ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ಬೇಗೆಗೆ ಹಾಸನದ ಜನ ಹೈರಾಣ

ಟೀ, ಕಾಫಿ ಬದಲು ಹಣ್ಣಿನ ರಸ ಸೇವನೆಗೆ ಒತ್ತು: ಎಳನೀರು, ಕಬ್ಬಿನ ಹಾಲಿಗೆ ಬೇಡಿಕೆ
ಸಂತೋಷ್ ಸಿ.ಬಿ.
Published 1 ಮೇ 2024, 4:57 IST
Last Updated 1 ಮೇ 2024, 4:57 IST
ಅಕ್ಷರ ಗಾತ್ರ

ಹಾಸನ: ದಿನದಿಂದ ದಿನಕ್ಕೆ ಬಡವರ ಊಟಿ ಹಾಸನದಲ್ಲಿ ಬಿಸಿಲಿನ ತಾಪ ಏರುತ್ತಿದ್ದು, ದಾಹ ತಣಿಸಿಕೊಳ್ಳಲು ಜನರು ಇಲ್ಲದ ಕಸರತ್ತು ಮಾಡುತ್ತಿದ್ದಾರೆ. ತಂಪು ಪಾನೀಯಗಳ ಮೊರೆ ಹೋಗುತ್ತಿರುವುದರಿಂದ ಕಬ್ಬಿನ ಹಾಲು, ಎಳನೀರಿಗೆ ಭಾರಿ ಬೇಡಿಕೆ ಬಂದಿದೆ.

ಸಾಮಾನ್ಯವಾಗಿ ಜನರಿಗೆ ಕಾಫೀ, ಟೀ ಕುಡಿಯವುದು ರೂಢಿ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹಾಸಿಗೆಯಿಂದ ಏಳುವಷ್ಟರಲ್ಲಿ ಬಿಸಿಲಿನ ತಾಪ ನೆತ್ತಿ ಸುಡುತ್ತಿದ್ದು, ಕಾಫಿ, ಟೀ ಕುಡಿಯಲು ಮನಸ್ಸು ಬರುತ್ತಿಲ್ಲ. ಇದರ ಬದಲು ಜನರು ಹಣ್ಣಿನ ರಸ ಹಾಗೂ ಎಳನೀರು ಕುಡಿದರೆ ಒಳಿತು ಎನ್ನುವ ಉದ್ದೇಶದಿಂದ ಪಾನೀಯಗಳತ್ತ ಮನಸ್ಸು ಮಾಡುತ್ತಿದ್ದಾರೆ.

ಕೆಲಸದ ನಿಮಿತ್ತ ಮನೆ ಕಚೇರಿಯಿಂದ ಹೊರಬರುವ ಜನರು ಈಗ ಎಳನೀರು, ಮಜ್ಜಿಗೆ, ಕಬ್ಬಿನ ಹಾಲು, ವಿವಿಧ ಹಣ್ಣಿನ ರಸ ಕುಡಿಯುತ್ತಿದ್ದು, ಇದರಿಂದ ಸಣ್ಣಪುಟ್ಟ ಹೋಟೆಲ್, ಕಾಂಡಿಮೆಂಟ್ಸ್, ಟೀ ಸ್ಟಾಲ್‌ಗಳ ವ್ಯಾಪಾರ ಕಡಿಮೆಯಾಗುತ್ತಿದೆ.

ಸ್ಥಳೀಯ ಡೇರಿ, ಸ್ಟಾಲ್‌ಗಳು, ಸಣ್ಣಪುಟ್ಟ ಹೋಟೆಲ್, ಬೇಕರಿಗಳಲ್ಲಿ ಮಜ್ಜಿಗೆ, ಹಣ್ಣಿನ ರಸ ಮಾರಾಟ ಜೋರಾಗಿದೆ. ಬಿಸಿಲಿನ ಧಗೆ ಹೆಚ್ಚಾದ ಕಾರಣ ಆರೋಗ್ಯದ ಕಾಳಜಿಯಿಂದ ಜನರು ಐಸ್ ಕ್ರೀಂ, ಪಾನೀಯಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದಾಗಿ ಐಸ್‌ಕ್ರೀಂ, ಫ್ರೂಟ್ ಸಲಾಡ್‌ಗಳಿಗೂ ಬೇಡಿಕೆ ಹೆಚ್ಚುತ್ತಿದೆ.

3–4 ತಿಂಗಳ ಹಿಂದೆ ಒಂದು ಎಳನೀರು ₹ 25 ರಿಂದ ₹ 35 ರವರೆಗೆ ಮಾರಾಟವಾಗುತ್ತಿತ್ತು. ಬಿಸಿಲು ಹೆಚ್ಚಾಗಿದ್ದು, ಎಳನೀರು ಕಾಯಿಗಳ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಬೆಲೆ ಏರಿಕೆಯಾಗಿದ್ದು, ಇದೀಗ ಎಳನೀರಿನ ಬೆಲೆ ₹ 45 ರಿಂದ ₹ 50 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ಚನ್ನರಾಯಪಟ್ಟಣ, ಅರಸೀಕೆರೆ, ಹೊಳೆನರಸೀಪುರ ಸೇರಿದಂತೆ ಸುತ್ತಲಿನ ತಾಲ್ಲೂಕುಗಳಿಂದ ಹೆಚ್ಚು ಎಳನೀರು ಪೂರೈಕೆ ಆಗುತ್ತಿತ್ತು. ಆದರೆ ಈ ತಾಲ್ಲೂಕುಗಳಿಂದ ನೆರೆಯ ರಾಜ್ಯಗಳಿಗೆ ಹೆಚ್ಚಿನ ರಫ್ತಾಗುತ್ತಿರುವುದರಿಂದ ಮೊದಲಿನಂತೆ ಎಳನೀರಿನ ಪೂರೈಕೆ ಆಗುತ್ತಿಲ್ಲ ಎನ್ನುತ್ತಾರೆ ಬಹುತೇಕ ಎಳನೀರು ವ್ಯಾಪಾರಿಗಳು.

‘ಮೊದಲು ದಿನಕ್ಕೆ ಒಂದು ಹೊರೆ ಕಬ್ಬು ಸಾಕಾಗುತ್ತಿತ್ತು. ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ಕಬ್ಬಿನ ಹಾಲನ್ನು ಕುಡಿಯುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಐದರಿಂದ ಆರು ಹೊರೆ ಕಬ್ಬು ಬೇಕಾಗುತ್ತಿದೆ’ ಎಂದು ಇಲ್ಲಿನ ಕಬ್ಬಿನ ಹಾಲು ವ್ಯಾಪಾರಿ ಮಂಜುನಾಥ್ ಹೇಳುತ್ತಾರೆ.

ಬಿಸಿಲು ಇರುವುದರಿಂದ ಊಟ ತಿಂಡಿ ಹೆಚ್ಚಾಗಿ ಸೇರುತ್ತಿಲ್ಲ. ಹಣ್ಣಿನ ರಸಗಳ ಸೇವನೆ ಹೆಚ್ಚಿದೆ. ಕಲ್ಲಂಗಡಿ ಕರ್ಬುಜ ನಿಂಬೆಹಣ್ಣಿನ ಜ್ಯೂಸ್ ಕುಡಿಯುತ್ತೇವೆ. ಇದರಿಂದ ದೇಹ ನಿರ್ಜಲೀಕರಣ ತಪ್ಪುತ್ತದೆ.
ರಮೇಶ್, ಖಾಸಗಿ ಉದ್ಯೋಗಿ
ಎರಡು ತಿಂಗಳಿಗಿಂತ ಸದ್ಯದ ಬಿಸಿಲಿನ ತಾಪದಿಂದ ಜ್ಯೂಸ್ ಮಾರಾಟದಿಂದ ಆದಾಯ ಹೆಚ್ಚಿದೆ. ಪ್ರತಿ ದಿನ ಹಾಕಿದ ಬಂಡವಾಳಕ್ಕಿಂತ ಹೆಚ್ಚಿನ ಆದಾಯ ನಿರೀಕ್ಷಿಸಬಹುದಾಗಿದೆ.
ಯುವರಾಜ್, ಹಣ್ಣಿನ ಜ್ಯೂಸ್ ವ್ಯಾಪಾರಿ
ಬಿಸಿಲಿನ ತಾಪ ಹೆಚ್ಚಾದ ಕಾರಣ ಎಳನೀರು ಕುಡಿಯುವವರ ಸಂಖ್ಯೆ ಹೆಚ್ಚಿದೆ. ಇಳುವರಿ ಕುಂಠಿತವಾದ ಕಾರಣ ತೆಂಗು ಬೆಳೆಗಾರರಿಂದ ನೇರವಾಗಿ ಖರೀದಿ ದರವೂ ಹೆಚ್ಚಿದೆ. ನಿತ್ಯ ಎಳನೀರು ₹ 50 ಮಾರಬೇಕಾಗಿದೆ.
ನಾಗರಾಜ್, ಎಳನೀರು ವ್ಯಾಪಾರಿ
ಹಾಸನದ ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರ ನಡೆಯುತ್ತಿದೆ.
ಹಾಸನದ ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT