ಸೋಮವಾರ, ಜನವರಿ 25, 2021
18 °C
ಅಧಿಕಾರಿಗಳಿಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸೂಚನೆ

ಮೂರು ದಿನದಲ್ಲಿ ವಿಮೆ ವರದಿ ಸಲ್ಲಿಸಿ: ಸಚಿವ ಕೆ.ಗೋಪಾಲಯ್ಯ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆಗಳಿಗೆ ನೀಡಲಾಗಿರುವ ವಿಮೆ ಕುರಿತು ಮೂರು ದಿನಗಳಲ್ಲಿ ಸಮಗ್ರ ವರದಿ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ನಡೆದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಬೇಕು. ಹಿಂದಿನ ಸಭೆಯಲ್ಲಿ ನಡೆದ ತೀರ್ಮಾನಗಳ ಬಗ್ಗೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ, ಯಾವ ಅಧಿಕಾರಿಗಳು ಆ ನಿಟ್ಟಿನಲ್ಲಿ ಕೆಲಸ ಮಾಡಿಲ್ಲ. ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಲಾಭ ಕಂಪನಿಗಳಿಗೆ ಆಗಿದೆ ಹೊರತು ರೈತರಿಗೆ ಅಲ್ಲ. 2018-19ನೇ ಸಾಲಿನಲ್ಲಿ ಅರಸೀಕೆರೆಯನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಲಾಗಿದೆ. ಹಾಗಾಗಿ ಬೆಳೆ ವಿಮೆ ಸುಮಾರು ₹125 ಕೋಟಿ ಬಿಡುಗಡೆಯಾಗಬೇಕು. ಆದರೆ, 25 ಸಾವಿರ ರೈತರನ್ನು ಮಾತ್ರ ಆಯ್ಕೆ ಮಾಡಿದ್ದಾರೆ. ದಿನ ಬೆಳಗಾದರೆ ಪರಿಹಾರಕ್ಕಾಗಿ ರೈತರು ಮನೆ ಮುಂದೆ ನಿಲ್ಲುತ್ತಾರೆ. ಶೇಕಡಾ 75 ರಷ್ಟು ಬಿತ್ತನೆಯಾಗಿಲ್ಲ ಎಂದಾದ ಮೇಲೆ ಎಲ್ಲರಿಗೂ ವಿಮೆ ಸಿಗಬೇಕು ಎಂದು ಆಗ್ರಹಿಸಿದರು.

ಜಂಟಿ ಕೃಷಿ ನಿರ್ದೇಶಕ ಕೆ.ಎಚ್‌. ರವಿ ಮಾತನಾಡಿ, 2018-19ನೇ ಸಾಲಿನಲ್ಲಿ ಅರಸೀಕೆರೆಯ 25 ಸಾವಿರ ರೈತರಿಗೆ ₹37 ಕೋಟಿ ಬಿಡುಗಡೆಯಾಗಿದೆ. ವಿಮೆ ಪಾವತಿಸಿದ ರೈತರು ಮಾತ್ರ ಯೋಜನೆಗೆ ಅರ್ಹರಾಗುತ್ತಾರೆ ಎಂದರು.

ಈ ವರ್ಷ ಮುಂಗಾರು ಹಂಗಾಮಿಗೆ 18128 ಹಾಗೂ ಹಿಂಗಾರಿಗೆ 24061 ರೈತರು ನೋಂದಾಯಿಸಿಕೊಂಡಿದ್ದಾರೆ. 12 ಸಾವಿರ ಟಾರ್ಪಲ್ ದೊರೆತಿದ್ದು, ಹಂತ ಹಂತವಾಗಿ ರೈತರಿಗೆ ವಿತರಿಸಲಾಗುವುದು. 4436 ಮೆಟ್ರಿಕ್‌ ಟನ್ ರಸಗೊಬ್ಬರ ದಾಸ್ತಾನಿದ್ದು, 16 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಪೂರೈಕೆ ಇದೆ. ಹಿಂಗಾರು ಬಿತ್ತನೆ ಚಟುವಟಿಕೆ ಪ್ರಾರಂಭವಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದರು.

ಶಿವಲಿಂಗೇಗೌಡ ಮಾತನಾಡಿ, ಹವಾಮಾನ ಆಧಾರಿತ ಬೆಳೆಗೆ ಸೇರಿರುವ ದಾಳಿಂಬೆ ಬೆಳೆಗಾರರ ಆಯ್ಕೆಯಲ್ಲಿ ಪ್ರಮಾದವಾಗಿದೆ. ಪಾಲಿಹೌಸ್ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿ ಬಿಡುಗಡೆಯಾದರೂ ತಾಲೂಕು ಮಟ್ಟದ ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚನ್ನರಾಯಪಟ್ಟಣ ಶಾಸಕ ಸಿ.ಎನ್. ಬಾಲಕೃಷ್ಣ ಹಾಗೂ ಶಿವಲಿಂಗೇಗೌಡ ಮಾತನಾಡಿ, ಕೋವಿಡ್ ಕೇಂದ್ರಗಳಾಗಿ ಪರಿವರ್ತನೆಯಾಗಿದ್ದ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿರುವ ಹಾಸಿಗೆಗಳನ್ನು ಸುಟ್ಟುಹಾಕಿ, ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯಬೇಕು. ಕೋವಿಡ್‌ ಪ್ರಕರಣ ಕಡಿಮೆಯಾಗುತ್ತಿದ್ದು, ಸಾರ್ವಜನಿಕ ಆಸ್ಪತ್ರೆಗಳಲ್ಲಿನ ಬೆಡ್‍ಗಳನ್ನು ಬದಲಾಯಿಸಬೇಕು. ಇತರ ಕಾಯಿಲೆಯ ರೋಗಿಗಳು ಆ ಕಡೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಂದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಜಿಲ್ಲೆಯಾದ್ಯಂತ ಕೊರೊನಾ ಪ್ರಕರಣ ಕಡಿಮೆಯಾಗಿದ್ದು, ಹಾಸ್ಟೆಲ್‍ಗಳಲ್ಲಿರುವ ಹಾಸಿಗೆಗಳನ್ನು ಮುಂದಿನ 15 ದಿನಗಳಲ್ಲಿ ತೆರವುಗೊಳಿಸಲಾಗುವುದು. ಡಿಸೆಂಬರ್ ವರೆಗೆ ಶಾಲೆ
ಆರಂಭವಾಗುವುದಿಲ್ಲವಾದ್ದರಿಂದ 15 ದಿನಗಳ ಬಳಿಕ ಆ ಕೆಲಸ ಮಾಡಲು ನಿರ್ಧರಿಸಿದ್ದೇವೆ ಎಂದು ಉತ್ತರಿಸಿದರು.

ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಹೊಳೆನರಸೀಪುರ ನಗರದಲ್ಲಿ ಡಯಾಲಿಸಿಸ್ ಸರ್ಕಾರ ₹ 1200 ನಿಗದಿ
ಮಾಡಿದ್ದರೂ ₹1500 ಶುಲ್ಕ ವಸೂಲಿ ಮಾಡುತ್ತಿದ್ದು, ರೋಗಿಗಳು ಕೈಗವಸು ಹಾಗೂ ಔಷಧಗಳನ್ನು ತಂದು ಹಣ ಸಹ ಪಾವತಿಸಬೇಕಾಗಿದೆ ಎಂದು  ಸಭೆ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ನನ್ನ ಟ್ರಸ್ಟ್‌ ವತಿಯಿಂದ ಡಯಾಲಿಸಿಸ್‌ ಕೇಂದ್ರ ನಡೆಸುತ್ತಿದ್ದು,  ಉಚಿತ ಸೇವೆ ನೀಡಲಾಗುತ್ತಿದೆ. ತಾಲ್ಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸುವೆ. ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ರದ್ದುಗೊಳಿಸುವೆ’ ಎಂದರು. 

ಶಾಸಕ ಪ್ರೀತಂ ಜೆ. ಗೌಡ ಮಾತನಾಡಿ, ಡಯಾಲಿಸಿಸ್‍ಗೆ ಬರುವ ಬಡ ರೋಗಿಗಳಿಂದ ಖಾಸಗಿ ಸಂಸ್ಥೆಗಳು ಸುಲಿಗೆ
ಮಾಡುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರವೇ ಡಯಾಲಿಸಿಸ್ ಕೇಂದ್ರ ತೆರೆಯಬೇಕು ಎಂದು ಸಲಹೆ ನೀಡಿದರು.

ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಕೊರೊನಾ ಆರಂಭದ ದಿನಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡ ಲ್ಯಾಬ್ ಟೆಕ್ನಿಷಿಯನ್‍ಗಳನ್ನು ಸೇವೆಯಿಂದ ವಿಮುಕ್ತಿಗೊಳಿಸುವ ಬದಲು ಅವರನ್ನೇ ಮುಂದುವರಿಸಬೇಕು. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಬೇಕೆಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಉಪವಿಭಾಗಾಧಿಕಾರಿಗಳಾದ ಗಿರೀಶ್‌ ನಂದನ್‌, ಬಿ.ಎ. ಜಗದೀಶ್‌ ಹಾಜರಿದ್ದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು