಂದಿದ್ದ ರೋಗಿಗಳು ವೈದ್ಯರಿಗಾಗಿ ಕಾದು ಕುಳಿತರು. ಆರು ಗಂಟೆ ಬಳಿಕ ಸೇವೆ ಆರಂಭಗೊಂಡಿತು. ಕೆಲವರು ವೈದ್ಯರಿಗಾಗಿ ಮಧ್ಯಾಹ್ನದವರೆಗೂ ಕಾದು, ನಂತರ ಸರ್ಕಾರಿ ಆಸ್ಪತ್ರೆಗೆ ತೆರಳಿದರು.

ಖಾಸಗಿ ಲ್ಯಾಬ್‌ಗಳು, ಕ್ಲಿನಿಕ್‌ಗಳು ಮುಷ್ಕರಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದವು. ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಲ್ಲದೆ ಬಿಕೋ ಎನ್ನುತ್ತಿದ್ದವು.

ಐಡಿಎ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಕಿರಾಷ್ ಪರ್ತಿಪ್ಪಾಡಿ ಮಾತನಾಡಿ, ಕೇಂದ್ರ ಸರ್ಕಾರ ಆಯುರ್ವೇದ ಶಿಕ್ಷಣ ಪದ್ಧತಿ ಮತ್ತು ಸಂಶೋಧನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯುಷ್ ಇಲಾಖೆಯನ್ನು ತೆರೆದಿದ್ದು, ಈ ರೀತಿಯ ಮಿಶ್ರಿತ ವೈದ್ಯಕೀಯ ಶಿಕ್ಷಣ ನೀಡುವುದರಿಂದ ಅರೆಬೆಂದ ವೈದ್ಯರು ಹೊರಬರುತ್ತಾರೆಯೇ ಹೊರತು ಆಯುರ್ವೇದ ಅಸ್ಮಿತೆ ಮತ್ತು ಬೆಳವಣಿಗೆ ಕಾಣಲು ಸಾಧ್ಯವಿಲ್ಲ. ಅವೈಜ್ಞಾನಿಕವಾಗಿ ವೈದ್ಯ ಪದ್ಧತಿಗಳನ್ನು ಮಿಶ್ರಗೊಳಿಸುವ ಹಿಮ್ಮುಖ ಹೆಜ್ಜೆಯನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದರು.

ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಕೆಲ ಕಾಲ ಪ್ರತಿಭಟನೆ ನಡೆಸಿ, ಡಿ.ಸಿ ಆರ್‌.ಗಿರೀಶ್‌ ಅವರಿಗೆ ಮನವಿ ಸಲ್ಲಿಸಿದರು.

ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಡಾ. ಅಬ್ದುಲ್ ಬಶೀರ್, ಡಾ. ನಾಗರಾಜ, ಐಎಂಎ ಜಿಲ್ಲಾ ಅಧ್ಯಕ್ಷ ಡಾ. ರಮೇಶ್, ಡಾ. ವಾಗೀಶ್, ಡಾ. ತೇಜಸ್ವಿ, ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಕೆ ಸಹದೇವ್, ಡಾ. ವಿವೇಕಾನಂದ, ಡಾ. ಪ್ರವೀಣ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.