ಶುಕ್ರವಾರ, ನವೆಂಬರ್ 27, 2020
23 °C
ಜೆಡಿಎಸ್‌ ಮುಗಿಸಲು ಕಾಂಗ್ರೆಸ್‌, ಬಿಜೆಪಿಯಿಂದ ಸಾಧ್ಯವಿಲ್ಲ: ಶಾಸಕ ಎಚ್.ಡಿ.ರೇವಣ್ಣ

ತಳಮಟ್ಟದಿಂದ ಪಕ್ಷ ಸಂಘಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಆರ್‌.ಆರ್‌ ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಜನತೆ ನೀಡಿದ ತೀರ್ಪು ಒಪ್ಪಿಕೊಂಡು, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲಾಗುವುದು ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸೋತ ಮಾತ್ರಕ್ಕೆ ಪಕ್ಷದ ಕಾರ್ಯಕರ್ತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು.
ಹಿರಿಯರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಎಚ್.ಕೆ.ಕುಮಾರಸ್ವಾಮಿ ಹಾಗೂ ಸಂಸದ ಪ್ರಜ್ವಲ್, ನಿಖಿಲ್ ಅವರೊಂದಿಗೆ ಪಕ್ಷ ಸಂಘಟನೆ ಮಾಡಲಾಗುವುದು. ವಿಧಾನ ಪರಿಷತ್ ಸದಸ್ಯ ತಿಪ್ಪೆಸ್ವಾಮಿ ಅವರೊಂದಿಗೆ ಮಂಗಳವಾರ ಸಂಜೆಯೇ ಶಿರಾಗೆ ತೆರಳಿ ಕಾರ್ಯಕರ್ತರಿಗೆ ಧೈರ್ಯ ಹೇಳಿದ್ದಾನೆ. ಜೆಡಿಎಸ್ ಮುಗಿಸಲು ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಸಾಧ್ಯವಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಗುಡುಗಿದರು.

ಶಿರಾದಲ್ಲಿ ಗೆಲ್ಲುವ ಕುದುರೆ ಕರೆದುಕೊಂಡು ಟಿಕೆಟ್‌ ನೀಡಲಿಲ್ಲ. ಸತ್ಯನಾರಾಯಣ ಅವರನ್ನು ಕ್ಷೇತ್ರದ ಜನತೆ ಮೂರು ಬಾರಿ ಗೆಲ್ಲಿಸಿದ್ದಾರೆ. ಅವರ ಕುಟುಂಬದವರಿಗೆ ಟಿಕೆಟ್‌ ನೀಡದಿದ್ದರೆ ರಾಷ್ಟ್ರೀಯ ಪಕ್ಷಗಳು ಅಪಪ್ರಚಾರ ಮಾಡುತ್ತಿದ್ದವು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್‌ ನೀಡಿದ್ಧೇವೆ. ರಾಜ್ಯ ಸರ್ಕಾರದ ಭ್ರಷ್ಟ ಆಡಳಿತಕ್ಕೆ ಬೇಸತ್ತು ಪಕ್ಷದ ಶೇಕಡಾ 50ರಷ್ಟು ಮತದಾರರು ಮತಗಟ್ಟೆಗೆ ಹೋಗಲಿಲ್ಲ ಎಂದು ವಿವರಿಸಿದರು.

1989ರಲ್ಲಿ ಜೆಡಿಎಸ್‌ ಕೇವಲ ಎರಡು ಸ್ಥಾನ ಗೆದ್ದಿತ್ತು. ಹತ್ತೂವರೆ ತಿಂಗಳ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ
ದೇವೇಗೌಡರು ಗೆಲುವು ಸಾಧಿಸಿರು. 1994ರಲ್ಲಿ ಜೆಡಿಎಸ್‌ 116 ಸ್ಥಾನ ಪಡೆಯಿತು. ಕಾಲ ಹೀಗೆಯೇ ಇರುವುದಿಲ್ಲ. ಜನರೇ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸುವ ಸಮಯ ಬರುತ್ತದೆ. ಶಿರಾ, ಆರ್‌.ಆರ್‌. ನಗರದಲ್ಲಿ ಹಣ ಹಂಚಿಕೆ ಮಾಡಿರುವ ಬಗ್ಗೆ ದೂರು ನೀಡಿದರೂ ಚುನಾವಣಾ ಆಯೋಗ ಕೈಗೊಳ್ಳಲಿಲ್ಲ. ಆರ್‌ಆರ್‌ ನಗರದ ಅಭಿವೃದ್ಧಿಗೆ ₹900 ಕೋಟಿ ನೀಡಲಾಗಿದೆ. ಶಿರಾದಲ್ಲಿ ಕೆರೆ ತುಂಬಿಸುವುದಾಗಿ ಹಾಗೂ ದೇವಸ್ಥಾನ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಕೊಟ್ಟ ಮಾತನ್ನು ಈಡೇರಿಸಬೇಕು ಎಂದರು.

ಆರ್.ಆರ್‌.ನಗರ ಮತ್ತು ಶಿರಾ ಕ್ಷೇತ್ರಕ್ಕೆ ರಾಜ್ಯ ಚುನಾವಣಾಧಿಕಾರಿ ಭೇಟಿ ನೀಡಿದ್ದರೆ ಚುನಾವಣೆ ಹೇಗೆ ನಡೆಯಿತು ಎಂಬುದು ಗೊತ್ತಾಗುತ್ತಿತ್ತು.  ಮತದಾನಕ್ಕೆ ಎರಡು ದಿನ ಮುನ್ನ ಬಿಜೆಪಿ ಸ್ವಯಂ ಸೇವಕರು ತಮ್ಮ ಕರ್ತವ್ಯ ಮಾಡಲು ಅವಕಾಶ ನೀಡಲಾಯಿತು. ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅಲ್ಲೇ ಠಿಕಾಣಿ ಹೂಡಿದರು. ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ, ರಿಟರ್ನಿಂಗ್ ಆಫೀಸರ್‌ ಸಹ ಕ್ರಮ ಕೈಗೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿ.ವೈ.ವಿಜಯೇಂದ್ರ ಚುನಾವಣೆ ನಡೆಸುವುದರಲ್ಲಿ ಚಾಣಕ್ಯ. ಆತ ಹೋದ ಕಡೆಯೆಲ್ಲಾ ಗೆಲುವು ಎಂದು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಆದ್ದರಿಂದ 2023ರ ಚುನಾವಣೆ ಉಸ್ತುವಾರಿಯನ್ನು ಅವರಿಗೆ ವಹಿಸಲಿ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದು ಬೇಡ. ಮೂರು ವರ್ಷ ಅಧಿಕಾರ ಪೂರೈಸಲಿ ಎಂದರು.

ಮುಂಬರುವ ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರದ ಉಪ ಚುನಾವಣೆಗಳಲ್ಲಿ ಅಕ್ರಮ ನಡೆಯದಂತೆ ಕಡಿವಾಣ ಹಾಕಲು
ಚುನಾವಣಾ ಆಯೋಗ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.