ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಬಂದ್‌: ಪ್ರತಿಭಟನೆಯಲ್ಲಿ ನೊಗಕ್ಕೆ ಹೆಗಲು ಕೊಟ್ಟು ನೇಗಿಲು ಎಳೆದ ರೈತರು

ಭಾರತ್‌ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ, ಮೋದಿ, ಅಮಿತ್ ಷಾ, ಅದಾನಿ ಪ್ರತಿಕೃತಿ ದಹನ
Last Updated 8 ಡಿಸೆಂಬರ್ 2020, 12:09 IST
ಅಕ್ಷರ ಗಾತ್ರ

ಹಾಸನ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಮಂಗಳವಾರ ಕರೆ ನೀಡಿದ್ದ ಭಾರತ್‌ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೆಎಸ್‌ಆರ್‌ಟಿಸಿ ಬಸ್‌, ಆಟೊ ಹಾಗೂ ಇತರೆ ವಾಹನಗಳ ಸಂಚಾರ ಎಂದಿನಂತೆ ಇತ್ತು. ಹೋಟೆಲ್‌, ಅಂಗಡಿ, ಬ್ಯಾಂಕ್‌, ಸರ್ಕಾರಿ ಕಚೇರಿಗಳು ಬಾಗಿಲು ತೆರೆದಿದ್ದವು. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಯಿತು. ವಾರದ ಸಂತೆಗೂ ಬಂದ್‌ ಬಿಸಿ ತಟ್ಟಲಿಲ್ಲ. ದೇವಸ್ಥಾನ , ಚರ್ಚ್ ಹಾಗೂ ಮಸೀದಿಗಳ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಸಂತೇಪೇಟೆ ಎಪಿಎಂಸಿಯಲ್ಲಿ ಬೆಳಗ್ಗೆಯಿಂದ ಎಲ್ಲಾ ಅಂಗಡಿ ಬಂದ್‌ ಆಗಿದ್ದವು. ಸರಕು, ಸಾಗಣೆ ವಾಹನ ಸಂಚಾರ
ಸ್ಥಗಿತಗೊಂಡಿತ್ತು.

ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ನೇತೃತ್ವದಲ್ಲಿ ಅರೆ ಬೆತ್ತಲೆಯಾಗಿ ರೈತರು ಜೋಡೆತ್ತಿನಂತೆ ನೊಗಕ್ಕೆ ಹೆಗಲು ಕೊಟ್ಟು ನೇಗಿಲು ಎಳೆದರು. ರಸ್ತೆಯಲ್ಲಿ ಉರುಳು ಸೇವೆ ಮಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ, ಕಾರ್ಮಿಕ, ಜನಪರ ಸಂಘಟನೆಗಳು, ಸಿಐಟಿಯು, ದಲಿತ ಸಂಘರ್ಷ ಸಮಿತಿ, ಹಸಿರು ಸೇನೆ, ರೈತ ಸಂಘ, ಡಿವೈಎಫ್ ಐ, ಕಾಂಗ್ರೆಸ್‌, ಜೆಡಿಎಸ್‌ ನೇತೃತ್ವದಲ್ಲಿ ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಕೆಲ ಕಾಲ ಎನ್. ಆರ್. ವೃತ್ತದಲ್ಲಿ ರಸ್ತೆತಡೆ ನಡೆಸಿದರು. ಬಳಿಕ ನರೇಂದ್ರ ಮೋದಿ, ಅಮಿತ್‌ ಷಾ, ಮುಕೇಶ್‌ ಅಂಬಾನಿ, ಅದಾನಿ ಹಾಗೂ ನರೇಂದ್ರ ಸಿಂಗ್‌ ತೋಮರ್ ಅವರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಆರ್ ಎಸ್‌ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ‘ಕೇಂದ್ರ ಬಿಜೆಪಿ ಸರ್ಕಾರ ಜನರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ರೈತರು ಹಾಗೂ ಕಾರ್ಮಿಕರನ್ನು ಕೀಳಾಗಿ ಕಾಣುತ್ತಿದೆ. ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಸಿಐಟಿಯು ಕಾರ್ಯದರ್ಶಿ ಧರ್ಮೇಶ್ ಮಾತನಾಡಿ, ‘ಹಲವು ದಿನದಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಬೇಡಿಕೆ ಈಡೇರಿಕೆಗೆ ಮುಂದಾಗಿಲ್ಲ. ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನವಿರೋಧಿ ನೀತಿಗಳನ್ನು ಹೇರಿ, ರೈತರು, ಮಧ್ಯಮ ವರ್ಗದ ಜನರಿಗ ಮೋಸ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ಸಿಐಟಿಯು ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ರೈತರ ಸಮಸ್ಯೆ ಬಗೆ ಹರಿಸಲು ಮೋದಿಗೆ ಸಮಯವಿಲ್ಲ. ವಿದ್ಯುತ್ ಖಾಸಗೀಕರಣ ಮಾಡಲಾಗುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ಕಣತೂರು ಮಂಜೇಗೌಡ, ಅಗಿಲೆ ಯೋಗೀಶ್‌, ಕಾಂಗ್ರೆಸ್ ಮುಖಂಡರಾದ
ದೇವರಾಜೇಗೌಡ, ಅಬ್ದುಲ್ ಅಮೀದ್, ಅಂಬಿಗ ಮಲ್ಲೇಶ್, ಮುಬಶಿರ್ ಅಹಮದ್, ಬಾಳ್ಳು ಗೊಪಾಲ್, ಮನುಕುಮಾರ್, ಸತೀಶ್ ಪಟೇಲ್, ಪೃಥ್ವಿ, ನವೀನ್‍ಕುಮಾರ್, ಅರವಿಂದ್ ,ಬಾಬು, ಕಣಗಲ್ ಮೂರ್ತಿ ಭಾಗವಹಿಸಿದ್ದರು.


ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT