ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಾನಿ ರೇವಣ್ಣಗೂ ಎಸ್‌ಐಟಿ ನೋಟಿಸ್‌

ಹೊಳೆನರಸೀಪುರಕ್ಕೆ ತಂಡ ಭೇಟಿ: ಫಾರ್ಮ್‌ಹೌಸ್‌ಗಳ ಪರಿಶೀಲನೆ: ಕಾರ್ಮಿಕರ ವಿಚಾರಣೆ
Published 3 ಮೇ 2024, 22:43 IST
Last Updated 3 ಮೇ 2024, 22:43 IST
ಅಕ್ಷರ ಗಾತ್ರ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಎಸ್‌ಐಟಿ ಸದಸ್ಯೆ, ಮೈಸೂರು ಎಸ್ಪಿ ಸೀಮಾ ಲಾಟ್ಕರ್‌ ನೇತೃತ್ವದ ತಂಡ ತಾಲ್ಲೂಕಿನ ಹಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಬೆಂಗಳೂರಿನಿಂದ ನಾಲ್ಕು ಕಾರುಗಳಲ್ಲಿ ಬಂದ ಎಂಟು ಅಧಿಕಾರಿಗಳ ತಂಡ, ಪಡುವಲಹಿಪ್ಪೆ ಗ್ರಾಮದ ತೋಟಕ್ಕೆ ಭೇಟಿ ನೀಡಿ, ಅಲ್ಲಿದ್ದ ಕಾರ್ಮಿಕರಿಂದ ಕೆಲವು ಮಾಹಿತಿ ಪಡೆಯಿತು. ಕಾರ್ಮಿಕರಿಗೆ ಕೆಲ ಫೋಟೊಗಳನ್ನು ತೋರಿಸಿ, ‘ಇವರನ್ನು ನೀವು ನೋಡಿದ್ದೀರಾ’ ಎಂದು ಪ್ರಶ್ನಿಸಿತು. ಆದರೆ ಕಾರ್ಮಿಕರು, ‘ಇವರಾರನ್ನೂ ನಾವು ನೋಡಿಲ್ಲವೆಂದರು’ ಎಂದು ಗೊತ್ತಾಗಿದೆ.

‘ತೋಟದಲ್ಲಿ ಉಳಿಯಲು ಬೇರೆ ಮನೆಗಳು ಇವೆಯೇ’ ಎಂದು ತಂಡ ಪ್ರಶ್ನಿಸಿದ್ದು, ‘ಇಲ್ಲಿ ನೀವು ನೋಡುತ್ತಿರುವ ಮನೆಗಳನ್ನು ಬಿಟ್ಟು ಬೇರಾವ ಮನೆಗಳೂ ಇಲ್ಲ’ ಎಂದು ಕಾರ್ಮಿಕರು ಮಾಹಿತಿ ನೀಡಿದ್ದಾಗಿ ತಿಳಿದುಬಂದಿದೆ.

ಘನ್ನಿಕಡ ಹಾಗೂ ಕಾಮೇನಹಳ್ಳಿ ಸಮೀಪದ ಇನ್ನೆರಡು ಫಾರ್ಮ್‌ಹೌಸ್‌ಗೆ ಭೇಟಿ ನೀಡಿದ ತಂಡ, ಅಶ್ಲೀಲ ವಿಡಿಯೋ ಚಿತ್ರೀಕರಣದ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕಿದೆ.

ಪೊಲೀಸರಿಂದ ಪರಿಶೀಲನೆ: ಮೈಸೂರು ಜಿಲ್ಲೆಯ ಕೆ.ಆರ್. ನಗರ ಠಾಣೆಯಲ್ಲಿ ಶಾಸಕ ಎಚ್‌.ಡಿ.ರೇವಣ್ಣ ವಿರುದ್ಧ ದಾಖಲಾಗಿರುವ, ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಪೊಲೀಸರು, ಇಲ್ಲಿನ ರೇವಣ್ಣ ಅವರ ಮನೆಯಲ್ಲಿ ಪರಿಶೀಲನೆ ನಡೆಸಿದರು.

ಎಸ್ಐಟಿ ತಂಡದ ಸೂಚನೆಯಂತೆ ನಗರ ಠಾಣೆ ಪೊಲೀಸರು, ರೇವಣ್ಣ ಅವರ ಹೊಳೆನರಸೀಪುರ ಮನೆಯನ್ನು ಪರಿಶೀಲಿಸಿದರು. ಪೊಲೀಸರು ಮನೆಗೆ ಹೋದಾಗ ಭವಾನಿ ರೇವಣ್ಣ ಮನೆಯಲ್ಲಿದ್ದರು. ಶುಕ್ರವಾರ ಅಥವಾ ಶನಿವಾರ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಪೊಲೀಸರು ನೋಟಿಸ್ ನೀಡಿದರು.

ಎಸ್‌ಐಟಿ ಮುಂದೆ ಹಾಜರಾದ ದೇವರಾಜೇಗೌಡ

ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಬೆಂಗಳೂರಿನಲ್ಲಿ ಎಸ್‌ಐಟಿ ಎದುರು ಹಾಜರಾಗಿದ್ದ ವಕೀಲ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಹೇಳಿಕೆ ದಾಖಲಿಸಿದ್ದಾರೆ. ‘ದೇವರಾಜೇಗೌಡರಿಗೆ ಮಾತ್ರ ಪೆನ್‌ಡ್ರೈವ್ ಕೊಟ್ಟಿದ್ದೆ’ ಎಂಬ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಹೇಳಿಕೆ ಹಾಗೂ ‘ನನ್ನ ಬಳಿ ಪ್ರಜ್ವಲ್ ಅಶ್ಲೀಲ ವಿಡಿಯೋಗಳಿವೆ’ ಎಂದು ದೇವರಾಜೇಗೌಡ ಇತ್ತೀಚೆಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ಜಾರಿ ಮಾಡಿತ್ತು. ಗುರುವಾರ ಎಸ್‌ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡಿರುವ ಬಗ್ಗೆ ಅವರು ತಮ್ಮ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದಾರೆ. ‘ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಬಿಡುಗಡೆಗೆ ಸಂಬಂಧಿಸಿದಂತೆ ಎಸ್‌ಐಟಿ ನೋಟಿಸ್‌ ನೀಡಿತ್ತು. ನಾನು ಎಸ್‌ಐಟಿ ತಂಡದ ಮುಂದೆ ಹಾಜರಾಗಿ ಪ್ರಕರಣಕ್ಕೆ ಪೂರಕ ಸಾಕ್ಷಿ ಹೇಳಿಕೆ ನೀಡಿದ್ದೇನೆ. ಪ್ರಕರಣದ ಪ್ರಮುಖ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ‘ಪೆನ್‌ಡ್ರೈವ್‌ನಲ್ಲಿರುವ ಅಶ್ಲೀಲ ವಿಡಿಯೊಗಳನ್ನು ಹಂಚಿರುವ ಕಡುನೀಚರ ಬಗ್ಗೆ ಹಲವು ಸುಳಿವುಗಳನ್ನು ನೀಡಿದ್ದೇನೆ. ಆರೋಪಿಯನ್ನು ಬಂಧಿಸಲು ಬೇಕಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದೇನೆ. ರಾಜ್ಯದ ಹೆಣ್ಣುಮಕ್ಕಳ ವಿಷಯದಲ್ಲಿ ಚೆಲ್ಲಾಟ ಆಡಿರುವ ರಾಜಕಾರಣಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT