ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೊಪ್ಪಲು ನಿವಾಸಿಗಳಿಂದ ರಸ್ತೆ ತಡೆ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯ
Last Updated 28 ಏಪ್ರಿಲ್ 2022, 14:40 IST
ಅಕ್ಷರ ಗಾತ್ರ

ಹಾಸನ: ‘ರಾಷ್ಟ್ರೀಯ ಹೆದ್ದಾರಿ 373ಕ್ಕೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಈವರೆಗೂ ಪರಿಹಾರ ನೀಡಿಲ್ಲ. ಪರಿಹಾರ ನೀಡಿದ ಬಳಿಕ ರಸ್ತೆ ವಿಸ್ತರಣೆ ಮಾಡಬೇಕು’ ಎಂದು ಆಗ್ರಹಿಸಿ ಹೊಸಕೊಪ್ಪಲು ಗ್ರಾಮಸ್ಥರು ರಸ್ತೆ ಮಧ್ಯೆ ಶಾಮಿಯಾನ ಹಾಕಿ ಧರಣಿ ನಡೆಸಿದರು.

‘ಬೊಮ್ಮನಾಯಕನಹಳ್ಳಿ ಚನ್ನಪಟ್ಟಣ, ಸಂಕಲಾಪರ, ನಾಗತವಳ್ಳಿ, ಎಂ. ಹೊಸಕೊಪ್ಪಲು ನಗರಸಭೆ 35ನೇ ವಾರ್ಡ್‌ಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 373ರ ಕಾಮಗಾರಿ ಸ್ಥಗಿತಗೊಂಡಿದೆ. ಒಂದು ಭಾಗದಲ್ಲಿ ಕಾಂಕ್ರೀಟ್ ರಸ್ತೆ ಮಾಡಿ, ಮತ್ತೊಂದು ಭಾಗದಲ್ಲಿ ರಸ್ತೆ ಮಾಡಿಲ್ಲ. ಅದು ಕೂಡ ಅವೈಜ್ಞಾನಿಕವಾಗಿದೆ’ ಎಂದು ನಿವಾಸಿಗಳು ಆರೋಪಿಸಿದರು.

‘ರಸ್ತೆ ವಿಸ್ತರಣೆ ಸಮಯದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬಂದು ಸ್ಥಳ ಪರಿಶೀಲಿಸಿದ್ದರು. ಮತ್ತಷ್ಟು ಜಾಗದ ಅಗತ್ಯ ಇರುವುದರಿಂದ ಈ ಜಾಗಕ್ಕೆ ಒಳಪಡುವ ನಿವೇಶನ ಮತ್ತು ಮನೆಗಳಿಗೆ ಸೂಕ್ತ ಪರಿಹಾರ ನೀಡುವುದಕ್ಕಾಗಿ ಮೌಖಿಕವಾಗಿ ತಿಳಿಸಿದ್ದಾರೆ’ ಎಂದರು.

‘ರಾಷ್ಟ್ರೀಯ ಹೆದ್ದಾರಿ ಅರ್ಧಕ್ಕೆ ನಿಂತಿದ್ದು, ಇದು ಕೈಗಾರಿಕಾ ಪ್ರದೇಶ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಅವೈಜ್ಞಾನಿಕವಾಗಿರುವುದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗಿದೆ’ ಎಂದು ದೂರಿದರು.

‘ಮಳೆ ಪ್ರಾರಂಭವಾಗಿದ್ದು, ಚರಂಡಿ ಇಲ್ಲದಿರುವುದರಿಂದ ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗುತ್ತಿದೆ. ಮುಖ್ಯವಾಗಿ ಇದು ಹಾಸನ–ಮೈಸೂರು ನಡುವಿನ ಮುಖ್ಯ ರಸ್ತೆ ಆಗಿರುವುದರಿಂದ ಈ ಭಾಗದಲ್ಲಿ ಹೆಚ್ಚು ವಾಹನ ಸಂಚರಿಸುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪರಿಹಾರ ನೀಡಬೇಕು. ನಂತರ ರಸ್ತೆ ವಿಸ್ತರಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಧರಣಿಯಲ್ಲಿ ನಗರಸಭೆ 35ನೇ ವಾರ್ಡ್‌ ಸದಸ್ಯೆ ಕೆ.ಲತಾದೇವಿ, ನಿವಾಸಿಗಳಾದ ಕೃಷ್ಣಕುಮಾರ್, ಶಿವಲಿಂಗೇಗೌಡ, ಶೇಖರ್, ಜಗದೀಶ್, ವೇಣುಕುಮಾರ್, ರಾಮೇಗೌಡ, ರಾಜಣ್ಣ, ಸಂತೋಷ್ ಕುಮಾರ್, ಅಶೋಕ್, ರಘು, ಪಾಪೇಗೌಡ, ಲೋಕೇಶ್, ರಮೇಶ್, ಗೀತಾ, ಯೋಗೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT