ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣಬೆಳಗೊಳ: ಸಾವಿರ ಲೀಟರ್‌ ಹಾಲು ನೆಲಕ್ಕೆ ಸುರಿದ ಪ್ರತಿಭಟನೆ

Published 4 ನವೆಂಬರ್ 2023, 13:40 IST
Last Updated 4 ನವೆಂಬರ್ 2023, 13:40 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಹೋಬಳಿಯ ಹಡೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಹಾಲು ಉತ್ಪಾದಕರು ಶುಕ್ರವಾರ ರಾತ್ರಿ ಸುಮಾರು 1ಸಾವಿರ ಲೀಟರ್ ಹಾಲನ್ನು ನೆಲಕ್ಕೆ ಸುರಿದು ಪ್ರತಿಭಟನೆ ನಡೆಸಿದರು.

23 ವರ್ಷಗಳ ಹಿಂದೆ ಆರಂಭಗೊಂಡಿರುವ ಈ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಕ್ಕೆ ಅಂದಿನಿಂದ ಇಂದಿನವರೆಗೂ ಗ್ರಾಮದ ಜಯಂತಿ ಎಂಬುವವರು ಕಾರ್ಯದರ್ಶಿಯಾಗಿದ್ದಾರೆ. ಇತ್ತೀಚೆಗೆ ಹೊಸ ಆಡಳಿತ ಮಂಡಳಿ ರಚನೆಯಾಗಿದ್ದು, ಈವರೆಗಿನ ಖರ್ಚು– ವೆಚ್ಚದ ವರದಿ ನೀಡುವಂತೆ ಜಯಂತಿ ಅವರನ್ನು ಕೇಳಲಾಗಿದೆ. ಆದರೆ ಇದಕ್ಕೆ ಕಾರ್ಯದರ್ಶಿ ಪ್ರತಿಕ್ರಿಯಿಸಲಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೂ ದೂರು ನೀಡಿದ್ದು, ಲೆಕ್ಕ ಪತ್ರದಲ್ಲಿ ವ್ಯತ್ಯಾಸ ಮಾಡಿದ್ದಾರೆ ಎಂದು ಆರೋಪಿಸಿ ಆಡಳಿತ ಮಂಡಳಿಯಿಂದ ಅವರನ್ನು ಅಮಾನತು ಮಾಡಲು ಸಂಘದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ನಿರ್ದೇಶಕರು ಶಿಫಾರಸು ಮಾಡಿದ್ದಾರೆ.

ಕಳೆದ ಇಪ್ಪತ್ತು ದಿನಗಳಿಂದ ಆರೋಪ– ಪ್ರತ್ಯಾರೋಪ ನಡೆಯುತ್ತಲೇ ಇತ್ತು. ಆದರೆ ಶುಕ್ರವಾರ ಸಂಜೆ ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ, ಗೊಂದಲ ಬಗೆಹರಿಯುವವರೆಗೂ ಹಾಲು ಸ್ವೀಕರಿಸದಂತೆ ನೋಟಿಸ್ ನೀಡಿದ್ದು, ಹಾಲು ಉತ್ಪಾದಕರ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದ ಬೇಸತ್ತ ರೈತರು ಹಾಲಿನ ಡೈರಿ ಎದುರು ಪ್ರತಿಭಟನೆ ನಡೆಸಿ, ಹಾಲನ್ನು ನೆಲಕ್ಕೆ ಚೆಲ್ಲಿದರು. ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನೆ ನಡೆಸಿದರು. 

ಕಾರ್ಯದರ್ಶಿ ಲೆಕ್ಕಪತ್ರದ ಪುಸ್ತಕವನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಕಚೇರಿಗೆ ಪುಸ್ತಕ ತರುವುದಿಲ್ಲ. ಲೆಕ್ಕ ಕೂಡ ನೀಡಿಲ್ಲ ಎಂದು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಆಶಾ ಹೇಳುತ್ತಾರೆ.

ಸಂಘಕ್ಕೆ ಪ್ರತ್ಯೇಕ ಬೀಗ ಹಾಕಿರುವುದರಿಂದ ಆಡಳಿತ ಮಂಡಳಿಯ ಸದಸ್ಯರೇ ಸೇರಿ ಹಾಲು ಅಳೆಸುವುದಾಗಿ ನಿರ್ಧಾರ ಮಾಡಲಾಗಿತ್ತು. ಆದರೆ ಒಕ್ಕೂಟದ ಮೇಲ್ವಿಚಾರಕರು ಸಮಸ್ಯೆ ಬಗೆಹರಿಯುವವರೆಗೆ, ಪಕ್ಕದ ಗ್ರಾಮಗಳಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲನ್ನು ಹಾಕುವಂತೆ ನೋಟಿಸ್ ನೀಡಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ನೂರಾರು ರೈತರು ಸಂಬಂಧಪಟ್ಟ ಅಧಿಕಾರಿಗಳು ಬಂದು ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.

ಆಸ್ಪತ್ರೆಗೆ ದಾಖಲು: ಈ ಘಟನೆಗಳಿಂದ ಮನನೊಂದಿರುವ ಕಾರ್ಯದರ್ಶಿ ಜಯಂತಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

Cut-off box - ಚನ್ನರಾಯಪಟ್ಟಣದಲ್ಲೂ ಪ್ರತಿಭಟನೆ ಶನಿವಾರ ಬೆಳಿಗ್ಗೆ ಚನ್ನರಾಯಪಟ್ಟಣದ ತಹಶೀಲ್ದಾರ್‌ ಕಚೇರಿ ಎದುರು ಸೇರಿದ ಹಾಲು ಉತ್ಪಾದಕರು ಅಲ್ಲಿಯೂ ಹಾಲನ್ನು ನೆಲಕ್ಕೆ ಚೆಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರ ಜೊತೆಗೆ ಮಾತನಾಡಿದ ತಹಶೀಲ್ದಾರ್‌ ಗೋವಿಂದರಾಜು ಸಂಬಂಧಪಟ್ಟವರ ಜೊತೆಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು. ಶಾಂತಿಯುತವಾಗಿ ಇರುವಂತೆ ಮನವಿ ಮಾಡಿದರು. ಶಾಸಕ ಸಿ.ಎನ್‌. ಬಾಲಕೃಷ್ಣ ಪ್ರತಿಕ್ರಿಯಿಸಿ ಈ ಕುರಿತು ಅಧಿಕಾರಿಗಳ ಜೊತೆಗೆ ಚರ್ಚಿಸಲಾಗುವುದು. ಎಲ್ಲಿ ತಪ್ಪಾಗಿದೆಯೋ ಅದನ್ನು ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT