ಗುರುವಾರ , ನವೆಂಬರ್ 21, 2019
23 °C
ವಿಡಿಯೋ ಜಾಲತಾಣದಲ್ಲಿ ವೈರಲ್‌

ಪುತ್ರಿ ಮೇಲೆ ಸುತ್ತಿಗೆಯಿಂದ ಹಲ್ಲೆ: ಕುಡಿದ ಮತ್ತಿನಲ್ಲಿ ತಂದೆಯಿಂದ ಕೃತ್ಯ

Published:
Updated:
Prajavani

ಹಾಸನ: ಕುಡಿದ ಮತ್ತಿನಲ್ಲಿ ತಂದೆ ತನ್ನ ಮಗಳ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಕಲೇಶಪುರದ ಹೆಬ್ಬಸಾಲೆ ನಿವಾಸಿ, ಕಾಫಿ ಬೆಳೆಗಾರ ಪ್ರಶಾಂತ್ ಕುಡಿದ ಮತ್ತಿನಲ್ಲಿ ‘ನಿನ್ನನ್ನು ಸಾಯಿಸುತ್ತೇನೆ’ ಎಂದು ಸುತ್ತಿಗೆ ಎತ್ತುವ, ಅದಕ್ಕೆ ಪ್ರತಿಯಾಗಿ ಮಗಳು, ‘ಸಾಯಿಸು’ ಎನ್ನುವ ಸಂಭಾಷಣೆ ವಿಡಿಯೋದಲ್ಲಿದೆ. ಅದಾದ ಬಳಿಕ ‘ಕೆಜಿಎಫ್ ನೋಡಿದ್ದೀಯಾ, ನಾನು ಮಯೂರ... ನಾನಿರುವುದೇ ನಿಮಗಾಗಿ’ ಎನ್ನುತ್ತಾ ಹೆಗಲ ಮೇಲಿರಿಸಿಕೊಂಡ ಸುತ್ತಿಗೆ ಹಿಡಿದು ಪುತ್ರಿಯತ್ತ ಬೀಸುವ ದೃಶ್ಯ ಇದೆ. ಬಾಲಕಿಯ ಕೈಗೆ ಸುತ್ತಿಗೆ ಏಟು ಬಿದ್ದಿದೆ.

ಕೈಗೆ ಬಿದ್ದ ಪೆಟ್ಟಿನಿಂದ ಮಗಳು ಚೀರುತ್ತಾ ಕಣ್ಣೀರಿಡುವ ದೃಶ್ಯಗಳನ್ನು ಇನ್ನೊಬ್ಬ ಮಗಳು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಂದೆಯ ನಡವಳಿಕೆ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

‘ಮದ್ಯ ವ್ಯಸನಿಯಾಗಿರುವ ಪ್ರಶಾಂತ್ ನಿತ್ಯವೂ ಮನೆಯಲ್ಲಿ ಜಗಳವಾಡುತ್ತಾರೆ. ಎರಡೂ ಹೆಣ್ಣು ಮಕ್ಕಳಿವೆ ಎನ್ನುವ ಕಾರಣಕ್ಕಾಗಿ ಹಲ್ಲೆಯನ್ನೂ ನಡೆಸುತ್ತಾರೆ. ಮದ್ಯಪಾನ ಮಾಡಿದಾಗ ಗಲಾಟೆ ಮಾಡುವುದು ಮೂಮೂಲಿ’ ಎಂದು ನೆರೆಹೊರೆಯವರು ದೂರುತ್ತಾರೆ.

ವಿಡಿಯೋ ವೈರಲ್ ಆದ ಬಳಿಕ ಕುಟುಂಬ ಸದಸ್ಯರು ಮೌನವಾಗಿದ್ದು, ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

ಪ್ರತಿಕ್ರಿಯಿಸಿ (+)