ಭಾನುವಾರ, ಜನವರಿ 23, 2022
27 °C
₹7.86 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಪ್ರೀತಂ ಗೌಡ ಚಾಲನೆ

ಹಾಸನ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ- ಶಾಸಕ ಪ್ರೀತಂಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ದೊಡ್ಡ ದೊಡ್ಡ ಕಟ್ಟಡ ಕಟ್ಟುವುದಷ್ಟೇ ಅಭಿವೃದ್ಧಿ ಅಲ್ಲ. ಮೊದಲು ಜನರ ಜೀವನ ಮಟ್ಟ ಸುಧಾರಣೆಗೆ ಅಗತ್ಯವಿರುವ ರಸ್ತೆ, ಒಳಚರಂಡಿ, ಉದ್ಯಾನ ಮತ್ತಿತರ ಸಣ್ಣಪುಟ್ಟ ಕಾಮಗಾರಿಗಳನ್ನು ಮಾಡಬೇಕು ಎಂದು ಶಾಸಕ ಪ್ರೀತಂಗೌಡ ಪರೋಕ್ಷವಾಗಿ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.

ನಗರದ ಎಂ.ಜಿ ರಸ್ತೆ ಬಳಿ ವಿದ್ಯಾನಗರ ಬಡಾವಣೆಯಲ್ಲಿ ಬುಧವಾರ ₹7.86 ಕೋಟಿ ವೆಚ್ಚದಲ್ಲಿ ಸ್ವಾತಂತ್ರ್ಯ ಉದ್ಯಾನ ಅಭಿವೃದ್ಧಿ, ಒಳಚರಂಡಿ, ಗ್ರಂಥಾಲಯ ಮತ್ತು ಯೋಗಾಲಯ ನಿರ್ಮಾಣ ಮತ್ತಿತರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ರಾಜ್ಯದ 223 ವಿಧಾನಸಭಾ ಶಾಸಕರು ಹಾಸನದತ್ತ ತಿರುಗಿ ನೋಡುವಂತೆ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ರೂಪುರೇಷೆ ಸಿದ್ಧಗೊಂಡಿದ್ದು, ಮಾದರಿ ಕ್ಷೇತ್ರವನ್ನಾಗಿಸಲು ಪಣ ತೊಟ್ಟಿದ್ದೇನೆ ಎಂದು ಹೇಳಿದರು.

ಈ ಹಿಂದೆ ₹144 ಕೋಟಿ ವೆಚ್ಚದಲ್ಲಿ ಚನ್ನಪಟ್ಟಣ ಕೆರೆ ಅಭಿವೃದ್ಧಿಪಡಿಸಲಾಗುವುದು ಎಂಬುದು ಕೇವಲ ಪೇಪರ್‌ನಲ್ಲಿ ಮಾತ್ರ ಇತ್ತು. ಆದರೆ ಯಾವುದೇ ಯೋಜನೆ ರೂಪುಗೊಂಡಿರಲಿಲ್ಲ. ಯಡಿಯೂರಪ್ಪ ಅವರು ಹಾಸನ ನಗರದ 9 ಪಾರ್ಕ್ ಮತ್ತು 6 ಕೆರೆಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿದ್ದರು ಎಂದು ಮಾಹಿತಿ ನೀಡಿದರು.

ಮೊದಲು ಎಂ.ಜಿ. ರಸ್ತೆ ಬದಿ ಎಲ್ಲೆಂದರಲ್ಲಿ ಕಸ ಹಾಕಲಾಗುತಿತ್ತು. ಇದನ್ನು ತಡೆಯುವ ನಿಟ್ಟಿನಲ್ಲಿ ನಗರದ ಎಂ.ಜಿ ರಸ್ತೆಯಲ್ಲಿ ಫುಡ್‍ಕೋರ್ಟ್ ನಿರ್ಮಿಸಲಾಗಿದೆ. ಇದರಿಂದ ನಗರದ ಸ್ವಚ್ಛತೆ ಕಾಪಾಡುವುದರೊಂದಿಗೆ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಹಾಸನಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಜನರ ಕೆಲಸವನ್ನು ಮಾಡಿಸುತ್ತಿದ್ದೇನೆ. ಹಾಗಾಗಿ ಕಾಮಗಾರಿಯ ಗುಣಮಟ್ಟವನ್ನು ನೋಡಿಕೊಳ್ಳುವುದು ನಾಗರಿಕರ ಜವಾಬ್ದಾರಿ ಎಂದರು.

ಹಸಿರು ಭೂಮಿ ಪ್ರತಿಷ್ಠಾನದ ಪದಾಧಿಕಾರಿಗಳಾದ ಪುಟ್ಟರಾಜು, ಸುಬ್ಬುಸ್ವಾಮಿ, ಪುಟ್ಟೇಗೌಡ, ಕಿಶೋರ್ ಕುಮಾರ್, ಪುಟ್ಟಯ್ಯ, ಆರ್.ಪಿ. ವೆಂಕಟೇಶಮೂರ್ತಿ, ಪ್ರದೀಪ್, ನಿವೃತ್ತ ಅಧಿಕಾರಿ ಚಂದ್ರಯ್ಯ, ಡಾ. ಭಾರತಿ ರಾಜಶೇಖರ್, ನಮ್ಮೂರ ಸೇವೆ ರಾಜೇಗೌಡ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು