ಬುಧವಾರ, ನವೆಂಬರ್ 13, 2019
23 °C

ಬೇಲೂರು ‌| ಅಕ್ರಮ ಗೋಮಾಂಸ ಮಾರಾಟ: 2 ಅಂಗಡಿಗೆ ಬೀಗ

Published:
Updated:
Prajavani

ಬೇಲೂರು: ಈ ಪಟ್ಟಣದ ಮುಸ್ತಫಾ ಬೀದಿ, ಮಸೀದಿ ಬೀದಿಗಳಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಂಗಳವಾರ ದಾಳಿ ನಡೆಸಿದ ಪುರಸಭೆ ಸಿಬ್ಬಂದಿ 2 ಅಂಗಡಿಗಳಿಗೆ ಬೀಗ ಮುದ್ರೆ ಹಾಕಿದರು.

ಪೊಲೀಸ್‌ ಭದ್ರತೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಎಸ್‌.ಎಸ್‌.ಮಂಜುನಾಥ್‌ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಒಟ್ಟು ಒಂಬತ್ತು ಅಂಗಡಿಗಳಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದು, ಎರಡು ಅಂಗಡಿಗಳು ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವುಗಳ ಬಾಗಿಲನ್ನು ಮುಚ್ಚಿಸಿ,  ಮಾಂಸ ಕತ್ತರಿಸುವ ಸಲಕರಣೆಗಳು ಮತ್ತು ಗೋವುಗಳ ತ್ಯಾಜ್ಯಗಳನ್ನು ಪುರಸಭೆ ಸಿಬ್ಬಂದಿ ವಶಪಡಿಸಿಕೊಂಡರು.

ಅಲ್ಲದೇ, ಕಟ್ಟಡದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಕುಡಿಯುವ ನೀರಿನ ಸಂಪರ್ಕ, ಒಳ ಚರಂಡಿ ಸಂಪರ್ಕ ಮತ್ತು ವಿದ್ಯುತ್‌ ಸಂಪರ್ಕಗಳನ್ನು ಸ್ಥಳದಲ್ಲಿಯೇ ಕಡಿತಗೊಳಿಸಲಾಯಿತು. 

ಪಟ್ಟಣದಲ್ಲಿ ವ್ಯಾಪಕವಾಗಿ ಗೋಹತ್ಯೆ ನಡೆಸಿ ಗೋಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಇತ್ತೀಚೆಗೆ ಪಟ್ಟಣಕ್ಕೆ ಭೇಟಿ ನೀಡಿದ್ದ ಲೋಕಾಯುಕ್ತ ಡಿವೈಎಸ್‌ಪಿ ಎಚ್‌.ಟಿ.ಭಾನು ಅವರ ಬಳಿ ಸಾರ್ವಜನಿಕರು ದೂರು ನೀಡಿದ್ದರಲ್ಲದೆ, ಅಕ್ರಮ ಗೋಮಾಂಸ ತಡೆಗಟ್ಟುವಂತೆ ಒತ್ತಾಯಿಸಿದ್ದರು.

‘ಪಟ್ಟಣದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ನಡೆಯುತ್ತಿತ್ತು. ಇವರಿಗೆ ಹಲವು ಬಾರಿ ನೋಟಿಸ್‌ ನೀಡಲಾಗಿತ್ತು. ಗೋಮಾಂಸ ಮಾರಾಟ ಮಾಡದಂತೆ ತಿಳಿ ಹೇಳಲಾಗಿತ್ತು. ಆದರೂ ಗೋಮಾಂಸ ಮಾರಾಟ ಮಾಡುತ್ತಿದ್ದರು. ಮತ್ತೆ  ಮಾರಾಟ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಎಸ್‌.ಎಸ್‌.ಮಂಜುನಾಥ್‌ ಎಚ್ಚರಿಸಿದರು.

ಪಶು ಇಲಾಖೆಯ ಸಹಾಯಕ ನಿರ್ದೇಶಕ ಅಸ್ಲಂಪಾಷ, ಆರೋಗ್ಯಾಧಿಕಾರಿ ಮಧುಸೂದನ್‌, ಪೊಲೀಸ್‌ ಕಾನ್‌ಸ್ಟೆಬಲ್‌ ಮನುಕುಮಾರ್‌ ಇದ್ದರು.

ಪ್ರತಿಕ್ರಿಯಿಸಿ (+)