ಶುಕ್ರವಾರ, ಜುಲೈ 30, 2021
22 °C
ಆಲೂರು ತಾಲ್ಲೂಕಿನ ದೈತಾಪುರ ಪಾರ್ವತಮ್ಮ ದೇವಾಲಯದಲ್ಲಿ ನಿಧಿ ಆಸೆಗಾಗಿ ವಿಗ್ರಹ ವಿರೂಪ

ಸರ್ಕಾರಿ ನೌಕರ ಸೇರಿ ಏಳು ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಲೂರು: ತಾಲ್ಲೂಕಿನ ದೈತಾಪುರ ಹೊರವಲಯದ ಪಾರ್ವತಮ್ಮನ ಬೆಟ್ಟದ ಮೇಲಿರುವ ಪುರಾತನ ದೇವಾಲಯದಲ್ಲಿ ನಿಧಿ ಆಸೆಗಾಗಿ ವಿಗ್ರಹ ವಿರೂಪಗೊಳಿಸಿದ ಆರೋಪದ ಮೇಲೆ ಸರ್ಕಾರಿ ನೌಕರ ಸೇರಿದಂತೆ 7 ಮಂದಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಹಾಸನ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾರಾಯಣ, ಗಣಪತಿ ದೇವಾಲಯದ ಅರ್ಚಕ ತಿಪ್ಪೇಸ್ವಾಮಿ, ಜೋತಿಷಿ ಮಂಜುನಾಥ್, ಚನ್ನರಾಯಪಟ್ಟಣ ತಾಲ್ಲೂಕಿನ ಜಯರಾಮ, ಚೇತನ್, ಮಂಜುನಾಥ, ಹಾಸನ ತಾಲ್ಲೂಕಿನ ಶಂಕರನಹಳ್ಳಿ ಗ್ರಾಮದ ಕುಮಾರ ಬಂಧಿತರು.

ಪುರಾತನ ಕಾಲದ ದೇವಾಲಯ ಆಗಿರುವುದರಿಂದ ಅಪಾರ ಪ್ರಮಾಣದಲ್ಲಿ ಚಿನ್ನ ಸಿಗಬಹುದೆಂಬ ಆಸೆಯಿಂದ ದುಷ್ಕರ್ಮಿಗಳು ಗರ್ಭಗುಡಿ ಯಲ್ಲಿ 10 ಅಡಿಗೂ ಹೆಚ್ಚು ಆಳದ ಗುಂಡಿ ತೋಡಿ ಹುಡುಕಾಟ ನಡೆಸಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಸೋಮವಾರ ಮತ್ತು ಶುಕ್ರವಾರ ದೇವಾಲಯದಲ್ಲಿ ಪೂಜೆ ನಡೆಸಲಾಗುತ್ತಿತ್ತು. ಅದರಂತೆ ಶುಕ್ರವಾರ ಮಂಜಾನೆ ದೇವಾಲಯಕ್ಕೆ ಪೂಜೆಗೆಂದು ಅರ್ಚಕರು ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ದೇವಾಲಯದ ಕಮಿಟಿಯೊಂದಿಗೆ ಚರ್ಚಿಸಿ, ಆಲೂರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಪ್ರಕರಣ ದಾಖಲಿಸಿಕೊಂಡು ತಕ್ಷಣ ಕ್ರಮ ಕೈಗೊಂಡೆವು, ಅನುಮಾನದ ಮೇರೆಗೆ ತಾಲ್ಲೂಕಿನ ಬೊಸ್ಮನಹಳ್ಳಿ ಗ್ರಾಮದ ಜೋತಿಷಿ ಮಂಜುನಾಥ್ ಎಂಬಾತನನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ದೇವಾಲಯದ ಗರ್ಭ ಗುಡಿಯನ್ನು ಅಗೆದಿರುವುದಾಗಿ ಒಪ್ಪಿಕೊಂಡಿದ್ದಾರೆ. 2A4 ಗಂಟೆಯೊಳಗೆ ಏಳು ಮಂದಿಯನ್ನು ಬಂಧಿಸಿದ್ದು, ಇನ್ನೂ ಕೆಲವರ ಮೇಲೆ ಅನುಮಾನವಿದೆ’ ಎಂದು ಸಬ್‌ ಇನ್‌ಸ್ಪೆಕ್ಟರ್‌ ಎಂ.ದಿನೇಶ್‌ ಕುಮಾರ್‌ ಮಾಹಿತಿ
ನೀಡಿದರು.

‘ಭೂಮಿ ಅಗೆದಿರುವ ಸ್ಥಳದಲ್ಲಿ ಹೋಮ, ಪೂಜೆ ನಡೆಸಿ ಸುತ್ತಲು ಅರಿಸಿನ-ಕುಂಕುಮ ಎರೆಚಿದ್ದಾರೆ. ನಿಧಿ ಶೋಧಕ್ಕಿಂತ ಮೊದಲು ಪೂಜೆ ಮಾಡಿರಬಹುದು. ಎರಡು ದಿನಗಳ ಹಿಂದೆ ಈ ಕೃತ್ಯ ನಡೆದಿರಬಹುದು. ಗರ್ಭಗುಡಿ ಹಾಗೂ ಮುಂಭಾಗದಲ್ಲಿ ಇದ್ದ ಚಪ್ಪಡಿ ಕಲ್ಲುಗಳನ್ನು ತೆಗೆದು ವಿರೂಪಗೊಳಿಸಿದ್ದಾರೆ’ ಎಂದು ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದರು.

‘ನಿಧಿ ಆಸೆಗಾಗಿ ಪುರಾತನ ಕಾಲದ ದೇವಾಲಯಗಳ ಮೇಲೆ ಕಳ್ಳರು ಕಣ್ಣು ಹಾಕಿದ್ದು, ರಕ್ಷಣೆ ನೀಡಬೇಕು’ ಎಂದು ದೇವಾಲಯ ಕಮಿಟಿಯವರು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು