ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ತಗ್ಗಿದ ವರುಣನ ಅಬ್ಬರ; ರೋಗ ಭೀತಿ ಉಲ್ಬಣ

Published 31 ಜುಲೈ 2023, 6:06 IST
Last Updated 31 ಜುಲೈ 2023, 6:06 IST
ಅಕ್ಷರ ಗಾತ್ರ

ಹಾಸನ: ವಿಳಂಬವಾಗಿ ಆರಂಭವಾಗಿದ್ದ ಮುಂಗಾರು ಮಳೆ ಆರ್ಭಟ ಈಗ ಸ್ವಲ್ಪ ತಗ್ಗಿದೆ. ತಗ್ಗು ಪ್ರದೇಶಗಳು, ಹೂಳು ತುಂಬಿದ ಚರಂಡಿಗಳಲ್ಲಿ ಕೆಸರು ನೀರು ಸಂಗ್ರಹವಾಗಿಯೇ ಉಳಿದಿದೆ. ಇದರಿಂದಾಗಿ ಸೊಳ್ಳೆಗಳ ಉತ್ಪತ್ತಿ ಹೆಚ್ಚುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಜನರನ್ನು ಆವರಿಸಿದೆ.

ಹಳೇಬೀಡು ಸಮುದಾಯ ಆಸ್ಪತ್ರೆ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಪ್ರತಿ ತಿಂಗಳು ಲಾರ್ವಾ ಸಮೀಕ್ಷೆ ನಡೆಯುತ್ತಿದೆ. ಮನೆಗಳಿಗೆ ತೆರಳಿ ನೀರಿನ ತೊಟ್ಟಿ ಪರೀಕ್ಷೆ ಮಾಡುತ್ತಿದ್ದಾರೆ. ನೀರು ತುಂಬಿದ ಟ್ಯಾಂಕ್, ಬಕೆಟ್, ಟಬ್‌ಗಳನ್ನು ಮುಚ್ಚುವಂತೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.

ಆಶಾ ಕಾರ್ಯಕರ್ತೆಯರಾದ ಪುಷ್ಪಾ, ಛಾಯಾ, ಜಾನಕಮ್ಮ, ಆರತಿ, ವಸಂತ, ಸುನೀತಾ ಆಸ್ಪತ್ರೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಮಹಿಳಾ ಆರೋಗ್ಯ ಸಹಾಯಕಿಯರ ಜೊತೆಗೂಡಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಮುಂದಾಗಿರುವುದು ಸಂತಸದ ವಿಚಾರ ಎನ್ನುತ್ತಾರೆ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಆರ್.ಅನಿಲ್ ಕುಮಾರ್.

ಟ್ಯಾಂಕಿನ ನೀರಿನಲ್ಲಿ ಕ್ರಿಮಿಕೀಟ ರೋಗಾಣು ಬಾರದಂತೆ ದ್ರಾವಣವನ್ನು ಬಳಕೆ ಮಾಡಲಾಗುತ್ತಿದೆ. ಕೆರೆ, ಕಟ್ಟೆ, ಕೊಳದಲ್ಲಿ ಸೊಳ್ಳೆ ಕೀಟಾಣು ನಿಯಂತ್ರಣಕ್ಕಾಗಿ ಗ್ರಂಥಿ ಮೀನುಗಳನ್ನು ಬಿಡುವ ಕಾರ್ಯಕ್ರಮ ನಡೆಸಲಾಗಿದೆ. ಮೀನು ಸಂತತಿಯ ಅಭಿವೃದ್ಧಿ ಕೆಲಸ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಎಂದು ಅನಿಲ್ ಕುಮಾರ್ ತಿಳಿಸಿದರು.

ಹಳೇಬೀಡಿನಲ್ಲಿ ರಾಜನಶಿರಿಯೂರು ರಸ್ತೆ, ಬಸವೇಶ್ವರ ವೃತ್ತ ಹಾಗೂ ದ್ವಾರಸಮುದ್ರ ಕೆರೆ ತಿರುವಿನಲ್ಲಿರುವ ರಸ್ತೆ ಗುಂಡಿಗಳಲ್ಲಿ ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತಿದೆ. ರಸ್ತೆ ಗುಂಡಿಗಳೇ ಸಾಂಕ್ರಾಮಿಕ ರೋಗದ ತಾಣಗಳಾಗಿವೆ. ಲೋಕೋಪಯೋಗಿ ಇಲಾಖೆ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದೆ ಇರುವುದರಿಂದ ಸೊಳ್ಳೆ ಸಂತತಿ ಹೆಚ್ಚುತ್ತಿದೆ ಎಂಬ ಮಾತು ಸ್ಥಳೀಯರಿಂದ ಕೇಳಿ ಬರುತ್ತಿದೆ.

ಅರಸೀಕೆರೆ ತಾಲ್ಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಡೆಂಗಿ ಮತ್ತು ಚಿಕೂನ್ ಗುನ್ಯಾ ಪ್ರಕರಣಗಳಲ್ಲಿ ಹಂತ ಹಂತವಾಗಿ ಏರಿಕೆ ಕಂಡು ಬರುತ್ತಿದೆ, ಇದಕ್ಕೆ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಸ್ತುತ ತಾಲ್ಲೂಕಿನಲ್ಲಿ 23 ಡೆಂಗಿ ಜ್ವರ ಪೀಡಿತರು ಹಾಗೂ 21 ಚಿಕೂನ್ ಗುನ್ಯಾ ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ 1 ರಿಂದ 4 ನೇ ವಯಸ್ಸಿನ ಪೀಡಿತ ಮಕ್ಕಳ ಯಾವ ಪ್ರಕರಣಗಳೂ ದಾಖಲಾಗಿಲ್ಲ. 5 ರಿಂದ 8 ವರ್ಷ ವಯಸ್ಸಿನ ಇಬ್ಬರು ಮಕ್ಕಳಲ್ಲಿ ಡೆಂಗಿ ಹಾಗೂ ಇಬ್ಬರಲ್ಲಿ ಚಿಕೂನ್ ಗುನ್ಯಾ ಪ್ರಕರಣಗಳು ಕಂಡು ಬಂದಿವೆ, ಇದಕ್ಕೆ ಸಂಬಂಧಿಸಿದಂತೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಜಾವಗಲ್ ಗ್ರಾಮಗಳಲ್ಲಿ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ಗ್ರಾಮವೂ ಸೇರಿದಂತೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಜನರು ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆಯುತ್ತಿರುವುದು ಸಾಮಾನ್ಯವಾಗಿದೆ.

ಗ್ರಾಮದ ಬಹುತೇಕ ಜನರು ಗಂಟಲು ಕೆರೆತ, ನೆಗಡಿ, ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದು, ದಿನಬೆಳಗಾದರೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಗ್ರಾಮದಲ್ಲಿ ನಿರ್ಮಾಣವಾಗಿದೆ. ರಸ್ತೆ ಬದಿಗಳಲ್ಲಿ ಗುಂಡಿಗಳು ನಿರ್ಮಾಣವಾಗಿ ಮಳೆ ನೀರು ಶೇಖರಣೆ ಆಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಗ್ರಾಮದ ಚರಂಡಿಗಳಲ್ಲಿ ಕಸ ಕಡ್ಡಿ ತುಂಬಿದ್ದು, ಮಳೆಯ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ನೀರು ಶೇಖರಣೆಗೊಂಡು, ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ.

ಈ ಸೊಳ್ಳೆಗಳ ಹಾವಳಿಯಿಂದ ಡೆಂಗಿ, ಚಿಕೂನ್‌ ಗುನ್ಯಾ, ಮಲೇರಿಯಾದಂತಹ ಕಾಯಿಲೆಗಳು ಹರಡುವ ಭೀತಿ ನಿರ್ಮಾಣವಾಗಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಚರಂಡಿಗಳನ್ನು ಸ್ವಚ್ಛಗೊಳಿಸಲು ಹಾಗೂ ರಸ್ತೆ ಬದಿಗಳಲ್ಲಿ ನಿರ್ಮಾಣವಾಗಿರುವ ಗುಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಹಿರೀಸಾವೆ ಹೋಬಳಿಯ ಎಲ್ಲ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಹುತೇಕ ಚರಂಡಿಗಳು, ಕುಡಿಯುವ ನೀರಿನ ಟ್ಯಾಂಕ್‌ಗಳ ಸ್ವಚ್ಛತೆ ಇಲ್ಲದೆ, ಅಲ್ಲಲ್ಲಿ ಕೊಳಚೆ ನೀರು ನಿಂತು, ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದೆ. ಎಲ್ಲ ಗ್ರಾಮ ಪಂಚಾಯಿತಿಯಲ್ಲಿ 2ನೇ ಅವಧಿಗೆ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ನಡೆಯುತ್ತಿದ್ದು, ಸದಸ್ಯರು ಆ ಕಡೆ ಹೆಚ್ಚು ಗಮನಹರಿಸಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ. ನೂತನವಾಗಿ ಆಯ್ಕೆಯಾಗಿರುವ ಎಲ್ಲ ಪಂಚಾಯಿತಿಗಳ ಅಧ್ಯಕ್ಷರು ಈ ಬಗ್ಗೆ ಗಮನಹರಿಸಬೇಕಿದೆ.

ಆರೋಗ್ಯ ಇಲಾಖೆಯು ಡೆಂಗಿ, ಮಲೇರಿಯಾ, ಚಿಕೂನ್ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಮನೆ, ಮನೆಗೆ ಭೇಟಿ ನೀಡಿ, ಕರಪತ್ರಗಳನ್ನು ಹಂಚುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಆಲೂರು ತಾಲ್ಲೂಕಿನಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ದಾದಿಯರು ತಾಲ್ಲೂಕಿನ ಪ್ರತಿ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ವಿಶೇಷವಾಗಿ ಟೈರ್ ಪಂಕ್ಚರ್, ಐಸ್‍ಕ್ಯಾಂಡಿಗಳಲ್ಲಿ ಬಳಸುತ್ತಿರುವ ನೀರು ಸಂಗ್ರಹ ತೊಟ್ಟಿಗಳನ್ನು ಪರಿಶೀಲಿಸಿ, ಆಗಾಗ ಶುಚಿಗೊಳಿಸಿಕೊಳ್ಳಬೇಕೆಂದು ಸೂಚನೆ ನೀಡುತ್ತಿದ್ದಾರೆ. ಮನೆಗಳಲ್ಲಿರುವ ವೃದ್ಧರು, ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದಾರೆ.

ಜುಲೈ 17ರಿಂದ ಆ.2ರವರೆಗೆ ಕ್ಷಯ ರೋಗ ತಪಾಸಣೆ ಮಾಡಲಾಗುತ್ತಿದೆ. 15 ದಿನಗಳಿಂದ ಕೆಮ್ಮು, ಜ್ವರ ಇದ್ದು, ಕಡಿಮೆಯಾಗದೆ ಇದ್ದರೆ ತಕ್ಷಣ ಸಮೀಪದ ವೈದ್ಯರನ್ನು ಸಂಪರ್ಕಿಸಲು ಸೂಚನೆ ನೀಡಲಾಗುತ್ತಿದೆ. ಈವರೆಗೆ 110 ಜನರ ಕಫ ಪರೀಕ್ಷೆ ಮಾಡಲಾಗಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ. ಈವರೆಗೆ ಯಾವುದೇ ಸಾಂಕ್ರಾಮಿಕ ರೋಗ ವರದಿಯಾಗಿಲ್ಲ.

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಮಳೆ ಪ್ರಾರಂಭ ಆಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಮಲೇರಿಯಾ, ಡೆಂಗಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮನೆಗಳಲ್ಲಿ ಸೊಳ್ಳೆ ಪರದೆ ಬಳಸಬೇಕು. ತೊಟ್ಟಿಯಲ್ಲಿ ಆಗಾಗ ನೀರನ್ನು ಖಾಲಿ ಮಾಡಿ ಸ್ವಚ್ಛಗೊಳಿಸಬೇಕು. ಡೆಂಗಿ ಹರಡಲು ಕಾರಣವಾದ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಮನುಷ್ಯನಿಗೆ ಕಚ್ಚುವುದರಿಂದ ಮನೆಯ ಸುತ್ತ ಸ್ವಚ್ಛತೆ ಕಾಪಾಡಬೇಕು. ತೆಂಗಿನಚಿಪ್ಪು, ಟೈರ್‌ಗಳಲ್ಲಿ ನೀರು ನಿಲ್ಲಲು ಅವಕಾಶ ನೀಡಬಾರದು.

ಮೊದಲನೇ ಮತ್ತು ಮೂರನೇ ಶುಕ್ರವಾರ ಲಾರ್ವಾ ಸಮೀಕ್ಷೆ ಮಾಡಲಾಗುತ್ತದೆ. ಲಾರ್ವಾವನ್ನು ನಾಶಪಡಿಸುವ ಗ್ಯಾಂಬೀಯಾ ಮೀನುಗಳನ್ನು ಕೆರೆ, ಕಟ್ಟೆಗಳಿಗೆ ಬಿಡಲಾಗುತ್ತದೆ. ಜ್ವರ ಕಾಣಿಸಿಕೊಂಡಲ್ಲಿ ವೈದ್ಯರನ್ನು ಕಂಡು ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆಯಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ನಿಯಂತ್ರಣದಲ್ಲಿ ಸಾಂಕ್ರಾಮಿಕ ರೋಗ

ಅರಕಲಗೂಡು ತಾಲ್ಲೂಕಿನಲ್ಲಿ ಈ ಬಾರಿ ಸಾಂಕ್ರಾಮಿಕ ರೋಗಗಳ ಹಾವಳಿ ಅಷ್ಟಾಗಿ ಕಂಡು ಬಂದಿಲ್ಲ. ಆರೋಗ್ಯ ಇಲಾಖೆ ಮಾಹಿತಿಯಂತೆ ಅಲ್ಲಲ್ಲಿ ಬೆರಳೆಣಿಕೆಯಷ್ಟು ಜನರಲ್ಲಿ ರೋಗ ಕಂಡುಬಂದಿದೆ. ತಾಲ್ಲೂಕಿನಲ್ಲಿ ಮಲೇರಿಯಾ ಪ್ರಕರಣಗಳಿಲ್ಲ. ಜೂನ್ ಮತ್ತು ಜುಲೈ ತಿಂಗಳಲ್ಲಿ ಡೆಂಗಿ 8 ಹಾಗೂ ಚಿಕೂನ್ ಗುನ್ಯಾ 1 ಪ್ರಕರಣ ಕಂಡುಬಂದಿದ್ದು ಚಿಕಿತ್ಸೆ ಬಳಿಕ ಗುಣಮುಖವಾಗಿವೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ವೈರಲ್ ಫಿವರ್ ನೆಗಡಿ ಕೆಮ್ಮು ಪ್ರಕರಣಗಳಿದ್ದು ಚಿಕಿತ್ಸೆ ಬಳಿಕ ಗುಣಮುಖವಾಗುತ್ತಿವೆ. ಗಂಭೀರವಾದ ಸಾಂಕ್ರಾಮಿಕ ರೋಗಗಳ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೂ ಇಲಾಖೆ ಕೈಗೊಳ್ಳಬೇಕಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ತಿಳಿಸಿದರು.

ಆರೋಗ್ಯ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಸರ್ವೆ ಕಾರ್ಯ ನಡೆಸಿದ್ದಾರೆ. ಆರೋಗ್ಯ ರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸ್ವಚ್ಚತಾ ಕಾರ್ಯಕ್ಕೆ ಹೆಚ್ಚಿನ ಗಮನ ನೀಡುವಂತೆ ಎಲ್ಲ ಗ್ರಾಮ ಪಂಚಾಯಿತಿಗಳು ಹಾಗೂ ಪಟ್ಟಣ ಪಂಚಾಯಿತಿಗೆ ಸೂಚನೆ ನೀಡಲಾಗಿದೆ. ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಕರಿಗೆ ರೋಗಗಳ ಕುರಿತು ಮಾಹಿತಿ ನೀಡಿ ಜಾಗೃತಿ ಕಾರ್ಯ ನಡೆಸಲಾಗುತ್ತಿದೆ. ಲಾರ್ವಾ ಸಮೀಕ್ಷೆ ನಿಯಮಿತವಾಗಿ ನಡೆಯುತ್ತಿದೆ. ಅಗತ್ಯ ಇರುವಲ್ಲಿ ಸೊಳ್ಳೆ ಮತ್ತು ಕ್ರಿಮಿಗಳ ನಾಶಕ್ಕೆ ಫಾಗಿಂಗ್ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಅಗತ್ಯ ಸಿದ್ದತೆಗಳನ್ನು ನಡೆಸಿರುವುದಾಗಿ ಹೇಳಿದರು.

79 ಡೆಂಗಿ 40 ಚಿಕೂನ್‌ ಗುನ್ಯಾ

ಜಿಲ್ಲೆಯಲ್ಲಿ ಜೂನ್‌ನಿಂದ ಇಲ್ಲಿಯವರೆಗೆ 79 ಡೆಂಗಿ ಪ್ರಕರಣ ಹಾಗೂ 40 ಚಿಕೂನ್‌ ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದು ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಸ್ವಾಮಿ ತಿಳಿಸಿದ್ದಾರೆ. ಜಿಲ್ಲೆಯ ಹಾಸನ ತಾಲ್ಲೂಕು ಹಾಗೂ ಅರಸೀಕೆರೆ ತಾಲ್ಲೂಕಿನಲ್ಲಿ ಹೆಚ್ಚು ಡೆಂಗಿ ಮತ್ತು ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ.

ಡೆಂಗಿ ಸೇರಿದಂತೆ ಮತ್ತು ಸೊಳ್ಳೆಯಿಂದ ಹರಡಬಹುದಾದ ಕಾಯಿಲೆಗಳನ್ನು ನಿಯಂತ್ರಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದ್ದು ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರು ತಿಂಗಳಿಗೆ ಎರಡು ಬಾರಿ ಗ್ರಾಮ ಪಟ್ಟಣ ಹಾಗೂ ನಗರಗಳಲ್ಲಿ ಮನೆ ಮನೆಗೆ ತೆರಳಿ ನಾಗರಿಕರಿಗೆ ಸಲಹೆ ಸೂಚನೆ ನೀಡುತ್ತಿದ್ದಾರೆ. ದೊಡ್ಡ ದೊಡ್ಡ ಕೆರೆ ಕಟ್ಟೆಗಳಲ್ಲಿ ಸೊಳ್ಳೆಯ ಉತ್ಪತ್ತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೀನುಗಳನ್ನು ಬಿಡಲಾಗುತ್ತಿದ್ದು. ಈ ಮೂಲಕ ಡೆಂಗಿ ಹರಡದಂತೆ ಕ್ರಮವಹಿಸಲಾಗಿದೆ. ಡೆಂಗಿ ಸೊಳ್ಳೆಗಳು ಹಗಲಿನಲ್ಲಿ ಕಚ್ಚಿದರೆ ಮಲೇರಿಯಾ ಸೊಳ್ಳೆಗಳು ರಾತ್ರಿ ವೇಳೆ ಕಚ್ಚುವ ಮೂಲಕ ಕಾಯಿಲೆ ಹರಡಲು ಕಾರಣವಾಗಿವೆ. ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವ ಮೂಲಕ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಯಾರು ಏನಂತಾರೆ?

ಕೆಸರು ನಿಲ್ಲದಂತೆ ಮಾಡಿ ಸಾಕ್ರಾಮಿಕ ರೋಗ ಹರಡಿದ ನಂತರ ನಿಯಂತ್ರಣ ಕ್ರಮಕ್ಕೆ ಮುಂದಾಗುವುದು ಮಾಮೂಲಿಯಾಗಿದೆ. ಸ್ಥಳೀಯ ಸಂಸ್ಥೆಯವರು ಕೊಚ್ಚೆ ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಸ್ವಚ್ಛತೆ ನಿರಂತರವಾಗಿ ನಡೆಯಬೇಕು. ಹರೀಶ್ ಪಾತ್ರೆ ವ್ಯಾಪಾರಿ ಹಳೇಬೀಡು ನೀರಿನ ಪರೀಕ್ಷೆ ಹಳೇಬೀಡು ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿದೆ. ಕುಡಿಯುವ ನೀರು ಸರಬರಾಜು ಶುದ್ದ ಗಂಗಾ ನೀರಿನ ಘಟಕದ ನೀರಿನ ಪರೀಕ್ಷೆ ಮಾಡುವ ಕೆಲಸ ಆಗಾಗ್ಗೆ ನಡೆಯುತ್ತಿದೆ. ಹಾಸನದ ಲ್ಯಾಬ್‌ಗೂ ಕಳುಹಿಸಿ ನೀರಿನ ಪರೀಕ್ಷೆ ಮಾಡಿಸಲಾಗುತ್ತಿದೆ _- ಡಾ.ಎಚ್.ಆರ್.ಅನಿಲ್ ಕುಮಾರ್ ಆಡಳಿತ ವೈದ್ಯಾಧಿಕಾರಿ ಹಳೇಬೀಡು

ಶಿಕ್ಷಕರಿಗೆ ತರಬೇತಿ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ತಾಲ್ಲೂಕಿನ ಸುಮಾರು 50 ವಿಜ್ಞಾನ ಶಿಕ್ಷಕರಿಗೆ ಡೆಂಗಿ ಮತ್ತು ಚಿಕೂನ್ ಗುನ್ಯಾ ನಿಯಂತ್ರಣಕ್ಕೆ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತರಬೇತಿ ನೀಡಲಾಗಿದೆ. ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲ್ಲೂಕಿನ ಎಲ್ಲ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ಸಾಂಕ್ರಾಮಿಕ ರೋಗಗಳ ಕಣ್ಗಾವಲು ಸಮಿತಿ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ - ಡಾ ತಿಮ್ಮರಾಜು ಅರಸೀಕೆರೆ ತಾಲ್ಲೂಕು ಆರೋಗ್ಯಾಧಿಕಾರಿ

ಆರೋಗ್ಯದ ಕಾಳಜಿ ವಹಿಸಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ನೆಗಡಿ ಜ್ವರ ಹಾಗೂ ಕೆಮ್ಮುನಂತಹ ರೋಗಗಳು ಸಾಮಾನ್ಯವಾಗಿ ಕಂಡುಬರುತ್ತಿದ್ದು ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಗತ್ಯ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸಿಬ್ಬಂದಿ ಸಿದ್ದರಿರುತ್ತಾರೆ - ಡಾ.ಆರ್. ವರದರಾಜು ಹಂದ್ರಾಳು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ.

ಜನರಿಗೆ ಅರಿವು ಆಶಾ ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸೊಳ್ಳೆ ಮರಿಗಳು (ಲಾರ್ವಾ) ಉತ್ಪಾದನೆ ಆಗುವ ಸ್ಥಳಗಳ ಬಗ್ಗೆ ಮತ್ತು ನಾಶ ಮಾಡುವ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಶಂಕರೇಗೌಡ ಆರೋಗ್ಯ ನಿರೀಕ್ಷಕ ಜುಟ್ಟನಹಳ್ಳಿ–ಹಿರೀಸಾವೆ ವೃತ್ತ ಲಾರ್ವಾ ಸಮೀಕ್ಷೆ ವೃದ್ದರು ಮಕ್ಕಳು ಬೆಚ್ಚಗಿರುವಂತೆ ತಿಳಿಸಲಾಗುತ್ತಿದೆ. ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅನುಕೂಲ ಕಲ್ಪಿಸಲಾಗಿದೆ. ಪ್ರತಿ ತಿಂಗಳು ಮೊದಲ ಮೂರನೇ ಶನಿವಾರ ಲಾರ್ವಾ ಸರ್ವೆ ಮಾಡಲಾಗುತ್ತಿದೆ - ಡಾ.ಎಚ್.ಆರ್. ತಿಮ್ಮಯ್ಯ ತಾಲ್ಲೂಕು ಆರೋಗ್ಯಾಧಿಕಾರಿ ಆಲೂರು.

ಮನೆಗೆ ಬಂದು ಮಾಹಿತಿ ದಾದಿಯರು ಆಶಾ ಅಂಗನವಾಡಿ ಕಾರ್ಯಕರ್ತೆಯರು ಆಗಾಗ ಮನೆಗೆ ಬಂದು ರೋಗಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಮಳೆ ಶೀತ ಕಾಲದಲ್ಲಿ ಮನೆಯಲ್ಲಿ ಹೇಗಿರಬೇಕು ಎನ್ನುವ ಬಗ್ಗೆ ಸಲಹೆ ನೀಡುತ್ತಿದ್ದಾರೆ. ಮನೆಯಲ್ಲಿ ಆರೋಗ್ಯ ಏರುಪೇರಾದರೆ ಒಂದೆರಡು ದಿನ ನೋಡಿ ನಂತರ ವೈದ್ಯರನ್ನು ಸಂಪರ್ಕಿಸುತ್ತೇವೆ - ಭಾನು ಆಲೂರು.

ರೋಗ ನಿಯಂತ್ರಣ ಆರೋಗ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಕ್ರಮ ಕೈಗೊಂಡಿದೆ. ಡಾ ಪುಷ್ಪಲತಾ ತಾಲ್ಲೂಕು ಅರೋಗ್ಯಾಧಿಕಾರಿ ಅರಕಲಗೂಡು ಸ್ವಚ್ಛತೆಗೆ ಆದ್ಯತೆ ಪಟ್ಟಣದಲ್ಲಿ ಸ್ವಚ್ಚತೆಗೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೋಗ ರುಜಿನಗಳು ಬಾರದಂತೆ ಕ್ರಮ ವಹಿಸಲಾಗಿದೆ - ಬಸವರಾಜ ಟಾಕಪ್ಪ ಶಿಗ್ಗಾಂವಿ ಪಪಂ ಮುಖ್ಯಾಧಿಕಾರಿ ಅರಕಲಗೂಡು.

ಮಕ್ಕಳಿಗೆ ಅರಿವು ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಜಾಥಾ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ - ಡಾ.ಎ.ಎನ್. ಕಿಶೋರ್ ಕುಮಾರ್ ತಾಲ್ಲೂಕು ಆರೋಗ್ಯಾಧಿಕಾರಿ ಚನ್ನರಾಯಪಟ್ಟಣ.

ಚರಂಡಿ ಸ್ವಚ್ಛತೆ ಮಳೆ ಆರಂಭವಾಗುವ ಮುನ್ನಾ ಪುರಸಭೆಯ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಈಗಲೂ ಸ್ವಚ್ಛಗೊಳಿಸಲಾಗುತ್ತಿದೆ. ಚರಂಡಿಯಲ್ಲಿರುವ ಸೊಳ್ಳೆಗಳ ನಾಶಕ್ಕೆ ಮೆಲಾಥಿನ್ ಪೌಡರ್ ಸಿಂಪಡಿಸಲಾಗುತ್ತಿದೆ - ಡಿ.ಪಿ. ರಾಜು ಪುರಸಭೆಯ ಆರೋಗ್ಯ ನಿರೀಕ್ಷಕ ಚನ್ನರಾಯಪಟ್ಟಣ.

ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಸಂತೋಷ್‌ ಸಿ.ಬಿ., ಜಿ. ಚಂದ್ರಶೇಖರ್‌, ಎಂ.ಪಿ. ಹರೀಶ್‌, ಸಿದ್ದರಾಜು, ಎಚ್‌.ಎಸ್‌. ಅನಿಲ್‌ಕುಮಾರ್, ಹಿ.ಕೃ. ಚಂದ್ರು, ದೀಪಕ್‌ ಶೆಟ್ಟಿ.

ಹಿರೀಸಾವೆ ಹೋಬಳಿಯಲ್ಲಿ ಆಶಾ ಆರೋಗ್ಯ ಕಾರ್ಯಕರ್ತೆಯರು ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ಬಗ್ಗೆ ಅರಿವು ಮೂಡಿಸಿದರು
ಹಿರೀಸಾವೆ ಹೋಬಳಿಯಲ್ಲಿ ಆಶಾ ಆರೋಗ್ಯ ಕಾರ್ಯಕರ್ತೆಯರು ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ಬಗ್ಗೆ ಅರಿವು ಮೂಡಿಸಿದರು
ಅರಕಲಗೂಡು ನ್ಯಾಯಾಲಯದ ಆವರಣದಲ್ಲಿ ಸೊಳ್ಳೆ ನಾಶಕ್ಕೆ ಆರೋಗ್ಯ ಸಿಬ್ಬಂದಿ ಫಾಗಿಂಗ್‌ ನಡೆಸುತ್ತಿರುವುದು
ಅರಕಲಗೂಡು ನ್ಯಾಯಾಲಯದ ಆವರಣದಲ್ಲಿ ಸೊಳ್ಳೆ ನಾಶಕ್ಕೆ ಆರೋಗ್ಯ ಸಿಬ್ಬಂದಿ ಫಾಗಿಂಗ್‌ ನಡೆಸುತ್ತಿರುವುದು
ಜಾವಗಲ್ ಗ್ರಾಮದ ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್ ಮುಂದೆ ಮಳೆ ನೀರು ಶೇಖರಣೆಗೊಂಡಿದೆ
ಜಾವಗಲ್ ಗ್ರಾಮದ ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್ ಮುಂದೆ ಮಳೆ ನೀರು ಶೇಖರಣೆಗೊಂಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT