ಆಲೂರು: ‘ಪ್ರತಿವರ್ಷ ಪ್ರಗತಿ ಸಂಕೇತವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂಚೆ ಚೀಟಿ ಅನಾವರಣವಾಗಲಿದೆ’ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ ತಿಳಿಸಿದರು.
ತಾಲ್ಲೂಕು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಟ್ಟಣದಲ್ಲಿ ಏರ್ಪಡಿಸಿದ್ದ 2023-24 ನೇ ಸಾಲಿನ ಅಂಚೆ ಚೀಟಿ ಬಿಡುಗಡೆ ಮಾಡಿ ಮಾತನಾಡಿದರು.
‘ಶಿಸ್ತು ಹಾಗೂ ಸೇವೆಯನ್ನೆ ಪ್ರಮುಖ ಉದ್ದೇಶವಾಗಿಟ್ಟು, ಯುವ ಪೀಳಿಗೆಯನ್ನು ಸದೃಢವಾಗಿ ವಿಕಸನಗೊಳಿಸುವ ಹಿನ್ನೆಲೆಯಲ್ಲಿ ನಿಸ್ವಾರ್ಥ ಸಾಮಾಜಿಕ ಸೇವೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡುಗೆ ಅನನ್ಯವಾದುದು. ಪೂರ್ವ ಪ್ರಾಥಮಿಕ ಶೈಕ್ಷಣಿಕ ಹಂತದಿಂದ ಪದವಿ ಶಿಕ್ಷಣದವರೆಗೂ ವಿವಿಧ ಸ್ತರಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಶಿಸ್ತು ಬದ್ಧ ಶಿಕ್ಷಣ ನೀಡುತ್ತಿದೆ. ಮಕ್ಕಳನ್ನು ಸಾಮಾಜೀಕರಣಗೊಳಿಸಿ ಅವರ ಸೇವಾ ಮನೋಧೋರಣೆ ಗಟ್ಟಿಗೊಳಿಸುತ್ತದೆ.
ಈ ಸಂಸ್ಥೆ ಮಕ್ಕಳನ್ನು ಕಾಯಾ, ವಾಚಾ, ಮನಸಾ ಸೆಳೆಯುತ್ತದೆ. ಈಗಾಗಲೇ ರಾಜ್ಯದಾದ್ಯಂತ ನಮ್ಮ ಮಕ್ಕಳು ಹಾಗು ಶಿಕ್ಷಕರು ಪ್ರಮುಖ ಜಾತ್ರಾ ಮಹೋತ್ಸವ, ಸಭೆ ಸಮಾರಂಭಗಳಲ್ಲಿ ಸಾಕಷ್ಟು ಸೇವೆ ಮಾಡಿರುವುದನ್ನು ಕಾಣುತ್ತಿದ್ದೇವೆ. ಸದ್ಯ ಹಾಸನಾಂಬ ದರ್ಶನ ವೇಳೆಯಲ್ಲಿ ಹಗಲಿರುಳೂ ನೂರಾರು ಮಕ್ಕಳು ಸೇವೆ ಮಾಡುತ್ತಿದ್ದಾರೆ. ಸಂಸ್ಥೆಯ ಅಂಚೆ ಚೀಟಿಯ ಹಣ ಉತ್ತಮ ಕಾರ್ಯಕ್ಕೆ ವಿನಿಯೋಗವಾಗಲಿದೆ’ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್, ಖಜಾಂಚಿ ಬಿ.ಎಸ್.ಹಿಮ, ಸಹ ಕಾರ್ಯದರ್ಶಿ ಎಚ್.ಡಿ.ಕುಮಾರ್, ಗೈಡ್ ಕ್ಯಾಪ್ಟನ್ಸ್ ರೇಮ, ಭಾಗ್ಯಲಕ್ಷಿ, ಮಹೇರಾಬಾನು, ಸುಜಾತ, ಜಿ. ಮಾರ್ಗರೇಟ್, ಕುಮಾರಿ ಲತಾ, ಬಲ್ಕೀಸ್ ಬಾನು, ಧನಲಕ್ಷಿ, ಸ್ಕೌಟ್ ಮಾಸ್ಟರ್ ವೆಂಕಟರಂಗಯ್ಯ, ದೇವರಾಜು, ಲಕ್ಷ್ಮಣ್, ಪುಟ್ಟರಾಜು ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.