ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು: ರೈಲು ಹತ್ತಲು ಪ್ರಯಾಣಿಕರ ಹರಸಾಹಸ

Published 18 ಫೆಬ್ರುವರಿ 2024, 4:45 IST
Last Updated 18 ಫೆಬ್ರುವರಿ 2024, 4:45 IST
ಅಕ್ಷರ ಗಾತ್ರ

ಆಲೂರು: ಪಟ್ಟಣದ ರೈಲು ನಿಲ್ದಾಣದಲ್ಲಿ ಬಹುದಿನಗಳ ನಂತರ ರೈಲುಗಳ ನಿಲುಗಡೆ ಆರಂಭವಾಗಿದೆ. ಹೊರವಲಯದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಜನಸಾಮಾನ್ಯರು, ವಾಹನಗಳು ತಿರುಗಾಡಲು ರಸ್ತೆ ಅಭಿವೃದ್ಧಿ ಪಡಿಸಬೇಕು. ಯಶವಂತಪುರದಿಂದ ಪ್ರತಿದಿನ ಸಂಜೆ 6 ಕ್ಕೆ ಹೊರಟು ಹಾಸನಕ್ಕೆ ರಾತ್ರಿ 9 ಕ್ಕೆ ಬಂದು ನಿಲ್ಲುವ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸಬೇಕು ಎನ್ನುವ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

1977 ರಿಂದ ರೈಲು ಓಡಾಡುತ್ತಿತ್ತು. ಆದರೆ, ಬ್ರಾಡ್‍ಗೇಜ್‍ಗೆ ಪರಿವರ್ತನೆಯಾದ ನಂತರ ಪಟ್ಟಣದಲ್ಲಿ ರೈಲುಗಳು ನಿಲ್ಲುತ್ತಿರಲಿಲ್ಲ. ಜನಸಾಮಾನ್ಯರು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಹೋರಾಟ ಮತ್ತು ಇಲಾಖೆ ಸಚಿವರು, ಅಧಿಕಾರಿಗಳ ಸಹಕಾರದಿಂದ, ಒಂದು ವಾರದಿಂದ ಬೆಂಗಳೂರು-ಮಂಗಳೂರಿಗೆ ಓಡಾಡುತ್ತಿರುವ ರೈಲುಗಳು ಬೆಳಿಗ್ಗೆ 10.20 ಕ್ಕೆ ಮತ್ತು ಸಂಜೆ 4.15 ಕ್ಕೆ ನಿಲ್ಲುತ್ತಿವೆ.

ಆದರೆ ಬೆಳಗಿನ ವೇಳೆಯಲ್ಲಿ ರೈಲಿನಲ್ಲಿ ಬೆಂಗಳೂರು ಕಡೆಗೆ ಪ್ರಯಾಣಿಸಲು ಆಲೂರಿನಿಂದ ಯಾವುದೇ ರೈಲು ಇಲ್ಲ. ಯಶವಂತರಪುರದಿಂದ ಬಂದು ಹಾಸನದಲ್ಲಿ ರಾತ್ರಿ ನಿಲ್ಲುವ ರೈಲು, ಪುನಃ ಯಶವಂತರಪುರಕ್ಕೆ ಹಾಸನದಿಂದ ಬೆಳಿಗ್ಗೆ 7 ಕ್ಕೆ ಹೊರಡಲಿದೆ. ಬೆಂಗಳೂರಿಗೆ ಹೋಗುವ ತಾಲ್ಲೂಕಿನ ಪ್ರಯಾಣಿಕರು ಬೆಳಿಗ್ಗೆ 7 ಕ್ಕೆ ಹಾಸನಕ್ಕೆ ಹೋಗಿ ರೈಲನ್ನು ಹತ್ತಬೇಕಾಗಿದೆ.

ಇದೇ ರೈಲನ್ನು ಯಶವಂತಪುರದಿಂದ ಸಕಲೇಶಪುರದವರೆಗೆ ವಿಸ್ತರಿಸಿದರೆ, ಬೆಂಗಳೂರಿನಿಂದ ಬರುವ ಆಲೂರು ಮತ್ತು ಸಕಲೇಶಪುರದ ಪ್ರಯಾಣಿಕರು ಸ್ವಗ್ರಾಮಕ್ಕೆ ಬಂದಿಳಿಯುತ್ತಾರೆ. ಅದೇ ರೈಲು ಬೆಳಿಗ್ಗೆ ಸಕಲೇಶಪುರದಿಂದ ಯಶವಂತಪುರಕ್ಕೆ ವಾಪಸ್‌ ಹೊರಟರೆ, ಆ ರೈಲಿನಲ್ಲಿ ಸ್ಥಳೀಯರು ಬೆಂಗಳೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ಪುನಃ ಅದೇ ರೈಲಿನಲ್ಲಿ ವಾಪಸ್‌ ಬರಬಹುದು. ಇದರಿಂದ ಪ್ರಯಾಣಿಕರಿಗೂ ಮತ್ತು ರೈಲ್ವೆ ಇಲಾಖೆಗೂ ಅನುಕೂಲವಾಗಲಿದೆ ಎನ್ನುವ ಮಾತು ಜನರದ್ದು. 

ಪಟ್ಟಣದ ಮುಖ್ಯ ರಸ್ತೆಯಿಂದ ಆಶಾ ಬಡಾವಣೆ ಮೂಲಕ ಮತ್ತು ಹುಣಸವಳ್ಳಿ ರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ಓಡಾಡಲು ಎರಡು ದಾರಿಗಳಿವೆ. ಹುಣಸವಳ್ಳಿ ಮುಖ್ಯ ರಸ್ತೆಯಿಂದ ಆಶಾ ಬಡಾವಣೆಗೆ ಹೊಂದಿಕೊಂಡಂತೆ ಸುಮಾರು 500 ಮೀಟರ್‌ ದೂರ ಅಗಲವಾದ ಸಂಪರ್ಕ ರಸ್ತೆ ಇದೆ. ಹುಣಸವಳ್ಳಿ ರಸ್ತೆ ಡಾಂಬರ್‌ ರಸ್ತೆಯಾಗಿದ್ದು, ನಿಲ್ದಾಣಕ್ಕೆ ಹೋಗುವ ಸಂಪರ್ಕ ರಸ್ತೆಗೆ ಡಾಂಬರ್‌ ಹಾಕಿ ಸುಸಜ್ಜಿತಗೊಳಿಸಿದರೆ ವಾಹನಗಳು, ಸಾರ್ವಜನಿಕರು ಓಡಾಡಲು ಅನುಕೂಲವಾಗುತ್ತದೆ.

ರೈಲು ನಿಲ್ದಾಣದ ಬಳಿ ವಾಹನಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸಬೇಕು. ನಿಲ್ದಾಣದ ಹೊರ ಆವರಣ ಮತ್ತು ಸಂಪರ್ಕ ರಸ್ತೆಯಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ ಕಲ್ಪಿಸಬೇಕು
ಹೇಮಂತಕುಮಾರ್ ರಾಧಮ್ಮ, ಜನಸ್ಪಂದನ ವೇದಿಕೆ ಅಧ್ಯಕ್ಷ
ಹುಣಸವಳ್ಳಿ ಸಂಪರ್ಕ ರಸ್ತೆಯನ್ನು ಪರಿಶೀಲಿಸಿ ಡಾಂಬರ್‌ ಹಾಕಲು ಕ್ರಮ ಕೈಗೊಳ್ಳುತ್ತೇನೆ. ಯಶವಂತಪುರ-ಹಾಸನ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸಲು ಸಂಬಂಧಿಸಿದವರ ಜೊತೆಗೆ ಚರ್ಚಿಸಲಾಗುವುದು
ಸಿಮೆಂಟ್ ಮಂಜು, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT