ಪ್ರಜ್ವಲ್ ರೇವಣ್ಣ ಸಂದರ್ಶನ: ರಾಜಕೀಯದಲ್ಲೂ ಯುವಕರಿಗೆ ಮೀಸಲಾತಿ ಬೇಕು

ಶನಿವಾರ, ಏಪ್ರಿಲ್ 20, 2019
31 °C

ಪ್ರಜ್ವಲ್ ರೇವಣ್ಣ ಸಂದರ್ಶನ: ರಾಜಕೀಯದಲ್ಲೂ ಯುವಕರಿಗೆ ಮೀಸಲಾತಿ ಬೇಕು

Published:
Updated:

ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಪ್ರಜ್ವಲ್‌ ರೇವಣ್ಣ ಸ್ಪರ್ಧಿಸಿದ್ದಾರೆ. ಯುವ ಸಮುದಾಯಕ್ಕೆ ಸ್ಪಂದನೆ, ಮುಂದಿನ ಯೋಜನೆ, ನಿಲುವುಗಳನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.

–––

ಯುವ ಜನರು ಚುನಾವಣೆ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿಲ್ಲ?

ಯುವ ಜನರು ರಾಜಕೀಯಕ್ಕೆ ಬರಲು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಮೊದಲು ಅವರ ಮನಸ್ಥಿತಿ ಬದಲು ಮಾಡಬೇಕು. ರಾಜಕೀಯ ಅಂದರೆ ಭ್ರಷ್ಟಾಚಾರ ಅಥವಾ ಕೆಟ್ಟ ಕೆಲಸ ಎಂಬ ಭಾವನೆ ಸರಿಯಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಒಳ್ಳೆಯದು, ಕೆಟ್ಟದ್ದು ಇರುತ್ತದೆ. ರಾಜಕಾರಣಿ ಸರಿಯಾಗಿ ಕೆಲಸ ಮಾಡಿದರೆ ಲಕ್ಷಾಂತರ ಜನರ ಮನೆ ದೀಪ ಬೆಳಗಬಹುದು. ಒಳ್ಳೆಯ ಅಂಶಗಳನ್ನು ಮುಂದಿಟ್ಟುಕೊಂಡು ಯುವಕರು ಮುಂದೆ ಬಂದರೆ ಬಲಿಷ್ಠ ರಾಷ್ಟ್ರ ಕಟ್ಟಬಹುದು.

ಯುವ ಜನತೆಗೆ ರಾಜಕೀಯ ಪಕ್ಷಗಳು ಪ್ರಾತಿನಿಧ್ಯ ಕೊಡುತ್ತಿಲ್ಲವೆ?

ಯುವ ಜನತೆಯನ್ನು ರಾಜಕೀಯ ವ್ಯವಸ್ಥೆಯಲ್ಲಿ ತೊಡಗಿಸಲು ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಜವಾಬ್ದಾರಿ ಕೊಡಬೇಕು. ಅವಕಾಶ ಸಿಗದೆ ರಾಜಕಾರಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಯುವ ಜನತೆಗೆ ರಾಜಕೀಯದಲ್ಲಿ ಶೇ. 20ರಷ್ಟು ಮೀಸಲಾತಿ ನೀಡಬೇಕೆಂದು ಮೊದಲಿನಿಂದಲೂ ಒತ್ತಾಯಿಸುತ್ತಿದ್ದೇನೆ. ಜೆಡಿಎಸ್ ಇದಕ್ಕೆ ಬದ್ಧವಾಗಿದೆ.

ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ನೀವು ಯುವಕರಾಗಿ ಹೇಗೆ ಪರಿಹಾರ ರೂಪಿಸಬಲ್ಲಿರಿ?

ಕೇವಲ ರಸ್ತೆ, ನೀರು, ವಿದ್ಯುತ್‌ ಸೌಕರ್ಯ ಕಲ್ಪಿಸುವುದರಿಂದ ಅಭಿವೃದ್ಧಿ ಆಗುವುದಿಲ್ಲ. ನಗರ ಪ್ರದೇಶವಲ್ಲದೇ ಗ್ರಾಮೀಣ ಮಟ್ಟದಲ್ಲಿ ಕೈಗಾರಿಕೆಗಳು, ಉದ್ದಿಮೆಗಳ ಸ್ಥಾಪನೆ ಆಗಬೇಕು. ಅಷ್ಟಕ್ಕೆ ಸಮಸ್ಯೆ ಮುಗಿಯುವುದಿಲ್ಲ. ಸ್ಥಳೀಯರಿಗೆ ಶೇ 70ರಷ್ಟು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂಬ ನಿಯಮ ತರಬೇಕು.

ಹೋರಾಟದ ಮೂಲಕ ರಾಜಕೀಯ ಪ್ರವೇಶಿಸುವವರ ಸಂಖ್ಯೆ ಕಡಿಮೆ ಇದೆ. ಕುಟುಂಬದ ಹಿನ್ನೆಲೆ ಹೊಂದಿರುವವರೇ ಹೆಚ್ಚು ಬರುತ್ತಿದ್ದಾರೆ?

ಹಾಗೇನು ಇಲ್ಲವಲ್ಲ. ನಾನು ಎಂಟು ವರ್ಷಗಳಿಂದ ಹೋರಾಟ ಮಾಡಿದ್ದೇನೆ. ರಣಘಟ್ಟ ಯೋಜನೆ ಅನುಷ್ಠಾನ, ಯುವಕರಿಗೆ ರಾಜಕೀಯ ಮೀಸಲಾತಿ ನೀಡುವಂತೆ ಹೋರಾಟ ನಡೆಸಿದ್ದೇನೆ. ಒಬ್ಬೊಬ್ಬರದು ಒಂದೊಂದು ವೇದಿಕೆಯ ಹೋರಾಟ ಇರುತ್ತದೆ. ಹೋರಾಟ ಇಲ್ಲದೆ ಯಾರು ರಾಜಕೀಯ ಪ್ರವೇಶ ಮಾಡಲು ಆಗಲ್ಲ.

ಯುವಕರ ನಿರೀಕ್ಷೆಗೆ ಹೇಗೆ ಸ್ಪಂದಿಸುವಿರಿ?

ಮೊದಲು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗುವುದು. ರಾಜಕೀಯ ಶಕ್ತಿ ಕೊಡುವುದು ಎರಡನೇ ಆದ್ಯತೆ. ಯುವಕರನ್ನು ರಾಜಕೀಯ ವ್ಯವಸ್ಥೆಯಲ್ಲಿ ತೊಡಗಿಸಿ, ದೇಶ ಕಟ್ಟಲು ಉತ್ತಮ ರಾಜಕಾರಣಿಗಳನ್ನಾಗಿ ರೂಪಿಸಬೇಕಿದೆ.

ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರ ಸಹಕಾರ ಹೇಗಿದೆ?

ಪ್ರತಿಯೊಂದು ಗ್ರಾಮದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ನಾಯಕರು ಬಾವುಟ ಹಿಡಿದು ಸ್ವಾಗತಿಸುತ್ತಿದ್ದಾರೆ. ಮುಖಂಡರು ವೇದಿಕೆ ಹಂಚಿಕೊಂಡು ಶಕ್ತಿ ನೀಡುತ್ತಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ನಾಯಕರು ಪ್ರಚಾರ ಮಾಡಲು ಬರುತ್ತಿದ್ದಾರೆ. ಇದಕ್ಕಿಂತ ಇನ್ನೇನು ಸಹಕಾರ ಬಯಸಲು ಸಾಧ್ಯ. ಕೆಲವೊಂದು ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರುವುದು ಸಹಜ. ಅದೆಲ್ಲಾ ಸರಿ ಹೋಗಿದೆ.

ದೇವೇಗೌಡರ ಉತ್ತರಾಧಿಕಾರಿಯಾಗಿ ಹೇಗೆ ನಿಭಾಯಿಸುವಿರಿ?

ಆ ಬಗ್ಗೆ ನಾನು ಯೋಚನೆಯೇ ಮಾಡಿಲ್ಲ. ದೇವೇಗೌಡರು ಇರುವವರೆಗೂ ಅವರೇ ರಾಜರಿದ್ದಂತೆ. ಅವರ ಮಾರ್ಗದರ್ಶನದಲ್ಲಿ ಸಾಗುವೆ.

ಕುಟುಂಬ ರಾಜಕಾರಣ ನಿಮ್ಮ ಗೆಲುವಿಗೆ ಅಡ್ಡಿಯಾಗುವುದಿಲ್ಲವೇ?

ಆ ರೀತಿಯ ಸಮಸ್ಯೆ ಆಗುವುದಿಲ್ಲ ಅಂದುಕೊಂಡಿದ್ದೇನೆ. ಈವರೆಗೂ ನಡೆಸಿದ ಸಮೀಕ್ಷೆಗಳು ನಮ್ಮ ಪರವಾಗಿಯೇ ಇವೆ. ನಮ್ಮ ಹೋರಾಟ ನಾವು ಮಾಡುತ್ತೇವೆ. ಅವರ ಹೋರಾಟ ಅವರು ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಸತ್ಯ ಇರುವ ಕಡೆ ಜಯ ಸಿಗುತ್ತದೆ ಎಂಬ ನಂಬಿಕೆ ಇದೆ.

ಕ್ಷೇತ್ರದ ಅಭಿವೃದ್ಧಿಗೆ ಏನೆಲ್ಲ ಯೋಜನೆ ರೂಪಿಸಿಕೊಂಡಿದ್ದೀರಿ?

ಜಿಲ್ಲೆಯನ್ನು ಬಯಲು ಸೀಮೆ, ಮಲೆನಾಡು, ನೀರಾವರಿ ಪ್ರದೇಶವಾಗಿ ವರ್ಗೀಕರಿಸಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಒಂದೊಂದು ರೀತಿಯ ಸಮಸ್ಯೆ ಇದೆ. ಸ್ಥಳೀಯ ಶಾಸಕರು ಮತ್ತು ಕಾಂಗ್ರೆಸ್‌ ನಾಯಕರ ಜತೆ ಕುಳಿತು ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.

ನಿಮಗೆ ಜನ ಏಕೆ ಮತ ನೀಡಬೇಕು?

ಯಾರು ಅರ್ಹರು ಎಂಬುದನ್ನು ಮತದಾರರೇ ನಿರ್ಧರಿಸುತ್ತಾರೆ. ಎದುರಾಳಿ ಬಿಜೆಪಿ ಅಭ್ಯರ್ಥಿಗೆ ಅವಕಾಶ ಸಿಕ್ಕಾಗ ಏನು ಕೆಲಸ ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತು. ಯುವ ಪ್ರತಿಭೆಗೆ ಅವಕಾಶ ನೀಡಿದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಕೆಲಸ ಮಾಡಲು ಅನುಕೂಲವಾಗುತ್ತದೆ. ಬೇಲೂರು ತಾಲ್ಲೂಕಿನಲ್ಲಿ ಯಾವ ರೀತಿ ಅಭಿವೃದ್ಧಿ ಮಾಡಿದ್ದೇನೆ ಎಂಬುದನ್ನು ಜನರು ನೋಡಿದ್ದಾರೆ. ಇದನ್ನು ಮಾದರಿಯಾಗಿ ಇಟ್ಟುಕೊಂಡು ಅವಕಾಶ ಕೇಳುತ್ತಿದ್ದೇನೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !