ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

400 ಪಶು ವೈದ್ಯರ ನೇಮಕಕ್ಕೆ ಪ್ರಸ್ತಾವ: ಸ್ವರೂಪ್ ಪ್ರಶ್ನೆಗೆ ಸಚಿವರ ಉತ್ತರ

Published 14 ಡಿಸೆಂಬರ್ 2023, 13:48 IST
Last Updated 14 ಡಿಸೆಂಬರ್ 2023, 13:48 IST
ಅಕ್ಷರ ಗಾತ್ರ

ಹಾಸನ: ಇಲಾಖೆಯಲ್ಲಿ 400 ಪಶು ವೈದ್ಯಾಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರ, ಜೂನ್ 30 ರಂದು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಿದೆ. ಈ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಅದು ಇತ್ಯರ್ಥವಾದ ಕೂಡಲೇ ಆದ್ಯತೆ ಮೇರೆಗೆ ಪಶು ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್‌ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಸ್ವರೂಪ್‌ ಪ್ರಕಾಶ್‌ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಅವರು, ಹಾಸನ ಜಿಲ್ಲೆಯ 13 ಕಿರಿಯ ಪಶು ವೈದ್ಯಕೀಯ ಪರೀಕ್ಷಕರ ಹುದ್ದೆ ಭರ್ತಿ ಮಾಡಲಾಗಿದೆ ಎಂದರು.

ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಮತ್ತು ಪಶು ವೈದ್ಯಕೀಯ ಪರೀಕ್ಷಕರ ಹುದ್ದೆಗಳನ್ನು ಮುಂಬಡ್ತಿ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಖಾಲಿ ಇರುವ ಡಿ ದರ್ಜೆ ಹುದ್ದೆಗಳಿಗೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯಲ್ಲಿ 141  ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹಾಸನ ಜಿಲ್ಲೆ ಎಂಟು ತಾಲ್ಲೂಕುಗಳಿಗೆ ಸೆಪ್ಟೆಂಬರ್‌ನಲ್ಲಿ ಅಗತ್ಯ ಔಷಧಿಗಳನ್ನು ಸರಬರಾಜು ಮಾಡಲಾಗಿದೆ. ಜಿಲ್ಲೆಯ ಪಶು ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದರು. 

ಜಿಲ್ಲೆಯಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆ ರೋಗ ನಿಯಂತ್ರಣ ಮಾಡಲು ಹಾಗೂ ನಿತ್ಯದ ತುರ್ತು ಚಿಕಿತ್ಸೆಗೆ ಅವಶ್ಯವಿದ್ದ ಬೇವಿನ ಎಣ್ಣೆ, ಹೊಂಗೆ ಎಣ್ಣೆ ಮತ್ತು ಮಿನರಲ್ ಸಪ್ಲಿಮೆಂಟ್‌ಗಳನ್ನು ಜಿಲ್ಲೆಯ 8 ತಾಲ್ಲೂಕುಗಳಿಗೆ ಜೂನ್‌ನಲ್ಲೇ ಸರಬರಾಜು ಮಾಡಲಾಗಿದೆ ಎಂದು ಹೇಳಿದರು. 

ಜಾನುವಾರು ಆರೋಗ್ಯ ಶಿಬಿರಗಳಿಗಾಗಿ ಅಕ್ಟೋಬರ್‌ನಲ್ಲಿ ಎಂಟೂ ತಾಲ್ಲೂಕುಗಳಿಗೂ ಔಷಧಿ ವಿತರಿಸಲಾಗಿದೆ. ಜಿಲ್ಲಾ ಪಂಚಾಯಿತಿ ಅನುದಾನದಡಿ ಎರಡು ತ್ರೈಮಾಸಿಕದಲ್ಲಿ ₹ 90 ಲಕ್ಷ ಅನುದಾನದಲ್ಲಿ ಜಿಲ್ಲೆಯ ಎಲ್ಲ ಪಶು ವೈದ್ಯಕೀಯ ಸಂಸ್ಥೆಗಳ ನಿತ್ಯದ ಹಾಗೂ ತುರ್ತು ಚಿಕಿತ್ಸೆಗೆ ಅವಶ್ಯವಿರುವ ಔಷಧಿ ಖರೀದಿಸಲು ಅನುಮೋದನೆ ದೊರೆತಿದ್ದು, ಔಷಧಿಗಳ ಸರಬರಾಜಿಗೆ ಆದೇಶ ಸಹ ನೀಡಲಾಗಿದೆ ಎಂದು ಹೇಳಿದರು. 

ಈ ಪೈಕಿ ಶೇ 80 ರಷ್ಟು ಔಷಧಿ ಸರಬರಾಜಾಗಿದೆ. ಈ ಔಷಧಿಗಳನ್ನು ಡಿಸೆಂಬರ್ ಮೊದಲ ವಾರದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

2023-24 ನೇ ಸಾಲಿನಲ್ಲಿ ನಿಗದಿಯಾಗಿರುವ ₹12.85 ಕೋಟಿ ಅನುದಾನ ಹಾಗೂ ಜಿಲ್ಲಾ ಪಂಚಾಯಿತಿ ಲೆಕ್ಕ ಶೀರ್ಷಿಕೆಯಡಿ ನಿಗದಿಯಾಗಿರುವ ₹56.47 ಕೋಟಿ ಅನುದಾನದಲ್ಲಿ ರಾಜ್ಯದ ಎಲ್ಲ ಪಶುವೈದ್ಯ ಸಂಸ್ಥೆಗಳಿಗೆ ಔಷಧಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT