ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನರಾಯಪಟ್ಟಣ | ಹೆಚ್ಚಿದ ಬೀದಿನಾಯಿ ಉಪಟಳ: ಜನರಲ್ಲಿ ಆತಂಕ

ಬೈಕ್‌, ಪಾದಚಾರಿಗಳನ್ನು ಅಟ್ಟಾಡಿಸುವ ಶ್ವಾನಗಳು: ರಸ್ತೆಯಲ್ಲಿ ಓಡಾಡಲು ಹಿಂದೇಟು
Published 24 ಜೂನ್ 2024, 5:17 IST
Last Updated 24 ಜೂನ್ 2024, 5:17 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಶಾಲಾಮಕ್ಕಳು, ಮಹಿಳೆಯರು, ವಯೋವೃದ್ದರು ರಸ್ತೆಯಲ್ಲಿ ಭಯದಲ್ಲಿ ನಡೆದಾಡುವಂತಾಗಿದೆ.

ಮೋಟರ್ ಬೈಕ್‌ಗಳು, ವಾಹನಗಳು ಸಂಚರಿಸಿದರೆ ನಾಯಿಗಳು ಬೊಗಳುತ್ತ ಹಿಂಬಾಲಿಸುತ್ತವೆ. ಇವುಗಳಿಂದ ತಪ್ಪಿಸಿಕೊಳ್ಳಲು ಹಲವು ಸಲ ಬೈಕ್‍ನಿಂದ ಬಿದ್ದು ಸವಾರರು ಗಾಯಗೊಂಡಿದ್ದಾರೆ. ನಾಯಿ ಕಡಿತಕ್ಕೂ ಒಳಗಾಗಿದ್ದಾರೆ.

ಬೇರೆ ಊರಿನಿಂದ ತಡರಾತ್ರಿ ಬಸ್‍ನಲ್ಲಿ ಬಂದು, ಮನೆಗೆ ತೆರಳುವಾಗ ಹಲವು ಕಡೆ ಸಮಸ್ಯೆ ತಪ್ಪಿದ್ದಲ್ಲ. ಒಂದು ವೇಳೆ ನಡೆದುಕೊಂಡು ಹೋದರೆ ಅಥವಾ ಬೈಕ್‌ಗಳಲ್ಲಿ ಸಂಚರಿಸುವಾಗ ಎಚ್ಚರಿಕೆಯಿಂದ ಮನೆ ಸೇರಬೇಕಾದ ಸ್ಥಿತಿ ಇದೆ.

ಈಚೆಗೆ ನೌಕರರೊಬ್ಬರು ರಾತ್ರಿ ಬಸ್ ನಿಲ್ದಾಣದಲ್ಲಿ ಇಳಿದು ವಸತಿಗೃಹಕ್ಕೆ ತೆರಳುವ ಸಂದರ್ಭದಲ್ಲಿ ಬೀದಿನಾಯಿಗಳು ದಾಳಿ ಮಾಡಲು ಮುಂದಾಗಿವೆ. ಇದರಿಂದ ವಿಚಲಿತರಾದ ಸಿಬ್ದಂದಿ ಸ್ವಲ್ಪ ದೂರ ವಾಪಸ್ ಹೋಗಿದ್ದಾರೆ. ನಾಯಿಗಳು ಬೇರೆಡೆಗೆ ತೆರಳಿದ ಸ್ವಲ್ಪ ಹೊತ್ತಿನ ಬಳಿಕ ಮನೆ ಸೇರಬೇಕಾಯಿತು. ಬೀದಿ ನಾಯಿಗಳ ಉಪಟಳದ ಗಂಭೀರತೆಗೆ ಇದು ಸಾಕ್ಷಿ ಎನ್ನುವಂತಾಗಿದೆ.

ಕೆಲವು ಸಂದರ್ಭದಲ್ಲಿ ಹಾಡಹಗಲೇ ದಾಳಿ ಮಾಡುತ್ತವೆ. ಅಲ್ಲಲ್ಲಿ ಗುಂಪುಗೂಡಿರುವ ನಾಯಿಗಳು ಮನುಷ್ಯರ ಮೇಲೆ ಏಕಾಏಕಿ ದಾಳಿ ಮಾಡಿ ಕಚ್ಚುತ್ತವೆ. ಇದರಿಂದಾಗಿ ಜನರಲ್ಲಿ ಆತಂಕ ಸೃಷ್ಟಿಸಿದೆ.

ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ಅಸಮಾಧಾನ ಜನರದ್ದು.

ಹಳೆಬಸ್ ನಿಲ್ದಾಣ, ಬೀದಿಬದಿ ಮಾಂಸ ಮಾರಾಟ ಮಳಿಗೆಗಳು, ಬೀದಿಯಲ್ಲಿ ಮಾರುವ ಮಾಂಸ ಖಾದ್ಯದ ಅಂಗಡಿಗಳು ಮತ್ತು ಕೋಳಿ ಸೇರಿ ಇನ್ನಿತರೆ ತ್ಯಾಜ್ಯ ಬಿಸಾಡುವ ಹೌಸಿಂಗ್ ಬೋರ್ಡ್ ಬಡಾವಣೆ, ಹೇಮಾವತಿ ನಾಲೆಯ ಪಕ್ಕದಲ್ಲಿ ಗುಂಪಾಗಿ ನಾಯಿಗಳು ಸುತ್ತಾಡುತ್ತಿವೆ. ತಿಂಗಳ ಹಿಂದೆ ಪಟ್ಟಣದಲ್ಲಿ ನಾಯಿಗಳು ಬಾಲಕಿಯೊಬ್ಬಳ ಮೇಲೆ ದಾಳಿ ಮಾಡಿದವು. ಅಷ್ಟರಲ್ಲಿ ಜನತೆ ಜೋರಾಗಿ ಕೂಗಿಕೊಂಡಾಗ ನಾಯಿಗಳು ಓಡಿಹೋದವು. ಇಲ್ಲದಿದ್ದರೆ ಬಾಲಕಿಯನ್ನು ಕಚ್ಚುತ್ತಿದ್ದವು ಎನ್ನುತ್ತಾರೆ ದಿಂಡಗೂರು ಗ್ರಾಮದ ಚಂದ್ರಶೇಖರ್.

ಚನ್ನರಾಯಪಟ್ಟಣದ1007 ಜನ ಸೇರಿದಂತೆ 5 ತಿಂಗಳಲ್ಲಿ ತಾಲ್ಲೂಕಿನಲ್ಲಿ 1994 ಜನರಿಗೆ ಬೀದಿ ನಾಯಿಗಳು ಕಚ್ಚಿವೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಿದ್ದು ಉಚಿತವಾಗಿ ನೀಡಲಾಗುತ್ತದೆ. -ಎ.ಆರ್. ಅನಿತಾ ಚನ್ನರಾಯಪಟ್ಟಣ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ

ಪುರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿ ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಬೇಕು. ಈಗಾಗಲೇ ಆನ್‌ಲೈನ್ ಮೂಲಕ 3 ಸಲ ಟೆಂಡರ್ ಕರೆದಿದ್ದು ಯಾರೂ ಮುಂದೆ ಬಂದಿಲ್ಲ.

- ಕೆ.ಎನ್. ಹೇಮಂತ್ ಚನ್ನರಾಯಪಟ್ಟಣ ಪುರಸಭೆ ಮುಖ್ಯಾಧಿಕಾರಿ

ಪರಿಹಾರ ನೀಡಿ

ಬೀದಿ ನಾಯಿ ಕಚ್ಚಿ ಗಾಯವಾದರೆ ನೊಂದವರಿಗೆ ಚಿಕಿತ್ಸಾ ವೆಚ್ಚ ನೀಡಬೇಕು ಮತ್ತು ಮೃತಪಟ್ಟರೆ ಅವಲಂಬಿತರಿಗೆ ಪರಿಹಾರ ನೀಡಬೇಕು ಎಂದು ಸರ್ಕಾರ ಕೆಲ ತಿಂಗಳ ಹಿಂದೆ ನಿಯಮ ರೂಪಿಸಿದೆ. ಆದರೆ ಇದುವರೆಗೆ ಯಾರೊಬ್ಬರಿಗೂ ಪರಿಹಾರ ನೀಡಿದ ಉದಾಹರಣೆ ಇಲ್ಲ. ಅಧಿಕಾರಿಗಳು ಪರಿಹಾರ ನೀಡಲು ಮುಂದಾಗಬೇಕು ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಜಿ. ರವಿ ಆಗ್ರಹಿಸಿದರು. ಪಟ್ಟಣದಲ್ಲಿ ಹಲವು ಕಡೆ ಬೀದಿ ನಾಯಿಗಳಿಂದ ಜನರಿಗಾಗುತ್ತಿರುವ ತೊಂದರೆ ತಪ್ಪಿಸಬೇಕಾದರೆ ನಾಯಿಗಳನ್ನು ಸೆರೆ ಹಿಡಿದು ಬೇರೆಡೆ ಸಾಗಿಸಬೇಕು ಅಥವಾ ಸರ್ಕಾರ ರೂಪಿಸಿರುವ ನಿಯಮದ ಅನ್ವಯ ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕು. ಈ ಬಗ್ಗೆ ಪುರಸಭೆ ಅಧಿಕಾರಿಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶೀಘ್ರ ಗಮನಹರಿಸಬೇಕು ಎಂಬ ಆಗ್ರಹ ಜನರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT