ರಾಗಿ ಖರೀದಿ ಹೆಚ್ಚಳಕ್ಕೆ ಚಿಂತನೆ: ಶೋಭಾ ಕರಂದ್ಲಾಜೆ

ಹಾಸನ: ‘ರಾಗಿ ಖರೀದಿ ಪ್ರಮಾಣ ಹೆಚ್ಚಿಸಬೇಕು ರೈತರ ಬೇಡಿಕೆ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಖರೀದಿ ಕೇಂದ್ರ ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರದ ಜತೆ ಚರ್ಚಿಸಲಾಗುವುದು’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಕಾರೆಕೆರೆ ಕೃಷಿ ಕಾಲೇಜಿನ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕರ್ನಾಟಕ ರೈತ ಸುರಕ್ಷತಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ‘ನನ್ನ ಪಾಲಿಸಿ ನನ್ನ ಕೈಯಲ್ಲಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ವಿಶ್ವಸಂಸ್ಥೆ ಸಹಯೋಗದಲ್ಲಿ ರಾಗಿ, ಸಿರಿಧಾನ್ಯಗಳಿಗೆ ಅಂತರರಾಷ್ಟ್ರೀಯವಾಗಿ ಮಾರುಕಟ್ಟೆ ಸೃಷ್ಟಿಸಲು ಒತ್ತು ನೀಡಲಾಗುವುದು. 2023ರೊಳಗೆ ಎಲ್ಲ ರಾಯಭಾರಿ ಕಚೇರಿಗಳಲ್ಲಿ ರಾಗಿ, ಜೋಳ, ಸಿರಿಧಾನ್ಯ ಪ್ರದರ್ಶನ ಮಾಡಲಾಗುವುದು’ ಎಂದು ಹೇಳಿದರು.
‘ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ಒಂದೊಂದು ಕಡೆ ಇವೆ. ರೈತರಿಗೆ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಎರಡೂ ವಿಷಯಗಳ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕು’ ಎಂದೂ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
‘ರೈತರು ಗುಣಮಟ್ಟದ ಸಿರಿಧಾನ್ಯ ಬೆಳೆಯಬೇಕು. ರಾಸಾಯನಿಕ ಸಿಂಪಡಣೆ ಅವಧಿ, ಪ್ರಮಾಣ ಕುರಿತು ಕೃಷಿ ಅಧಿಕಾರಿಗಳು ಮತ್ತು ವಿಜ್ಞಾನಿಗಳು ರೈತರಿಗೆ ಅರಿವು ಮೂಡಿಸಬೇಕು’ ಎಂದು ಸಲಹೆ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.