ಭಾನುವಾರ, ಜನವರಿ 24, 2021
27 °C
ಕಟ್ಟಡ, ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಚಾಲನೆ

ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಕ್ರಮ: ಸಚಿವ ಕೆ. ಗೋಪಾಲಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರದಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ನಗರದ ಜ್ಞಾನಕ್ಷಿ ಕಲ್ಯಾಣ ಮಂಟಪದಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಸನ ಶಾಖೆಯ ವತಿಯಿಂದ ಗುರುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಕಟ್ಟಡ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೋವಿಡ್‌ ಕಾರಣದಿಂದ ಎಲ್ಲಾ ಕ್ಷೇತ್ರದಲ್ಲಿಯೂ ಕೆಲಸಗಳು ನಿಂತು ಸಾಕಷ್ಟು ನಷ್ಟ ಉಂಟಾಗಿದೆ. ಎರಡುತಿಂಗಳಿಂದ ಹಲವು ಉದ್ಯಮಗಳಲ್ಲಿ ಉದ್ಯೋಗಾವಕಾಶ ಹೆಚ್ಚಿದ್ದು, ವಲಸೆ ಕಾರ್ಮಿಕರು ಸೇರಿದಂತೆ ಸ್ಥಳೀಯರಿಗೂ ಹೇರಳ ಅವಕಾಶಗಳಿವೆ ಎಂದು ಹೇಳಿದರು.

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಕೊಳಚೆ ಪ್ರದೇಶ ನಿರ್ಮೂಲನಾ ಮಂಡಳಿ ವತಿಯಿಂದ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಹಾಯ ಧನ ನೀಡುತ್ತಿದ್ದು, ಹಾಸನದಲ್ಲಿಯೂ 1000 ಮನೆ ನಿರ್ಮಿಸಲಾಗುವುದು. ಬಿಲ್ಡರ್ಸ್ ಗಳು ಸರ್ಕಾರದ ವಸತಿ ಯೋಜನೆಗಳ ಅನುಷ್ಠಾನದಲ್ಲಿ ತೊಡಗಿ ಬಡವರಿಗೆ ಗುಣಮಟ್ಟದ ಮನೆ ನಿರ್ಮಿಸಿ, ಆರ್ಥಿಕತೆ ಚುರುಕುಗೊಳಿಸಿಕೊಳ್ಳಬೇಕು ಎಂದು ನುಡಿದರು.

ಶಾಸಕ ಪ್ರೀತಮ್ ಜೆ ಗೌಡ ಮಾತನಾಡಿ, ಜಿಲ್ಲೆಯಲ್ಲಿ ನುರಿತ ಕಟ್ಟಡ ಕಾರ್ಮಿಕರ ಕೊರತೆ ಇದ್ದು, ಇದನ್ನು ಸರಿಪಡಿಸಲು ಸ್ಥಳೀಯವಾಗಿ ತರಬೇತಿ ನೀಡುವ ಅಗತ್ಯವಿದೆ. ಉದ್ಯೋಗ ವಿನಿಮಯ ಕಚೇರಿಯಿಂದ ಕೌಶಲ ತರಬೇತಿ ನೀಡುತ್ತಿದ್ದರೂ ಅದರ ಮಿತಿ ಸೀಮಿತವಾಗಿದೆ. ಹಾಗಾಗಿ ಕೈಗಾರಿಕೋದ್ಯಮಿಗಳು ಮತ್ತು ಬಿಲ್ಡರ್ಸ್‍ಗಳು ಸ್ಥಳೀಯ ಕಾರ್ಮಿಕರಿಗೆ ಕೌಶಲ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು. ತರಬೇತಿ ಯೋಜನೆಯಡಿ ದೊರೆಯುವ ಅನುದಾನವನ್ನು ಬಿಲ್ಡರ್ಸ್ ಅಸೋಷಿಯೇಶನ್‍ಗೆ ಕೊಡಿಸುವುದಾಗಿ ಹೇಳಿದರು.

ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್ ಸುಂದರ್ ಮಾತನಾಡಿ, ಲಾಕಡೌನ್‌ನಿಂದ ರಿಯಲ್ ಎಸ್ಟೇಟ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನಷ್ಟವಾಗಿದೆ. ಜುಲೈ, ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ದೇಶದ ಎಂಟು ಪ್ರಮುಖ ನಗರಗಳಲ್ಲಿ ವಸತಿ ಕ್ಷೇತ್ರದಲ್ಲಿನ ಮಾರಾಟ ಶೇಕಡಾ 66 ರಷ್ಟು ಕಡಿಮೆಯಾಗಿದೆ ಎಂದರು.

ಜಿಲ್ಲಾಧಿಕಾರಿ ಆರ್. ಗಿರೀಶ್, ರಾಷ್ಟ್ರೀಯ ಕೈಗಾರಿಕೋದ್ಯಮ ಅಧ್ಯಕ್ಷ ಮೋಹನ್, ಬಿಲ್ಡರ್ಸ್‌ ಅಸೋಸಿಯೇಷನ್‌
ಪದಾಧಿಕಾರಿಗಳಾದ ನಾಗೇಂದ್ರನ್‌, ಮಹೇಶ್‌, ಹರೀಶ್‌, ಮೋಹನ್‌, ಜಗದೀಶ್‌, ಕಿರಣ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು