ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ತಡೆಗೆ ಶೀಘ್ರ ಕಾಯ್ದೆ: ಆರಗ ಜ್ಞಾನೇಂದ್ರ

Last Updated 1 ಅಕ್ಟೋಬರ್ 2021, 14:51 IST
ಅಕ್ಷರ ಗಾತ್ರ

ಹಾಸನ: ಮತಾಂತರ ತಡೆಗೆ ರಾಜ್ಯದಲ್ಲಿ ಶೀಘ್ರವೇ ಮಸೂದೆಯೊಂದನ್ನು ಜಾರಿಗೆ ತರಲಾಗುವುದುಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಹಳೇಬೀಡಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಆಮಿಷ ತೋರಿ ಬಲವಂತದ ಮತಾಂತರ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಈ ಬಗ್ಗೆ ದೂರು ನೀಡಿದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ.ಮತಾಂತರ ಕೇವಲ ಹಾಸನ ಜಿಲ್ಲೆಯಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಹೆಚ್ಚಾಗುತ್ತಿದೆ. ಎಲ್ಲರೂ ಅವರವರ ಮತದೊಳಗೆ ಬದುಕಬೇಕು. ಆಗ ಮಾತ್ರ ಶಾಂತಿ ಸುವ್ಯವಸ್ಥೆ ಇರಲಿದೆ. ಆದರೆ, ನಮ್ಮಮತದವರು ಹೆಚ್ಚಾಗಬೇಕು ಎಂದು ಬೇರೆ ಧರ್ಮದವರನ್ನು ಮತಾಂತರ ಮಾಡಿ ತಮ್ಮ ಸಂಖ್ಯೆ ಹೆಚ್ಚುಮಾಡಿಕೊಳ್ಳಬೇಕೆಂಬುದು ಅಧರ್ಮ ಮತ್ತು ಅಮಾನುಷ ಕೆಲಸ ಎಂದರು.

ವಿಧಾನಸಭೆಯಲ್ಲೇ ಶಾಸಕರೊಬ್ಬರು ತನ್ನ ತಾಯಿಯನ್ನೇ ಮತಾಂತರ ಮಾಡಿದ್ದಾರೆ ಎಂದುಹೇಳಿದ್ದಾರೆ. ಮತಾಂತರದಿಂದ ದಂಪತಿ, ತಾಯಿ, ಮಕ್ಕಳು ಬೇರೆ ಆಗಿದ್ದಾರೆ, ಊರೂರಲ್ಲಿ ಜಗಳ ಶುರುವಾಗಿದೆ, ಕೋಮು ಗಲಭೆ ನಡೆದು, ಶಾಂತಿ ಸುವ್ಯವಸ್ಥೆಗೆ ಭಂಗ ಬರುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರವೇ ವಿಧಾನಸಭೆಯಲ್ಲೇ ಒಂದು ಬಿಲ್ ಪಾಸ್ಮಾಡಿ ಮತಾಂತರ ತಡೆಗಟ್ಟುವ, ನಿರ್ಬಂಧಿಸಿರುವ ಕೆಲಸವನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ ವಿಚಾರವಾಗಿ ತನಿಖೆ ನಡೆಯುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಇರಲಿ, ಆತ್ಮಹತ್ಯೆ ಇರಲಿ, ಆದ್ಯತೆ ಮೇರೆ ತನಿಖೆ ನಡೆಯಲಿದೆ. ಸೌಜನ್ಯ ಉತ್ತಮ ನಟಿ. ಯಾವ ಹಿನ್ನೆಲೆ ಅಥವಾ ಕಾರಣದಿಂದ ಜೀವ ಕಳೆದುಕೊಂಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಏನಾಗಿದೆ ಎಂಬುದನ್ನು ಪತ್ತೆ ಹಚ್ಚುವಂತೆ ಗುರುವಾರವೇ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದರು.

ಆರ್‌ಎಸ್‌ಎಸ್‌ನ್ನು ತಾಲಿಬಾನ್ ಸಂಸ್ಕೃತಿಗೆ ಹೋಲಿಸಿರುವ ವಿಪಕ್ಷನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಅವರು ಮುಖ್ಯಮಂತ್ರಿಯಾಗಿದ್ದವರು, ಹಿರಿಯರು, ಅವರಿಗೆತಾಲಿಬಾನ್ ಮತ್ತು ಆರ್‌ಎಸ್‌ಎಸ್ ನಡುವಿನ ಅಂತರ ಗೊತ್ತಿಲ್ಲದಿದ್ದರೆ ನಾನೇನು ಮಾಡಲು ಆಗುತ್ತೆ’ ಎಂದು ವ್ಯಂಗ್ಯವಾಡಿದರು.

‘ಹಿಂಸೆಯಲ್ಲಿ ಆರ್‌ಎಸ್ ಎಸ್‌ಗೆ ಖಂಡಿತವಾಗಿಯೂ ನಂಬಿಕೆ, ವಿಶ್ವಾಸ ಇಲ್ಲ. ನನ್ನ ಮತ್ತು ದೇಶದ ನಡುವಿನ ಆಯ್ಕೆ ವಿಚಾರ ಬಂದಾಗ ವ್ಯಕ್ತಿಯಾಗಿ ನಿನ್ನ ಹಿತ ಬಲಿಕೊಟ್ಟು ದೇಶದ ರಕ್ಷಣೆ ಮಾಡು ಎಂದು ಹೇಳುವಂಥ ಸಂಘಟನೆ ಇದ್ದರೆ ಅದು ಆರ್‌ಎಸ್ ಎಸ್. ಸಿದ್ದರಾಮಯ್ಯ ಅವರಿಗೂ ಇದು ಗೊತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT