ಬುಧವಾರ, ಏಪ್ರಿಲ್ 21, 2021
31 °C
ಲಾರಿ, ಟ್ರ್ಯಾಕ್ಟರ್‌, ಚಿನ್ನಾಭರಣ ಸೇರಿ ₹20 ಲಕ್ಷ ಮೌಲ್ಯದ ವಸ್ತು ವಶ

ಪ್ರತ್ಯೇಕ ಪ್ರಕರಣ: ಐದು ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಹೊಳೆನರಸೀಪುರ ತಾಲ್ಲೂಕಿನಲ್ಲಿ ನಡೆದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ₹ 20.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.

ಬಂಧಿತರ ಪೈಕಿ ಆರೋಪಿ ರೂಪರಾಜ ಎಂಬಾತ ಹೊರ ಜಿಲ್ಲೆ, ರಾಜ್ಯಗಳಲ್ಲಿ 13 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ವಶಪಡಿಸಿಕೊಂಡಿರುವ ಟ್ರ್ಯಾಕ್ಟರ್‌, ಟ್ರೈಲರ್‌, ಲಾರಿ ಹಾಗೂ ಚಿನ್ನಾಭರಣವನ್ನು ವಾರಸುದಾರರಿಗೆ ಹಿಂತಿರುಗಿಸಲಾಗುವುದು ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ ಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಂದೂವರೆ ವರ್ಷದ ಹಿಂದೆ ಹಾಸನ ಹಾಗೂ ಬೈಂದೂರಿನಲ್ಲಿ ಟ್ರ್ಯಾಕ್ಟರ್ ಹಾಗೂ ಲಾರಿ ಕಳ್ಳತನ ಮಾಡಿದ್ದ ಹಾಸನ ತಾಲ್ಲೂಕಿನ ಎಚ್‌. ಆಲದಹಳ್ಳಿ ಗ್ರಾಮದ ರೂಪೇಶ್ ಹಾಗೂ ಚನ್ನರಾಯಪಟ್ಟಣದ ದಂಡಿಗನಹಳ್ಳಿ ಹೋಬಳಿ ಕುಂದೂರು ಗ್ರಾಮದ ಗೌರೀಶ್ ನನ್ನು ಬಂಧಿಸಲಾಗಿದೆ. ಮಾ. 2 ರಂದು ಹೊಳೆನರಸೀಪುರ-ಚನ್ನರಾಯಪಟ್ಟಣ ರಸ್ತೆಯಲ್ಲಿ
ವಾಹನಗಳ ತಪಾಸಣೆ ನಡೆಸುವ ವೇಳೆ ಟ್ರ‍್ಯಾಕ್ಟರ್‌ ನಂಬರ್ ಪ್ಲೇಟ್ ಉಜ್ಜಿರುವುದು ಕಂಡು ಬಂತು. 

ವಿಚಾರಣೆ ನಡೆಸಿದಾಗ ಹಾಸನದ ಬೈಪಾಸ್ ರಸ್ತೆಯ ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕಳ್ಳತನ ಮಾಡಿ ಮಾರಾಟ ಮಾಡಲು ತನ್ನ ಬಳಿಯೇ ಇಟ್ಟುಕೊಂಡಿದ್ದ. ನಂತರ ಬೈಂದೂರಿನಲ್ಲಿ ಕಳವು ಮಾಡಿದ್ದ ಲಾರಿಯನ್ನು ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಪಮ್ಯಾನಾಯಕ ಅವಿಗೆ ಮಾರಾಟ ಮಾಡಿದ್ದಾನೆ. ಒಟ್ಟು ₹14ಲಕ್ಷ ಮೌಲ್ಯದ
ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ರೂಪರಾಜ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದು, ಸಕಲೇಶಪುರ, ಬೆಂಗಳೂರು, ಹಾವೇರಿ ಸೇರಿದಂತೆ ವಿವಿಧ ರಾಜ್ಯಗಳ ಠಾಣೆಗಳಲ್ಲಿ ಈತ ವಿರುದ್ಧ 13 ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

ಮನೆ ಕೆಲಸಗಾರರ ಬಂಧನ:
ತೋಟದ ಮನೆಯಲ್ಲಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದ ಮನೆಕೆಲಸಗಾರರಾದ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಹುಲಿಗೆಪ್ಪ ವಡ್ಡರ್‌, ಧಾರವಾಡದ ಬಾಬು ಅವರನ್ನು ಬಂಧಿಸಲಾಗಿದೆ. ನೆಕ್ಲಸ್, 25 ಗ್ರಾಂ ಚಿನ್ನದ ಸರ, 6 ಗ್ರಾಂ ಉಂಗುರ, 4 ರೇಷ್ಮೆ ಸೀರೆ, ಬೈಕ್‌ ಸೇರಿ ಸೇರಿ ₹ 2.74 ಲಕ್ಷ ಮೌಲ್ಯದ ಆಭರಣ ಹಾಗೂ ನಗದು ವಶಕ್ಕೆ
ಪಡೆಯಲಾಗಿದೆ ಎಂದು ತಿಳಿಸಿದರು.

ಮನೆ ಮಾಲೀಕ ರಂಗಾಪುರ ಗ್ರಾಮದ ಶಿವಲಿಂಗಯ್ಯ ಅವರು ಫೆ. 23 ರಂದು ಕುಶಾಲನಗರದಲ್ಲಿ ಸಂಬಂಧಿಕರ ಮದುವೆಗೆ ಹೋಗುವಾಗ ಆರೋಪಿಗಳಾದ ರಘು, ಬಾಬುಗೆ ಮನೆ ಕಡೆ ನೋಡಿಕೊಳ್ಳುವಂತೆ ಹೇಳಿ ಹೋಗಿದ್ದರು.
ನಂತರ ಇಬ್ಬರು ಸಂಚು ರೂಪಿಸಿ ಮನೆ ಬೀರುವಿನಲ್ಲಿದ್ದ ₹2.99 ಲಕ್ಷ ಮೌಲ್ಯದ ಆಭರಣಗಳು ಮತ್ತು ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.

ಮನೆಯಲ್ಲಿ ಕಳ್ಳತನ:
ಹೊಳೆನರಸೀಪುರ ತಾಲ್ಲೂಕಿನ ಬಂಡಿಶೆಟ್ಟಿಹಳ್ಳಿ ಗ್ರಾಮದ ಮನೆಯೊಂದರ ಬೀಗ ಮುರಿದು ₹31 ಸಾವಿರ ನಗದು ಹಾಗೂ 5 ಗ್ರಾಂ ಚಿನ್ನದ ಓಲೆ ಕಳವು ಮಾಡಿದ್ದ ಅದೇ ಗ್ರಾಮದ ದೊರೆರಾಜ (27) ನನ್ನು ಬಂಧಿಸಲಾಗಿದೆ.
ಕೂಲಿ ಕೆಲಸ ಮಾಡಿಕೊಂಡಿರುವ ಲಕ್ಷ್ಮಮ್ಮ ಅವರ ಮನೆಗೆ ನುಗ್ಗಿ ಕಳವು ಮಾಡಿ, ತನ್ನ ಜಮೀನಿನ ಹುಲ್ಲಿನ ಗುಡ್ಡೆಯಲ್ಲಿ ಬಚ್ಚಿಟ್ಟಿದ್ದ ₹ 51 ಸಾವಿರ ಮೌಲ್ಯದ ಚಿನ್ನ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಪತ್ತೆಗೆ ಶ್ರಮಿಸಿದ ಪೊಲೀಸ್‌ ಸಿಬ್ಬಂದಿ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ. ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಹೊಳೆನರಸೀಪುರ ಡಿವೈಎಸ್ಪಿ ಬಿ.ಬಿ. ಲಕ್ಷ್ಮೇಗೌಡ, ಆರ್.ಪಿ. ಅಶೋಕ್, ವಿನಯ್‍ಕುಮಾರ್ ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.