ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಕಾಡಾನೆ ತಡೆಗೆ ‘ರೋಪ್ ಬ್ಯಾರಿಯರ್’

ಮಲೆನಾಡು ಭಾಗದಲ್ಲಿ ನೇಚರ್‌ ಸಂಸ್ಥೆ ಹೊಸ ಪ್ರಯೋಗ; ಬೆಳೆ ರಕ್ಷಣೆಯಿಂದ ರೈತರು ನಿರಾಳ
Last Updated 28 ಮೇ 2022, 4:02 IST
ಅಕ್ಷರ ಗಾತ್ರ

ಹಾಸನ: ಮಾನವ–ವನ್ಯಜೀವಿ ಸಂಘರ್ಷ ತಡೆ ನಿಟ್ಟಿನಲ್ಲಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ನೇಚರ್ ಫೆನ್ಸ್ ಸಂಸ್ಥೆಯು ‘ಜಂಬೂ ರೋಪ್ ಬ್ಯಾರಿಯರ್’ ಎಂಬ ಹೊಸ ಪ್ರಯೋಗ ಮಾಡಿದೆ.

ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಸಮೀಪದ ಕಾಫಿ ಎಸ್ಟೇಟ್‌ವೊಂದರಲ್ಲಿ ನಾಲ್ಕು ಕಿ.ಮೀ. ವ್ಯಾಪ್ತಿಯಲ್ಲಿ ಜಂಬೂ ಬೇಲಿ ಅಳವಡಿಸಿದೆ. 12.5 ಅಡಿ ಎತ್ತರದ ಕಾಂಕ್ರೀಟ್ ಕಂಬಗಳನ್ನು ಕಾಡಂಚಿನಲ್ಲಿ ಹತ್ತು ಮೀಟರ್‌ ಅಂತರದಲ್ಲಿ ನಾಲ್ಕು ಅಡಿ ಆಳವಾಗಿ ನೆಡಲಾಗಿದ್ದು, ಮೇಲೆ ಎಂಟು ಅಡಿ ಎತ್ತರ ಉಳಿಯುತ್ತದೆ. ನಡುವೆ ಐದು ವೈರ್‌ಗಳನ್ನು ಅಳವಡಿಸಿದ್ದು, ಆನೆಗಳಿಗೆ ಕಾಂಕ್ರೀಟ್ ಕಂಬ ತುಂಡರಿಸಲು ಕಷ್ಟ.

ಸೋಲಾರ್ ವಿದ್ಯುತ್ ಶಾಕ್ ಅಳವಡಿಸಿರುವುದರಿಂದ ಮತ್ತು 14 ಎಂಎಂ ವೈಯರ್ ಹತ್ತು ಟನ್ ಭಾರ ಹಾಕಿದ್ದರೂ ತುಂಡಾಗುವುದಿಲ್ಲ. ಕಂಬ ತುಂಡರಿಸಲು ಯತ್ನಿಸಿದರೆ ಶಾಕ್ ಹೊಡೆಯುತ್ತದೆ. ಬ್ಯಾಟರಿಗಳಿಗೆ 3 ರಿಂದ 5 ವರ್ಷ ಗ್ಯಾರಂಟಿ ನೀಡಲಿದೆ. ಜಂಬೂ ರೋಪ್ ಬ್ಯಾರಿಯರ್‌ ನಿರ್ಮಾಣಕ್ಕೆ ಕಿ.ಮೀ. ಗೆ ₹40 ರಿಂದ ₹70 ಲಕ್ಷ ವೆಚ್ಚವಾಗಲಿದೆ.

ಬಾಳ್ಳುಪೇಟೆ ಕಾಫಿ ಎಸ್ಟೇಟ್‌ನಲ್ಲಿ ಪ್ರಾಯೋಗಿಕವಾಗಿ ನಾಲ್ಕು ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಬ್ಯಾರಿಯರ್‌ ಮೂಲಕ ಸಣ್ಣ ಪ್ರಾಣಿಯೂ ಒಳ ನುಸುಳದಂತೆ ಮಾಡಲಾಗಿದೆ. ರೈಲ್ವೆ ಕಂಬಿ ತಡೆಗೋಡೆಗೆ ತಗುಲುವ ವೆಚ್ಚದಲ್ಲಿ ಅರ್ಧದಷ್ಟು ಖರ್ಚಾ
ಗಲಿದೆ.ಆನೆಗಳ ಹಾವಳಿಗೆ ಆಲೂರು, ಬೇಲೂರು, ಅರಕಲಗೂಡು, ಸಕಲೇಶಪುರ ತಾಲ್ಲೂಕುಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ಜನಜೀವನ ದುಸ್ತರವಾಗಿದೆ. ಕಂದಕ ನಿರ್ಮಾಣ, ರೈಲ್ವೆ ಕಂಬಿ ಅಳವಡಿಕೆ, ಜೇನು ಗೂಡು ಬೇಲಿ, ವಾಚ್‌ ಟವರ್‌ ಹೀಗೆ ಹಲವು ಕ್ರಮ ಕೈಗೊಂಡರೂ ಬೆಳೆ ಉಳಿಸಲು ಆಗುತ್ತಿಲ್ಲ. ರೈತರು ಒಟ್ಟುಗೂಡಿ ಗದ್ದೆಗಳ ಬಳಿ ರಾತ್ರಿ ಕಾವಲು ಕಾಯುತ್ತಾರೆ. ಪಟಾಕಿ ಸಿಡಿಸಿ, ಜೋರಾಗಿ ಕೂಗುತ್ತಾ, ಡೋಲು ಬಾರಿಸಿದರೂ ಬೆಳೆ ಹಾಳು ಮಾಡುವುದು ನಿಲ್ಲಿಸಿಲ್ಲ.

ಕಾಡಿನಿಂದ ನಾಡಿಗೆ ಲಗ್ಗೆಯಿಟ್ಟ ಆನೆಗಳು ಮನೆಗೆ ನುಗ್ಗಿ ಆಹಾರ ಪದಾರ್ಥಗಳ ತಿನ್ನುವುದು ಮಾತ್ರವಲ್ಲದೆ ಭತ್ತ, ರಾಗಿ, ಕಾಫಿ ಸೇರಿ ಇತರೆ ಬೆಳೆಗಳ ನಾಶಪಡಿಸುತ್ತಿವೆ. 70 ಹಳ್ಳಿಗಳು ನಿರಂತರವಾಗಿ ಕಾಡಾನೆಗಳ ಹಾವಳಿ ಪೀಡಿತವಾಗಿವೆ.

ಮಾನವ–ಕಾಡಾನೆ ಸಂಘರ್ಷದಿಂದ 1991ರಿಂದ ಜಿಲ್ಲೆಯಲ್ಲಿ ಈವರೆಗೆ 74 ಜನ ಪ್ರಾಣ ಕಳೆದುಕೊಂಡಿದ್ದಾರೆ. 53 ಆನೆಗಳು ಮೃತಪಟ್ಟಿವೆ. ಬೆಳೆ ನಷ್ಟ ಮಾಡಿಕೊಂಡ ರೈತರಿಗೆ ಅರಣ್ಯ ಇಲಾಖೆ ವಿತರಿಸಿರುವ ಪರಿಹಾರ ₹15.99 ಕೋಟಿ.

‘ಕಾಡಂಚಿನ ಪ್ರದೇಶಗಳಲ್ಲಿ ಆನೆ ಹಾವಳಿ ತಡೆಗೆ ಈ ಪ್ರಯೋಗ ಅಳವಡಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದು ಕಿ.ಮೀ. ವ್ಯಾಪ್ತಿಗೆ ಬೇಕಾದ ರೈಲು ಕಂಬಿಗಳ ಖರೀದಿ, ಅವುಗಳ ಸಾಗಣೆ, ಅಳವಡಿಕೆ ಮುಂತಾದ ಎಲ್ಲ ಪ್ರಕ್ರಿಯೆಗಳಿಗೆ ಸುಮಾರು ₹1.20 ಕೋಟಿ ವೆಚ್ಚವಾಗುತ್ತದೆ. ಜಂಬೂ ಬೇಲಿಗೆ ₹ 40 ರಿಂದ ₹70ಲಕ್ಷ ವೆಚ್ಚವಾಗಲಿದೆ. ಬ್ಯಾರಿಯರ್ ಅಳವಡಿಸಿದ ಬಳಿಕ 18 ಬಾರಿ ಆನೆ ಬಂದು ಕಂಬ ಉರುಳಿಸಲು ಯತ್ನಿಸಿದರೂ ಆಗಿಲ್ಲ. ಸಣ್ಣ ಪ್ರಾಣಿಯೂ ನುಸುಳಲು ಆಗುವುದಿಲ್ಲ’ ಎಂದು ನೇಚರ್ ಸಂಸ್ಥೆ ಸಿಇಒ ಸಂತೋಷ್ ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT