ಸೋಮವಾರ, ಡಿಸೆಂಬರ್ 16, 2019
17 °C
ಹಿಮ್ಸ್‌ನಲ್ಲಿ ಸಿಗದ ಸೌಲಭ್ಯ: ಖಾಸಗಿ ಕೇಂದ್ರಕ್ಕೆ ಬಂದ ರೋಗಿಗಳು

ಹಾಸನ | ಸ್ಕ್ಯಾನಿಂಗ್‌ ಸೆಂಟರ್‌ಗೆ ಡಿಸಿ ಹಠಾತ್ ಭೇಟಿ

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರದ ಖಾಸಗಿ ಸ್ಕ್ಯಾನಿಂಗ್‌ ಸೆಂಟರ್‌ಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಸೋಮವಾರ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರ್ಕಾರಿ ಅಸ್ಪತ್ರೆಗಳಲ್ಲಿ ಸೌಲಭ್ಯಗಳಿದ್ದರೂ ಖಾಸಗಿ ಸ್ಕ್ಯಾನಿಂಗ್‌ ಸೆಂಟರ್‌ಗೆ ಚೀಟಿ ಬರೆದು ಕೊಟ್ಟ ಪ್ರಕರಣಗಳನ್ನು ಪರಿಶೀಲಿಸಿ ರೋಗಿಗಳಿಂದ ಮಾಹಿತಿ ಪಡೆದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೃಷ್ಣಮೂರ್ತಿ, ಹಾಸನ ತಾಲ್ಲೂಕು ವೈದ್ಯಾಧಿಕಾರಿ ಡಾ. ವಿಜಯ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಹಿರಣ್ಣಯ್ಯ ಅವರೊಂದಿಗೆ ನಗರದ ಯೂನಿಟಿ ಸ್ಕ್ಯಾನಿಂಟ್‌ ಸೆಂಟರ್‌ಗೆ ಭೇಟಿ ನೀಡಿ, ಪ್ರತಿದಿನ ಕೇಂದ್ರದಲ್ಲಿ ನಡೆಯುತ್ತಿರುವ ಸ್ಕ್ಯಾನಿಂಗ್‌ಗಳ ಸಂಖ್ಯೆ, ಇರುವ ಸೌಲಭ್ಯಗಳು, ಸರ್ಕಾರಿ ಆಸ್ಪತ್ರೆಯಿಂದ ಚೀಟಿ ಬರೆಸಿ ತಂದಿರುವ ರೋಗಿಗಳನ್ನು ವಿಚಾರಿಸಿ ವೈದ್ಯಾಧಿಕಾರಿಗಳಿಂದಲೂ ಮಾಹಿತಿ ಪಡೆದರು.

ಜಿಲ್ಲಾ ಆಸ್ಪತ್ರೆಯಲ್ಲಿ ಸೌಲಭ್ಯ ಇದ್ದರೂ ಬೇರೆಡೆಗೆ ಬರೆದುಕೊಟ್ಟ ಪ್ರಕರಣದಲ್ಲಿ ಸಂಬಂಧಪಟ್ಟವರಿಂದ ವಿವರಣೆ ಪಡೆಯಲು ಗಿರೀಶ್‌ ಸೂಚಿಸಿದರು. ಅಲ್ಲದೇ ಜಿಲ್ಲಾ ಆಸ್ಪತ್ರೆಗೆ ಇನ್ನಷ್ಟು ಸ್ಕ್ಯಾನಿಂಗ್‌ ತಜ್ಞರನ್ನು ನೇಮಿಸಿ ಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವ ಸ್ಕ್ಯಾನಿಂಗ್‌ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಕಡ್ಡಾಯವಾಗಿ ನೀಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ ಅವರು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

‘ಸರ್ಕಾರಿ ಆಸ್ಪತ್ರೆ ವೈದ್ಯರು ಖಾಸಗಿ ಕೇಂದ್ರಗಳಿಗೆ ಸ್ಕ್ಯಾನಿಂಗ್‌ ಮಾಡಿಸಲು ಶಿಫಾರಸು ಮಾಡುತ್ತಿರುವ ಬಗ್ಗೆ ರೈತರ ಸಂವಾದದಲ್ಲಿ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಸ್ಕ್ಯಾನಿಂಗ್ ಸೆಂಟರ್‌ಗೆ ಭೇಟಿ ನೀಡಿ, ಪರಿಶೀಲಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯ ಇದ್ದರೂ ನಾಲ್ವರು ರೋಗಿಗಳು ವೈದ್ಯರ ಚೀಟಿ ತೆಗೆದುಕೊಂಡು ಇಲ್ಲಿಗೆ ಬಂದಿದ್ದಾರೆ.

ಹೆಚ್ಚಿನ ದರ ಪಡೆಯದಂತೆ ಸ್ಕ್ಯಾನಿಂಗ್‌ ಸೆಂಟರ್‌ಗೂ ಎಚ್ಚರಿಕೆ ನೀಡಲಾಗಿದೆ. ಸರ್ಕಾರಿ ಆಸ್ಪತ್ರೆ ಸೌಲಭ್ಯ ಪ್ರತಿಯೊಬ್ಬರಿಗೂ ದೊರೆಯಬೇಕು. ಮುಂದಿನ ದಿನಗಳಲ್ಲಿ ಇತರೆ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಗುವುದು’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)