ಹಳೇಬೀಡು: ‘ಕೃಷಿ ಬಳಕೆಗೆ ರಾತ್ರಿ ವಿದ್ಯುತ್ ಕೊಡುತ್ತಿದ್ದು, ರೈತರಿಗೆ ತೊಂದರೆಯಾಗಿದೆ. ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ರೈತರು ಭಯದಲ್ಲಿ ಬೆಳೆಗಳಿಗೆ ನೀರುಣಿಸುವಂತಾಗಿದೆ. ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು, ಕೆಂದ್ರ ಸರ್ಕಾರದಿಂದ ರೈತರಿಗೆ ನೆರವು ಕೊಡಿಸಬೇಕು’
–ಬರ ಅಧ್ಯಯನಕ್ಕಾಗಿ ಬುಧವಾರ ಇಲ್ಲಿಗೆ ಆಗಮಿಸಿದ್ದ ಸಂಸದ ಸದಾನಂದ ಗೌಡ ಅವರ ಬಳಿ ದೊಡ್ಡಕೋಡಿಹಳ್ಳಿಯಲ್ಲಿ ರೈತರು ತೋಡಿಕೊಂಡ ಅಳಲು.
‘ಸಕಾಲಕ್ಕೆ ಮಳೆ ಬೀಳದೆ ಮೊಳಕೆ ಹಂತದಲ್ಲೇ ಜೋಳ, ಹತ್ತಿ, ಸೂರ್ಯಕಾಂತಿ ಒಣಗಿದವು. ಕೆಲವೊಂದು ಕಡೆ ಬೆಳೆ ಉಳಿದರೂ ಫಸಲು ಬರಲಿಲ್ಲ. ಜೋಳದ ಕಾಳು ಜೊಳ್ಳಾದವು. ಹತ್ತಿ ಸಮರ್ಪಕವಾಗಿ ಕಾಯಿ ಕಟ್ಟಲಿಲ್ಲ, ಸೂರ್ಯಕಾಂತಿ ಹೂವು ಅರಳಿದರೂ ಕಾಳು ಬರಲಿಲ್ಲ. ಈಗ ರೈತರ ಬಳಿ ಬಿಡಿಗಾಸು ಇಲ್ಲದಂತಾಗಿದೆ. ಬಹುತೇಕ ಕೆರೆಕಟ್ಟೆಗಳು ನೀರಿಲ್ಲದೆ ಒಣಗಿವೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗುತ್ತಿದೆ. ಕೃಷಿಪಂಪ್ ಸೆಟ್ ಹೊಂದಿದ ರೈತರು ಸಹ ಬೆಳೆ ಮಾಡಿ ಫಸಲು ತೆಗೆಯಲು ಸಾಧ್ಯವಾಗುತ್ತಿಲ್ಲ’ ಎಂದು ರೈತರು ವಿವರಿಸಿದರು.
ಬೆಳೆಗಳು ಒಣಗಿದರೂ ಬೇಲೂರು ತಾಲ್ಲೂಕು ಅನ್ನು ‘ಮಧ್ಯಮ ಬರ ಪ್ರದೇಶ’ ಎಂದು ಘೋಷಣೆ ಮಾಡಲಾಗಿತ್ತು. ಮುಖ್ಯಮಂತ್ರಿಗಳ ಬಳಿ ಹೋಗಿ ಮನವಿ ಮಾಡಿಕೊಂಡು ಬೇಲೂರು ತಾಲ್ಲೂಕನ್ನು ಬರಪಟ್ಟಿಗೆ ಸೇರಿಸಿದೆವು. ಚಿರತೆ ನಾಯಿ ಮಾತ್ರವಲ್ಲದೆ ದನ, ಕರುಗಳು ತಿನ್ನುತ್ತಿವೆ’ ಎಂದು ಶಾಸಕ ಎಚ್.ಕೆ.ಸುರೇಶ್ ಅವರು ಸದಾನಂದಗೌಡ ಅವರಿಗೆ ಮನವಿ ಮಾಡಿದರು.
ಅಹವಾಲು ಸ್ವೀಕರಿಸಿ ಮಾತನಾಡಿದ ಸಂಸದ ಸದಾನಂದ ಗೌಡ,‘ಜೊಳ್ಳು ಹಾಗೂ ಫಂಗಸ್ ಬಂದಿರುವ ಬೆಳೆಗಳ ಫಸಲಿನ ಸ್ಯಾಂಪಲ್ ತೆಗೆದುಕೊಂಡಿದ್ದೇವೆ. ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ಕೊಡುತ್ತೇವೆ. ಗೃಹ ಸಚಿವ ಅಮಿತ್ ಷಾ ಅವರಿಗೆ ಇಲ್ಲಿಯ ಬರ ಪರಿಸ್ಥಿತಿಯನ್ನು ವಿವರಿಸುತ್ತೇವೆ’ ಎಂದರು.
ಮಳೆ ಕೊರೆತೆಯಾದ ವೇಳೆ ಬೇರೆ ಮೂಲದಿಂದ ನೀರು ಪಡೆದು ಬೆಳೆ ಉಳಿಸಿಕೊಳ್ಳಲು ಏಕೆ ಸಾಧ್ಯವಾಗಿಲ್ಲ. ಕೆರೆ ಕಟ್ಟೆಗಳ ಸ್ಥಿತಿಗತಿ ಯಾವ ರೀತಿ ಇದೆ ಎಂದು ಸದಾನಂದ ಗೌಡ ರೈತರನ್ನು ಕೇಳಿದರು.
‘ಸಾಕಷ್ಟು ಕೆರೆಗಳು ಒಣಗಿವೆ. ಗುಂಡಿಗಳಲ್ಲಿ ಮಾತ್ರ ನೀರಿದ್ದು, ಗುಂಡಿಗಳು ಸಹ ಒಣಗಲಿದೆ. ಜಾನುವಾರುಗಳಿಗೆ ನೀರು ಕುಡಿಸಲು ಎಲ್ಲಿಗೆ ಹೋಗುವುದು ಎಂಬ ಚಿಂತೆ ಕಾಡುತ್ತಿದೆ’ ಎಂದು ರೈತರು ವಿವರಿಸಿದರು.
‘ಬರ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ಕೊಡುವುದರಿಂದ ರೈತರಿಗೆ ಉಪಯೋಗವಿಲ್ಲ. ಸೌಲಭ್ಯಗಳು ನೇರವಾಗಿ ರೈತರಿಗೆ ದೊರಕುವಂತಾಗಬೇಕು’ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎ.ಎಸ್.ಆನಂದ್ ಕುಮಾರ್ ಅವರು ಬರ ಅಧ್ಯಯನ ತಂಡಕ್ಕೆ ತಿಳಿಸಿದರು.
ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಪ್ರಿತಂಗೌಡ, ಮುಖಂಡ ಅಡಗೂರು ಆನಂದ್, ಗಂಗೂರು ಶಿವಕುಮಾರ್, ಕಟ್ಟೆಸೋಮನಹಳ್ಳಿ ರಮೇಶ್, ಎ.ಬಿ.ಜಗದೀಶ್, ಎಚ್.ಬಿ.ರಮೇಶ್, ಹಾಲಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.