ಸೋಮವಾರ, ಜನವರಿ 25, 2021
25 °C
ಉಸ್ತುವಾರಿ ಸಚಿವರು ಸುಳ್ಳು ಹೇಳುವುದನ್ನು ನಿಲ್ಲಿಸಲಿ

ರಣಘಟ್ಟ ಯೋಜನೆ ಬಿಜೆಪಿ ಕೊಡುಗೆ ಅಲ್ಲ; ರೇವಣ್ಣ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜೆಡಿಎಸ್‌, ಕಾಂಗ್ರೆಸ್‌ ಸರ್ಕಾರದಲ್ಲಿ ರಣಘಟ್ಟ ಯೋಜನೆಗೆ ಅನುಮತಿ ನೀಡಿ, ಬಜೆಟ್‌ನಲ್ಲಿ ₹ 100
ಕೋಟಿ ಅನುದಾನ ಮೀಸಲಿರಿಸಲಾಗಿತ್ತು. ಆದರೆ ಈಗ ಬಿಜೆಪಿ ಸರ್ಕಾರದ ಸಾಧನೆ ಎಂಬಂತೆ
ಬಿಂಬಿಸಲಾಗುತ್ತಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಉಸ್ತುವಾರಿ ಸಚಿವನಾಗಿದ್ದ ನಾನು, ಬೇಲೂರು ಶಾಸಕ ಕೆ.ಎಸ್‌.ಲಿಂಗೇಶ್‌ ಅವರ ಒತ್ತಾಯದ ಮೇರೆಗೆ ಯಗಚಿ ನದಿಯ ರಣಘಟ್ಟ ಪಿಕಪ್‌ನಿಂದ ನೀರು ಪಡೆದು ಬೇಲೂರು ಹೋಬಳಿಯ ದ್ವಾರಸಮುದ್ರ ಕೆರೆ ಸೇರಿ 16 ಕರೆಗಳನ್ನು ತುಂಬಿಸುವ ಯೋಜನೆಗೆ ಅನುಮತಿ ನೀಡಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನುದಾನ ಬಿಡುಗಡೆ ಮಾಡಿರಲಿಲ್ಲ.  ಆದರೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಬೇಲೂರು ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದರೂ ರಣಘಟ್ಟ ಯೋಜನೆಗೆ ₹125 ಕೋಟಿ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ. ಅವರು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುಂಠಿತವಾಗಿದೆ. ಜಿಲ್ಲೆಗೆ ಬಿಜೆಪಿ ಸರ್ಕಾರದ ಕೊಡುಗೆ ಏನು ಎಂಬುದನ್ನು ಬಹಿರಂಗ ಪಡಿಸಲಿ. ಹಾಸನ–ಬೇಲೂರು ರೈಲು ಮಾರ್ಗ, ವಿಮಾನ ನಿಲ್ದಾಣ ಕಾಮಗಾರಿ, ಹೇಮಾವತಿ ನಿರಾವರಿ ಯೋಜನೆ ತಡೆ ಹಿಡಿಯಲಾಗಿದೆ. ಅಧಿಕಾರ ವಹಿಸಿಕೊಂಡ ದಿನವೇ ಸಿ.ಎಂ ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದಿದ್ದರು. ಆದರೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳನ್ನು ತಡೆ ಹಿಡಿದಿರುವುದೇ ಬಿಜೆಪಿ ಸಾಧನೆ ಎಂದರು.

ರೈಲ್ವೆ ಮೇಲ್ಸೇತುವೆ, ಹಾಸನ-ದುದ್ದ ರಸ್ತೆಗೆ ಅನುದಾನ, ಮೆಡಿಕಲ್ ಕಾಲೇಜು ಸ್ಥಾಪನೆ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಸುಸಜ್ಜಿತ ಪ್ರಯೋಗಾಲಯ ಸೌಲಭ್ಯ ಕಲ್ಪಿಸಿರುವುದು ಜೆಡಿಎಸ್‌ ಎಂಬುದನ್ನ ಮರೆಯಬಾರದು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಗೆ ಏನೇನು ಅನ್ಯಾಯ ಆಗಿದೆ ಎಂಬುದನ್ನು ಸಮಯ ಬಂದಾಗ ಬಿಚ್ಚಿಡುತ್ತೇನೆ ಎಂದು ಹೇಳಿದರು.

ರಾಜಕೀಯದಲ್ಲಿ ಇನ್ನೂ ಬದುಕಿರುತ್ತೇನೆ. ಎಚ್.ಡಿ. ದೇವೇಗೌಡರ ಮುಂದೆಯೇ ಎಲ್ಲವನ್ನು ಮಾಡಿ ತೋರಿಸುತ್ತೇನೆ. ಬಿಜೆಪಿ ಸರ್ಕಾರ ಜಿಲ್ಲೆಗೆ ಹೊಸ ಕೊಡುಗೆ ನೀಡುವುದು ಬೇಕಿಲ್ಲ. ನಾನು ಕಟ್ಟಿಸಿರುವ ಕಟ್ಟಡಗಳಿಗೆ ಸುಣ್ಣ ಬಳಿದರೆ ಸಾಕು ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು