6
ಕಾಮಗಾರಿ ಪರಿಶೀಲಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್

ಸತತ ಮಳೆ: ಎತ್ತಿನಹೊಳೆ ಯೋಜನೆ ವಿಳಂಬ

Published:
Updated:
ಸಕಲೇಶಪುರ ತಾಲ್ಲೂಕಿನಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಪರಿಶೀಲಿಸಿದರು.

ಸಕಲೇಶಪುರ: ರಾಜ್ಯದ ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಸತತ ಮಳೆಯಿಂದ ವಿಳಂಬವಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ತಾಲ್ಲೂಕಿನ ವಿವಿಧೆಡೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಮಳೆಯ ನಡುವೆಯೇ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಯೋಜನೆ ಪ್ರಗತಿ ಬಗ್ಗೆ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 'ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 29 ತಾಲ್ಲೂಕಿನ ಸುಮಾರು 68 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಯೋಜನೆಯ ಬಗ್ಗೆ ಅಧ್ಯಯನ ನಡೆಸಿದ್ದೇನೆ. ಪುಸ್ತಕದಲ್ಲಿ ಅಧಿಕಾರಿಗಳು ನೀಡುವ ವರದಿಯಿಂದ ಸಮಾಧಾನ ಇಲ್ಲ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಭೇಟಿ ನೀಡುವ ಬಗ್ಗೆ ತಿಳಿಸಿದ್ದೇನೆ. ಮಲೆನಾಡಿನಲ್ಲಿ ವರ್ಷದಲ್ಲಿ ಆರು ತಿಂಗಳು ಮಳೆ ಇರುತ್ತದೆ. ಹಾಗಾಗಿ ಅನೇಕ ರೀತಿಯ ಸಮಸ್ಯೆ ಮತ್ತು ಸವಾಲುಗಳಿರುವ ಕಾರಣ ಕಾಮಗಾರಿ ವಿಳಂಬವಾಗಿದೆ. ಆದರೂ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಬಯಲು ಸೀಮೆಯ ಜಿಲ್ಲೆ ಜನರಿಗೆ ಅನುಕೂಲ ಮಾಡಿಕೊಡುವುದು ಸರ್ಕಾರದ ಆದ್ಯತೆಯಾಗಿದೆ’ ಎಂದು ವಿವರಿಸಿದರು.

ಯೋಜನೆಗೆ ಈ ಭಾಗದ ರೈತರು, ಬೆಳೆಗಾರರು ವಿರೋಧ ವ್ಯಕ್ತಪಡಿಸದೆ, ಭೂಮಿ ಬಿಟ್ಟುಕೊಟ್ಟಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆ ಹಾಗೂ ಅವರ ಅಹವಾಲುಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು ಎಂದರು. ಅರಸೀಕೆರೆ ತಾಲ್ಲೂಕಿನ 34 ಕೆರೆ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳ 527 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಆದ್ದರಿಂದ ಮೊದಲ ಹಂತದ ಕಾಮಗಾರಿಯನ್ನು ಶೀಘ್ರ ಮುಗಿಸಬೇಕು ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಒತ್ತಾಯಿಸಿದರು.

ಸದಾನಂದಗೌಡರಿಗೆ ತಿರುಗೇಟು:
ಸಮ್ಮಿಶ್ರ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು ಎಂಬ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್‌, ‘ಅವರು ಯಾವಾಗ ಜ್ಯೋತಿಷಿಯಾದರು. ಸರ್ಕಾರ ಬೀಳಲಿದೆ ಎಂದು ಗೌಡರು ಆನಂದವಾಗಿದ್ದಾರೆ. ಅವರು ಹಾಗೆಯೇ ಇರಲಿ. ರಾಜ್ಯದಲ್ಲಿ ವಿರೋಧ ಪಕ್ಷ ಸಂಪೂರ್ಣ ನಿದ್ರಾವಸ್ಥೆಯಲ್ಲಿದ್ದು, ಮೊದಲು ಅವರು ಎಚ್ಚರಿಸಲಿ’ ಎಂದು ಸಲಹೆ ನೀಡಿದರು.

ಕುಮಾರಸ್ವಾಮಿ ಮಂಡಿಸಿದ ಬಜೆಟ್ ಶಕ್ತಿಶಾಲಿಯಾಗಿದೆ. ಯಾರಿಗೂ ತಾರತಮ್ಯ ಮಾಡಿಲ್ಲ. ರೈತರ ಸಾಲಮನ್ನಾ ಮಾಡುವ ಕಾರಣದಿಂದ ಪೆಟ್ರೋಲ್, ಡೀಸೆಲ್ ಮೇಲೆ ಅಲ್ಪ ಪ್ರಮಾಣದ ಸೆಸ್ ವಿಧಿಸಲಾಗಿದೆ. ಅದರಿಂದ ಯಾರಿಗೂ ಹೊರೆಯಾಗದು. ಕೇವಲ ರಾಜಕೀಯ ಕಾರಣಕ್ಕೆ ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ ಎಂದರು.

 ಕಾವೇರಿ ನೀರು ಬಿಡುವಂತೆ ಕಾವೇರಿ ನಿರ್ವಹಣಾ ಮಂಡಳಿ ಆದೇಶ ಮಾಡಿರುವ ಆದೇಶ ಕುರಿತು ಪ್ರಶ್ನಿಸಿದಾಗ, ‘ರಾಜ್ಯದ ನೀರಿನ ಲಭ್ಯತೆ ಬಗ್ಗೆ ತಮಿಳುನಾಡಿನವರು ಬಂದು ಅಧ್ಯಯನ ಮಾಡಿ ಹೋಗಲಿ. ದೇವರ ದಯೆಯಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮುಂದೆ ನೋಡೋಣ’ ಎಂದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !