ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ತಾಲ್ಲೂಕು ಕೇಂದ್ರಗಳಲ್ಲಿ ಆಮ್ಲಜನಕ ಘಟಕ

ಲಸಿಕೆ ಕೊರತೆ: ಸರ್ಕಾರಕ್ಕೆ ಬೇಡಿಕೆ ಸಲ್ಲಿಕೆ: ಡಿ.ಸಿ
Last Updated 2 ಆಗಸ್ಟ್ 2021, 15:15 IST
ಅಕ್ಷರ ಗಾತ್ರ

ಹಾಸನ: ಕೋವಿಡ್‌ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಂಡಿದ್ದು, ತಾಲ್ಲೂಕು ಕೇಂದ್ರಗಳಲ್ಲಿ ಆಮ್ಲಜನಕ ಘಟಕ ನಿರ್ಮಾಣ ಮಾಡಲಾಗುವುದು ಎಂದುಜಿಲ್ಲಾಧಿಕಾರಿ ಆರ್‌.ಗಿರೀಶ್‌ ಹೇಳಿದರು.

ಆಲೂರಿನಲ್ಲಿ ಜಾಗದ ಸಮಸ್ಯೆ ಇದೆ. ಅದನ್ನು ಹೊರತು ಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಆಮ್ಲಜನಕ ಘಟಕ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಹೊಳೆನರಸೀಪುರದಲ್ಲಿ ಇನ್ನೊಂದು ವಾರದೊಳಗೆ ಘಟಕ ಕಾರ್ಯಾರಂಭ ಮಾಡಲಿದೆ. ಜಿಲ್ಲೆಯಲ್ಲಿ ಸದ್ಯ ಪಾಸಿಟಿವಿಟಿ ದರ ಶೇಕಡಾ 2.06 ಇದ್ದು, ರಾಜ್ಯದಲ್ಲಿ ಹಾಸನ 8ನೇ ಸ್ಥಾನದಲ್ಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸದ್ಯ ಆಷಾಢ ಮಾಸ ಇರುವುದರಿಂದ ಮದುವೆ, ಇತರೆ ಶುಭ ಸಮಾರಂಭ ನಡೆಯುತ್ತಿಲ್ಲ. ಆಷಾಢ ಮುಗಿದ ಬಳಿಕ ನಡೆಯುವ ಮದುವೆಗೆ ನಿರ್ಬಂಧ ಹೇರಲಾಗುವುದು. ಇದಕ್ಕಾಗಿ ಅನುಮತಿ ಕಡ್ಡಾಯಗೊಳಿಸಲಾಗುವುದು. 100 ಮಂದಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ವಿವರಿಸಿದರು.

ತಾಲ್ಲೂಕು ಆಸ್ಪತ್ರೆಗಳಿಗೆ ವೆಂಟಿಲೇಟರ್ ಒದಗಿಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್‌ ಮರಣ ಪ್ರಮಾಣ ಹೆಚ್ಚಿದೆ. ಇತರೆ ಕಾಯಿಲೆಗಳಿಂದ ರೋಗಿಗಳು ನರಳುತ್ತಿರುವುದು ಇದಕ್ಕೆ ಕಾರಣ. ಜಿಲ್ಲೆಗೆ ಅಗತ್ಯ ಲಸಿಕೆ ಪೂರೈಕೆ ನಿರೀಕ್ಷಿತ ಪ್ರಮಾಣದಲ್ಲಿ ನಿತ್ಯವೂ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಲಸಿಕೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದ ಅವರು, ಶೂನ್ಯ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಿಗೆ ಕಡಿಮೆ ಮಾಡಿ ಹಾಸನಕ್ಕೆ ಹೆಚ್ಚಿನ ಲಸಿಕೆ ನೀಡಿ ಎಂದು ವಿನಂತಿ ಮಾಡಲಾಗಿದೆ ಎಂದರು.

ವಿದ್ಯಾರ್ಥಿಗಳಿಗೆ, ಶಾಲಾ-ಕಾಲೇಜು ಬೋಧಕ, ಬೋಧಕೇತರ ಸಿಬ್ಬಂದಿಗೆ ಮೊದಲ ಆದ್ಯತೆ ನೀಡಿ ಎಂದು ಸರ್ಕಾರವೇ ಸೂಚನೆ ನೀಡಿರುವುದರಿಂದ ಆ ನಿಟ್ಟನಲ್ಲಿ ಗಮನ ಹರಿಸಲಾಗಿದೆ. ಈ ನಡುವೆ ಸೂಕ್ತ ಮಾಹಿತಿ ಇಲ್ಲದೆ ಜನರು ಸಾಲುಗಟ್ಟುತ್ತಿರುವ ಹಿನ್ನೆಲೆಯಲ್ಲಿ ದಿನಕ್ಕೆ ಎಷ್ಟುಮಂದಿಗೆ ಲಸಿಕೆ ಕೊಡಬಹುದು ಎಂದು ಟೋಕನ್ ವ್ಯವಸ್ಥೆ ಜಾರಿ ಮಾಡುವಂತೆಸಂಬಂಧಪಟ್ಟವರಿಗೆ ಸೂಚಿಸಲಾಗುವುದು ಎಂದು ವಿವರಿಸಿದರು.

‌ನಗರದ ಹೊಸ ಬಸ್ ನಿಲ್ದಾಣ ಎದುರು ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿಳಂಬವಾಗಿರುವ ಕುರಿತ ಪ್ರಶ್ನೆಗೆ ಜಿಲ್ಲಾಡಳಿತ ಕಡೆಯಿಂದ ಯಾವುದೇ ಕೆಲಸ ಬಾಕಿ ಇಲ್ಲ. ಈ ಸಂಬಂಧ ರೈಲ್ವೆ ಇಲಾಖೆ ಹಾಗೂ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT