ಬುಧವಾರ, ನವೆಂಬರ್ 20, 2019
24 °C
ಶಾಲೆ ಕಾಂಪೌಂಡ್‌ಗೆ ನೀಡುವೆನೆಂದ ಬಾಲಕ: ನರೇಗಾದಲ್ಲಿ ಕಾಂಪೌಂಡ್‌ ನಿರ್ಮಿಸುವುದಾಗಿ ಹೇಳಿದ ಸಚಿವ

ಕನ್ನಡದ ಕೋಟ್ಯಧಿಪತಿಯಲ್ಲಿ ಗೆದ್ದ ಹಣ ಶಿಕ್ಷಣ, ಸೋದರಿ ವಿವಾಹಕ್ಕೆ ಬಳಸಲು ಸಲಹೆ

Published:
Updated:
Prajavani

ಹಾಸನ: ನಟ ಪುನೀತ್‌ ರಾಜ್‌ ಕುಮಾರ್‌ ನಡೆಸಿಕೊಡುವ ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಗೆದ್ದ ₹ 6.4 ಲಕ್ಷ ಹಣದಲ್ಲಿ ಶಾಲೆ ಕಾಂಪೌಂಡ್ ಕಟ್ಟಲು ನೆರವು ನೀಡುತ್ತೇನೆಂಬ ವಿದ್ಯಾರ್ಥಿ ಮಾತಿಗೆ ಮೆಚ್ಚುಗೆ ಸೂಚಿಸಿದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಆ ಹಣವನ್ನು ಮುಂದಿನ ಶಿಕ್ಷಣಕ್ಕೆ ಉಪಯೋಗಿಸುವಂತೆ ಸಲಹೆ ನೀಡಿದ್ದಾರೆ.

ಸರ್ಕಾರಿ ಶಾಲಾ ಮಕ್ಕಳಿಗೆ ನಡೆಸಿದ ಪರೀಕ್ಷೆ ಬರೆದು ಆಯ್ಕೆಯಾದ ತಾಲ್ಲೂಕಿನ ಕಟ್ಟಾಯ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೆ.ಎನ್‌.ತೇಜಸ್‌ ₹ 6.4 ಲಕ್ಷ ಹಣ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ.

‘ಗೆದ್ದ ಹಣವನ್ನು ಶಿಕ್ಷಣಕ್ಕೆ ಬಳಸಿಕೊಳ್ಳಬೇಕು ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆಯ ಕಾಂಪೌಂಡ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ’ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್‌ ಮತ್ತು ಪ್ರಕಾಶ್‌ಗೆ ಸೂಚನೆ ನೀಡಿರುವುದಾಗಿ ಸುರೇಶ್‌ ಕುಮಾರ್‌ ಅವರು ಟ್ವಿಟ್‌ ಮಾಡಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರೇಶ್ ಜತೆಗೆ ಶಾಲೆಗೆ ಭೇಟಿ ನೀಡಿದ ಡಿಡಿಪಿಐ ಪ್ರಕಾಶ್, ಜಿಲ್ಲಾ ಪಂಚಾಯಿತಿ ವತಿಯಿಂದ ₹ 20 ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಿಕೊಡಲಾಗುವುದು. ಕನ್ನಡದ ಕೋಟ್ಯಧಿಪತಿಯಲ್ಲಿ ಗೆದ್ದಿರುವ ಹಣವನ್ನು ಮುಂದಿನ ವಿದ್ಯಾಭ್ಯಾಸ ಹಾಗೂ ಅಕ್ಕನ ಮದುವೆಗೆ ಬಳಸಿಕೊಳ್ಳುವಂತೆ ತೇಜಸ್‌ಗೆ ಪ್ರಕಾಶ್‌ ಹೇಳಿದರು.

ಕಟ್ಟಾಯ ಶಾಲೆಗೆ ಭೇಟಿ ನೀಡಿದ್ದ ಕೋಟ್ಯಧಿಪತಿ ತಂಡ ಎಲ್ಲ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಹೆಚ್ಚು ಅಂಕ ಗಳಿಸಿದ ತೇಜಸ್‌, ಹಾಟ್‌ ಸೀಟ್‌ನಲ್ಲಿ ಕುಳಿತು 15ರಲ್ಲಿ 11 ಪ್ರಶ್ನೆಗೆ ಸರಿ ಉತ್ತರ ನೀಡಿ ಹಣ ಗೆದ್ದಿರುವುದು ಶಾಲೆಯ ಶಿಕ್ಷಕರಿಗೆ ಸಂತಸ ತಂದಿದೆ.

‘ನಾನು ಗೆದ್ದಿರುವ ₹ 6.4 ಲಕ್ಷದಲ್ಲಿ ಅಕ್ಕನ ಮದುವೆ ಹಾಗೂ ಶಾಲೆಯ ಕಾಂಪೌಂಡ್‌ ಕಟ್ಟಿಸಲು ನೀಡಬೇಕು ಅಂದುಕೊಂಡಿದ್ದೆ. ಆದರೆ, ಸಚಿವರು ಅದನ್ನು ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುವಂತೆ ಹೇಳಿದ್ದಾರೆ. ಬಡ ಕುಟುಂಬದಲ್ಲೇ ಬೆಳೆದ ನಾನು ಲಕ್ಷಾಂತರ ರೂಪಾಯಿ ನೋಡುತ್ತಿರುವುದು ಇದೇ ಮೊದಲು. ಭವಿಷ್ಯದಲ್ಲಿ ಡಾಕ್ಟರ್‌ ಆಗಬೇಕೆಂಬ ಕನಸು ಕಂಡಿದ್ದೇನೆ’ ಎಂದು ತೇಜಸ್‌ ಹೇಳಿದರು.

ವಿದ್ಯಾರ್ಥಿ ತಂದೆ ನಂಜಪ್ಪ ಕೃಷಿ ಕೆಲಸ ಮಾಡಿಕೊಂಡಿದ್ದು, ತಾಯಿ ಗೌರಮಣಿ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)