ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆತ್ತೂರು | ಬೈಕ್‌ನಲ್ಲಿ ಪಟ್ಲ ಬೆಟ್ಟಕ್ಕೆ ಹೋದವರ ಮೇಲೆ ದಾಳಿ

ಮಂಗಳೂರಿನ ಪ್ರವಾಸಿಗರಿಂದ ನಾಲ್ವರು ಸ್ಥಳೀಯರ ಮೇಲೆ ದೂರು
Published 25 ಜೂನ್ 2024, 14:19 IST
Last Updated 25 ಜೂನ್ 2024, 14:19 IST
ಅಕ್ಷರ ಗಾತ್ರ

ಹೆತ್ತೂರು: ಸಮೀಪದ ಪಟ್ಲಬೆಟ್ಟಕ್ಕೆ ಬೈಕ್‌ನಲ್ಲಿ ಬಂದ ಪ್ರವಾಸಿಗರ ಮೇಲೆ ಹಲ್ಲೆ ಆರೋಪದ ಮೇಲೆ ನಾಲ್ವರ ಮೇಲೆ ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್ 23 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಿಗರಾದ ಭುವಿತ್ ಪೂಜಾರಿ ಹಾಗೂ ಸಂಗಡಿಗರು, ತಮ್ಮ ಬೈಕ್‌ಗಳಲ್ಲಿ ಪಟ್ಲ ಬೆಟ್ಟಕ್ಕೆ ಹೋಗಿದ್ದರು. ಹಿಂದಿರುಗಿ ಬರುವಾಗ ಬಾಡಿಗೆ ಜೀಪುಗಳ ಚಾಲಕರು ಹಾಗೂ ಮಾಲೀಕರ ತಂಡ, ‘ಬೈಕ್‌ಗಳಲ್ಲಿ ಹೋಗಬೇಡಿ ಅಂದ್ರು ಏಕೆ ಹೋದ್ರಿ? ಇಲ್ಲಿಗೆ ಬಾಡಿಗೆ ಜೀಪಿನಲ್ಲೇ ಹೋಗಬೇಕು. ಬೇರೆ ವಾಹನಗಳನ್ನು ಬಿಡುವುದಿಲ್ಲ’ ಎಂದು ಬೈಕ್ ಸವಾರರ ಜೊತೆ ಮಾತಿನ ಚಕಾಮುಕಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಕೆಲವರು ಏಕಾಏಕಿ ಬೈಕ್ ಸವಾರ ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟುವಿನ ಭುವಿತ್ ಪೂಜಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಾಳು ಭುವಿತ್ ಪೂಜಾರಿ ನೀಡಿದ ದೂರಿನ ಆಧಾರದಲ್ಲಿ ಗಗನ್, ಕಿರಣ್, ನಿಶಾಂತ್, ಮದನ್ ಎಂಬುವವರ ಮೇಲೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಬ್ಬಾಳಿಕೆ ಆರೋಪ: ಪಟ್ಲ ಬೆಟ್ಟಕ್ಕೆ ಬರುವ ಪ್ರವಾಸಿಗರ ಮೇಲೆ ಕೆಲವು ಜೀಪು ಚಾಲಕರು ಉದ್ದೇಶಪೂರ್ವಕವಾಗಿ ದಬ್ಬಾಳಿಕೆ ಮಾಡುತ್ತಿರುವ ಆರೋಪ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ.

ಪ್ರವಾಸಿಗರು ಜೀಪನ್ನು ಬಾಡಿಗೆಗೆ ತೆಗೆದುಕೊಳ್ಳದೇ, ತಮ್ಮ ವಾಹನಗಳನ್ನು ಬೆಟ್ಟದ ಕೆಳಗಡೆ ನಿಲ್ಲಿಸಿ ನಡೆದುಕೊಂಡು ಬೆಟ್ಟಕ್ಕೆ ಹೋಗಿ, ಬರುವಷ್ಟರಲ್ಲಿ ವಾಹನಗಳ ಗಾಳಿ ತೆಗೆದು ಪಂಚರ್ ಮಾಡುತ್ತಾರೆ. ಬೆಟ್ಟದ ಸೌಂದರ್ಯ ನೋಡಿಕೊಂಡು ವಾಪಸ್‌ ಬಂದಾಗ ವಾಹನದ ಟಯರ್‌ಗಳು ಪಂಚರ್ ಆಗಿರುವುದನ್ನು ಕಂಡು ಪ್ರವಾಸಿಗರು ಪಂಚರ್ ಹಾಕಿಸಿಕೊಳ್ಳಲು ಪರದಾಡಬೇಕಾಗುತ್ತದೆ.

ಅನಿವಾರ್ಯವಾಗಿ ಟಯರ್‌ಗಳನ್ನು ಬಿಚ್ಚಿ ಅದೇ ಜೀಪಿಗೆ ದುಬಾರಿ ಬಾಡಿಗೆ ಕೊಟ್ಟು ವನಗೂರು ಇಲ್ಲವೇ ಹೆತ್ತೂರಿಗೆ ಹೋಗಿ ಪಂಚರ್ ಹಾಕಿಸಿಕೊಂಡು ಬರಬೇಕಾಗುತ್ತದೆ. 2 ವರ್ಷಗಳ ಹಿಂದೆ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸಕಲೇಶಪುರದ ಪತ್ರಕರ್ತರ ತಂಡ, ಬೆಟ್ಟದ ವರದಿ ಮಾಡಲು ಹೋದಾಗ ಪತ್ರಕರ್ತರ ಎರಡು ಕಾರುಗಳನ್ನು ಪಂಚರ್ ಮಾಡಲಾಗಿತ್ತು. ಈ ಸರಿಯಾದ ಕ್ರಮ ತೆಗೆದುಕೊಳ್ಳದ ಕಾರಣ ಈ ತಂಡದ ಆಟೋಟ ಮಿತಿ ಮೀರಿದೆ. ಕೇವಲ ಜೀಪ್ ಬಾಡಿಗೆಗಾಗಿ ಪ್ರವಾಸಿಗರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು, ಕೂಡಲೇ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT