ಗುರುವಾರ , ಮೇ 19, 2022
20 °C
ಕೊಲ್ಲೂರು ಪೊಲೀಸರಿಂದ ಕಾರ್ಯಾಚರಣೆ– ಆರು ಮಂದಿ ಬಂಧನ

ಕೋಗಿಲೆಮನೆ ಗ್ರಾ.ಪಂ ಸದಸ್ಯನ ಅಪಹರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇಲೂರು/ಉಡುಪಿ: ಬೇಲೂರು ತಾಲ್ಲೂಕಿನ ಕೋಗಿಲೆಮನೆ ಗ್ರಾಮ ಪಂಚಾಯಿತಿಯ ಸದಸ್ಯ ಎಂ.ಎಂ.ಶಿವಕುಮಾರ್ ಅವರ ಅಪಹರಣ ಪ್ರಕರಣವನ್ನು ಭೇದಿಸಿರುವ ಉಡುಪಿ ಪೊಲೀಸರು, ಆರು ಮಂದಿಯನ್ನು ಬಂಧಿಸಿದ್ದಾರೆ. 

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ದಿನ ನಿಗದಿಯಾದ ಬೆನ್ನಲ್ಲೇ ಈ ಅಪಹರಣ ನಡೆದಿತ್ತು. 

‘ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ತಪ್ಪಿಸಿ ಕೊಂಡಿರುವ ನಾಲ್ವರ ಪತ್ತೆಗಾಗಿ ಬಲೆ ಬೀಸಲಾಗಿದೆ’ ಎಂದು ಕೊಲ್ಲೂರು ಠಾಣಾ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ: 

ಕೋಗಿಲೆಮನೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 8 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಆದರೆ, 8 ಸದಸ್ಯರಲ್ಲಿ ತಲಾ ನಾಲ್ಕು ಮಂದಿ ಎರಡು ಗುಂಪುಗಳಾಗಿದೆ. ತಮ್ಮ ಗುಂಪಿಗೆ ಅಧ್ಯಕ್ಷ ಸ್ಥಾನ ಒಲಿಸಿಕೊಳ್ಳುವ ಆಕಾಂಕ್ಷೆಯಿಂದ ಒಂದು ತಂಡ ಸಾಮಾನ್ಯ ವರ್ಗದ ಸಾವಿತ್ರಿ ಪರವಾಗಿ, ಮತ್ತೊಂದು ತಂಡ ಹೇಮಾವತಿ ಪರವಾಗಿ ನಿಂತಿದೆ.

ಇವರಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಹೇಮಾವತಿ ಅವರು ಗ್ರಾಮದಲ್ಲೇ ಉಳಿದು, ಬೆಂಬಲಿತ ಸದಸ್ಯರಾದ ಎಂ.ಎಂ.ಶಿವಕುಮಾರ್, ಶೇಷಪ್ಪ, ಎಚ್.ಎಸ್.ಶಿವವೀರಸಂಗಪ್ಪ ಹಾಗೂ ಹೇಮಾವತಿ ಅವರ ಪತಿ ಸಿ.ಸಿ.ರಘು ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಇನೋವಾ ಕಾರಿನಲ್ಲಿ ಫೆ.2 ರಂದು ತೆರಳಿದ್ದಾರೆ.

ಪ್ರವಾಸದ ಮಾಹಿತಿ ಪಡೆದ ಮತ್ತೊಂದು ಗುಂಪಿನ ಬೆಂಬಲಿಗರು  ಎನ್ನಲಾದ ಕೆಲವರು, ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಕೊಲ್ಲೂರು ಅರಣ್ಯವೊಂದರ ಸಮೀಪ ಸದಸ್ಯರಿದ್ದ ಕಾರನ್ನು ಅಡ್ಡಗಟ್ಟಿ, ಬಲವಂತದಿಂದ ಶಿವಕುಮಾರ್ ಅವರನ್ನು ಅಪಹರಿಸಿದ್ದಾರೆ.

ಈ ಸಂಬಂಧ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಈ ಕೃತ್ಯಕ್ಕೆ ಕಾರಣರಾದ ಎಲ್ಲರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಗುರುವಾರ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಚುನಾವಣೆ ಮುಂದೂಡಲು ಸಾಧ್ಯವಿಲ್ಲ. ಸದಸ್ಯರ ಹಾಜರಾತಿ ಆಧರಿಸಿ ಆಯ್ಕೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.

ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಅಪಹರಣ

ಹಾಸನ: ತಾಲ್ಲೂಕಿನ ಮಡೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕಿದ್ದ ಮಹಿಳಾ ಅಭ್ಯರ್ಥಿಯನ್ನು ಅಪಹರಿಸಲಾಗಿದೆ.

ಬುಧವಾರ ಚುನಾವಣೆ ನಿಗದಿಯಾಗಿತ್ತು. ಬಿಸಿಎಂ (ಎ) ಮೀಸಲಾತಿಯಿಂದ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳಿದ್ದರು. 

‘ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಲು ಕಾರೇಕೆರೆ ಗ್ರಾಮದ ವೆಂಕಟೇಶ, ಸ್ವಾಮಿ, ಮಡೇನೂರು ಗ್ರಾಮದ ಸುರೇಂದ್ರ ಎಂಬುವವರು ನಮ್ಮ ತಾಯಿಯನ್ನು ಅಪಹರಿಸಿದ್ದಾರೆ’ ಎಂದು ಪುತ್ರ ಜಯರಾಂ, ಶಾಂತಿ ಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆಯ್ಕೆ: ನಿಗದಿಯಂತೆ ಚುನಾವಣೆ ನಡೆದಿದ್ದು ಮುದ್ದನಹಳ್ಳಿ ಗ್ರಾಮದ ಸರಸ್ವತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು