ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿ ಸಂಬಂಧಿಕರ ವಿಶ್ರಾಂತಿಗೆ ‘ಧರ್ಮಛತ್ರ’

ಹಿಮ್ಸ್‌ನಲ್ಲಿ ₹ 1.90 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ
Last Updated 8 ಜುಲೈ 2018, 14:18 IST
ಅಕ್ಷರ ಗಾತ್ರ

ಹಾಸನ : ಜಿಲ್ಲಾಸ್ಪತ್ರೆಯಲ್ಲಿ ಒಳ ರೋಗಿಗಳ ಸಂಬಂಧಿಕರು ಆಸ್ಪತ್ರೆಯಲ್ಲಿ ತಂಗಲು ಹಾಗೂ ವಿಶ್ರಾಂತಿ ಪಡೆಯಲು ಧರ್ಮಛತ್ರ ನಿರ್ಮಾಣ ಮಾಡಲಾಗುತ್ತಿದೆ.

ರೋಗಿಗಳ ಆರೈಕೆ ಮಾಡುವವರು ವಿಶ್ರಾಂತಿಗೆ ಜಾಗ ಇಲ್ಲದೆ ಪರದಾಡುವ ಸ್ಥಿತಿ ಮನಗಂಡ ಹಾಸನಾಂಬ ಧರ್ಮಛತ್ರ ಸಮಿತಿ, ಧರ್ಮಛತ್ರ ನಿರ್ಮಾಣ ಮುಂದಾಗಿದೆ. ಈ ಸಾಮಾಜಿಕ ಕಾರ್ಯಕ್ಕೆ ನಗರದ ಕೆಲ ದಾನಿಗಳು ಕೈ ಜೋಡಿಸಿದ್ದಾರೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಅಂದಾಜು ₹ 1.9 ಕೋಟಿ ವೆಚ್ಚದಲ್ಲಿ ಧರ್ಮಛತ್ರ ನಿರ್ಮಾಣ ಕೆಲಸ ಅಂತಿಮ ಹಂತಕ್ಕೆ ಬಂದಿದೆ. ಆಸ್ಪತ್ರೆಗೆ ಹೊಂದಿಕೊಂಡಿರುವ ಹೈಸ್ಕೂಲ್‌ ಮೈದಾನದಲ್ಲಿ 55 ಚದರಡಿ ವಿಸ್ತೀರ್ಣದ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ತಲಾ 50 ಪುರುಷರು, ಮಹಿಳೆಯರು ತಂಗುವ ಕಟ್ಟಡದಲ್ಲಿ ಮಂಚ, ಹಾಸಿಗೆ, ಸ್ನಾನಕ್ಕೆ ಸೋಲಾರ್‌ ಬಿಸಿ ನೀರು, ಶೌಚಾಲಯ, ಬಟ್ಟೆ ತೊಳೆಯಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.

ಸರ್ಕಾರ ಧರ್ಮಛತ್ರ ನಿರ್ಮಾಣಕ್ಕೆ ಅಗತ್ಯ ಭೂಮಿ ನೀಡಿದೆ. ಆದರೆ ಅನುದಾನ ನೀಡಿಲ್ಲ. ಉಡುಪಿ ಪೇಜಾವರ ಮಠ ₹ 1 ಲಕ್ಷ, ನಗರದ ಎಎಸ್‌ಎಂ ಆಸ್ಪತ್ರೆಯು ಡಾ. ದಿನೇಶ್‌ ಸ್ಮರಣಾರ್ಥ ₹ 1 ಲಕ್ಷ, ಎಸ್‌ಆರ್ಎಸ್‌ ಜ್ಯೂಯಲರ್ಸ್‌ ₹ 1 ಲಕ್ಷ ಸೇರಿದಂತೆ ಹಲವರು ಆರ್ಥಿಕ ಸಹಾಯ ನೀಡಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಪ್ರತಿದಿನ 600 ರಿಂದ 800 ಒಳ ರೋಗಿಗಳು ದಾಖಲಾಗಿರುತ್ತಾರೆ. ಅವರ ಆರೈಕೆಗೆ ಒಬ್ಬರಾದರೂ ಸಂಬಂಧಿಕರು ಇರುತ್ತಾರೆ. ಇತರರು ಆಸ್ಪತ್ರೆಯಲ್ಲಿ ಉಳಿಯಲು ಅವಕಾಶ ಇಲ್ಲ. ರಾತ್ರಿ ವೇಳೆ ಆಸ್ಪತ್ರೆ ಆವರಣ, ಬಸ್‌, ರೈಲು ನಿಲ್ದಾಣ ಆಶ್ರಯಿಸುವುದು ಸಾಮಾನ್ಯ. ಈ ಸಮಸ್ಯೆ ಅರಿತು ಸಮಿತಿಯು ಆಶ್ರಯ ತಾಣ ನಿರ್ಮಿಸಿದೆ.

‘2017ರಲ್ಲಿ ಹಾಸನಾಂಬ ಧರ್ಮಛತ್ರ ಸಮಿತಿ ನೋಂದಣಿ ಮಾಡಿಸಲಾಯಿತು. ಹಿಮ್ಸ್‌ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್‌ ಸರ್ಕಾರದಿಂದ ಭೂಮಿ ಕೊಡಿಸಿದರು. ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇಲ್ಲಿ 100 ಮಂದಿ ವಾಸ್ತವ್ಯಕ್ಕೆ ಅನುಕೂಲ ಮಾಡಿದ್ದು, ಮುಂದಿನ ದಿನಗಳಲ್ಲಿ ಮಧ್ಯಾಹ್ನದ ಊಟ ಕೊಡುವ ಚಿಂತನೆ ಇದೆ. ಉದ್ಘಾಟನಾ ಸಮಾರಂಭಕ್ಕೆ ಮೈಸೂರಿನ ರಾಜವಂಶಸ್ಥ ಯದುವೀರ್‌ ಹಾಗೂ ಇತರೆ ಗಣ್ಯರನ್ನು ಆಹ್ವಾನಿಸಲಾಗುವುದು’ ಎಂದು ಧರ್ಮಛತ್ರ ಸಮಿತಿ ಅಧ್ಯಕ್ಷ ಡಾ.ಗುರುರಾಜ ಹೆಬ್ಬಾರ್‌ ತಿಳಿಸಿದರು.

‘ಹಾಸನಾಂಬ ಧರ್ಮಛತ್ರ ಸಮಿತಿಗೆ ಆರ್ಥಿಕ ನೆರವು ನೀಡಲು ಬಂದವರಿಂದ ಅಗತ್ಯದಷ್ಟು ಮಾತ್ರ ಹಣ ಪಡೆದು, 25 ದಾನಿಗಳ ನೆರವನ್ನು ನಿರಾಕರಿಸಲಾಗಿದೆ. ಜಿಲ್ಲಾ ಆಸ್ಪತ್ರೆ ತುರ್ತುನಿಗಾ ಘಟಕದಿಂದ ಧರ್ಮಛತ್ರಕ್ಕೆ ನೇರ ಫೋನ್ ಸಂಪರ್ಕ ಕಲ್ಪಿಸಲಾಗಿದೆ. ಒಳರೋಗಿಗಳ ಸಂಬಂಧಿಕರಿಗೆ ಆಸ್ಪತ್ರೆಯಿಂದ ನೀಡುವ ಪಾಸ್ ನಲ್ಲಿ ದೂರವಾಣಿ ಸಂಖ್ಯೆ ನಮೂದಾಗಿರುತ್ತದೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ರೋಗಿಗಳ ಸಂಬಂಧಿಕರನ್ನ ದೂರವಾಣಿ ಕರೆ ಮಾಡಿ ಕರೆಸಿಕೊಳ್ಳಬಹುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT