ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇವಣ್ಣ ಪರ ಗುತ್ತಿಗೆದಾರರಿಗೆ ಅನುಕೂಲ

ಮೂಗಿಗೆ ತುಪ್ಪ ಸವರು ಕೆಲಸ: ಯೋಗಾ ರಮೇಶ್ ಟೀಕೆ
Last Updated 6 ಜುಲೈ 2018, 13:12 IST
ಅಕ್ಷರ ಗಾತ್ರ

ಹಾಸನ : ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಜನಸಾಮಾನ್ಯರ ನಿರೀಕ್ಷೆ ಹುಸಿಗೊಳಿಸಿದ್ದು, ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾರಮೇಶ್ ಟೀಕಿಸಿದರು.

‘ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಅವರ ಪ್ರತಿರೋಧದ ನಡುವೆ ಮಂಡಿಸಿದ ಬಜೆಟ್ ಜನ ಸಾಮಾನ್ಯರ ವಿರೋಧಿಯಾಗಿದೆ. ಚುನಾವಣೆ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆ ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇದು ರಾಜ್ಯದ ಸಮಗ್ರ ಅಭಿವೃದ್ಧಿಗೆ ತೊಡಕು ಉಂಟು ಮಾಡಲಿದೆ. ಕೇವಲ ಹಾಸನ, ಮಂಡ್ಯ ಮತ್ತು ರಾಮನಗರಕ್ಕೆ ಸೀಮಿತವಾದ ಬಜೆಟ್ ಆಗಿದೆ. ಸರ್ವ ಜನಾಂಗದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಹಾಸನ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಜನರು ಗೆಲ್ಲಿಸಿದ್ದಾರೆ. ಜಿಲ್ಲೆಗೆ ನ್ಯಾಯ ಒದಗಿಸುವಂತಹ ಕೆಲಸ ಮಾಡಿಲ್ಲ. ಜಿಲ್ಲೆಯ ವಾಣಿಜ್ಯ ಬೆಳೆಯಾದ ಆಲೂಗೆಡ್ಡೆಗೆ ಸಂಬಂಧಿಸಿದ ಯಾವುದೇ ಯೋಜನೆ ಇಲ್ಲ, ಬೂವನಹಳ್ಳಿ ವಿಮಾನ ನಿಲ್ದಾಣ ಕಾಮಗಾರಿ ಬಗ್ಗೆ ಪ್ರಸ್ತಾಪಸಿಲ್ಲ. ಗೊರೂರು ಜಲಾಶಯದ ಆವರಣದಲ್ಲಿ ಕೆಆರ್ಎಸ್ ಮಾದರಿ ಉದ್ಯಾನ ನಿರ್ಮಾಣ ಮತ್ತು ಬುದ್ಧ ವಿಹಾರ ನಿರ್ಮಾಣಕ್ಕೆ ಅನುದಾನ ಘೋಷಣೆ ಮಾಡಿಲ್ಲ. ಜಿಲ್ಲೆಯ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಕೆಲಸ ಆಗಿಲ್ಲ. ಜಿಲ್ಲೆಯಲ್ಲಿ ಏತ ನೀರಾವರಿಗಳ ಬಗ್ಗೆ ಬಜೆಟ್ ನಲ್ಲಿ ಯಾವುದೇ ಚಕಾರವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.


‘ಜಿಲ್ಲೆಗೆ ಕೊಡುಗೆಗಳ ಮಹಾಪೂರ ಕೂಡುಗೆ ಕೊಟ್ಟಿದ್ದಾರೆ ಎನ್ನುವುದು ಸುಳ್ಳು. ಕೇವಲ ಹೊಳೆನರಸೀಪುರ ಕ್ಷೇತ್ರವನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ರೇವಣ್ಣ ಕ್ಷೇತ್ರದ 2 ಹೋಬಳಿಗಳ ಕೆರೆ ತುಂಬಿಸಲು ₹ 70 ಕೋಟಿ ನೀಡಲಾಗಿದೆ. ಹಾಸನ ಡೈರಿಗೆ ₹ 50 ಕೋಟಿ ನೀಡಲಾಗಿದ್ದು, ಹಾಮೂಲ್‌ ರೇವಣ್ಣನವರ ಖಾಸಗಿ ಕಂಪನಿಯಾದಂತಾಗಿದೆ. ಅದನ್ನು ಬಿಟ್ಟು ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅನುದಾನ ನೀಡಿಲ್ಲ. ಹಾಸನಕ್ಕೆ ಕೊಟ್ಟಿರುವ ಅನುದಾನದಿಂದ ಕೇವಲ ರೇವಣ್ಣ ಪರ ಗುತ್ತಿಗೆದಾರರಿಗೆ ಹೆಚ್ಚು ಅನುಕೂಲವಾಗಲಿದೆ. ಇದರಿಂದ ಜನ ಸಾಮಾನ್ಯರಿಗೆ ಅನುಕೂಲವಾಗುವುದಿಲ್ಲ’ ಎಂದು ಕಿಡಿಕಾರಿದರು.

ಮುಖಂಡ ನವಿಲೆ ಅಣ್ಣಪ್ಪ ಮಾತನಾಡಿ, ‘ರಾಜ್ಯ ಸರ್ಕಾರ ವಿದ್ಯುತ್ ದರವನ್ನು 20 ಪೈಸೆ ಹೆಚ್ಚಿಸಿರುವುದು ಇಂಡಿಯನ್ ಎಲೆಕ್ಟ್ರಿಕಲ್ ಕಾಯ್ದೆಗೆ ವಿರುದ್ಧವಾಗಿದೆ. ಹಾಸನ ನಗರದ ಚನ್ನಪಟ್ಟಣ ಕೆರೆಯ ಅಭಿವೃದ್ಧಿಗಾಗಿ ಸರೋವರ ಪ್ರಾಧಿಕಾರ ವತಿಯಿಂದ ₹ 5 ಕೋಟಿ ಅನುದಾನ ನೀಡಲಾಗಿತ್ತು. ಆ ಹಣ ಏನಾಯಿತು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಸಚಿವ ಎಚ್.ಡಿ.ರೇವಣ್ಣ ಉತ್ತರಿಸಬೇಕು’ ಎಂದು ಆಗ್ರಹಿಸಿದರು.
ನಗರ ಘಟಕದ ಶೋಭನ್ ಬಾಬು, ಖಜಾಂಚಿ ಲೋಕೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT