ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀರಾವರಿಗೆ ₹ 2 ಲಕ್ಷ ಕೋಟಿ ಅನುದಾನ: ಡಿಕೆಶಿ

ಹಾಸನ: ’ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ, ಐದು ವರ್ಷಗಳಲ್ಲಿ ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಇದಕ್ಕಾಗಿ ₹ 2 ಲಕ್ಷ ಕೋಟಿ ಅನುದಾನ ಮೀಸಲಿಡಲಾಗುವುದು‘ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ’200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಮಾಸಿಕ ₹ 2 ಸಾವಿರ, ಪ್ರತಿ ತಿಂಗಳು 10 ಕೆ.ಜಿ. ಅಕ್ಕಿಯ ಭರವಸೆ ನೀಡಿದ್ದೇವೆ. ಇದೀಗ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಆಶ್ವಾಸನೆ ನೀಡುತ್ತಿದ್ದೇವೆ‘ ಎಂದರು.
’2018 ರಲ್ಲಿ ನಡೆದ ಚುನಾವಣೆಯಲ್ಲಿ 80 ಸ್ಥಾನ ಗೆದ್ದಿದ್ದರೂ, ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಏಕೈಕ ಉದ್ದೇಶದಿಂದ ಜೆಡಿಎಸ್‌ಗೆ ಅಧಿಕಾರ ಬಿಟ್ಟುಕೊಟ್ಟೆವು. ಆದರೆ, ಎಲ್ಲರನ್ನು ಒಗ್ಗಟ್ಟಾಗಿ ಕರೆದುಕೊಂಡು ಹೋಗದ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿಯ ಆಪರೇಷನ್ ಕಮಲದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಇದರಲ್ಲಿ ನಮ್ಮ ತಪ್ಪು ಏನಾದರೂ ಇದೆಯೇ‘ ಎಂದು ಪ್ರಶ್ನಿಸಿದರು.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ’ರೈತರ ಆದಾಯ ದ್ವಿಗುಣ ಮಾಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿತು. 2022 ರಲ್ಲಿ ರೈತರ ಆದಾಯ ದ್ವಿಗುಣ ಆಗುವ ಬದಲು, ಬೆಲೆ ಏರಿಕೆಯಿಂದ ರೈತರು ವ್ಯವಸಾಯಕ್ಕೆ ಮಾಡುವ ಖರ್ಚು ದುಪ್ಪಟ್ಟಾಗಿದೆ‘ ಎಂದು ಟೀಕಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಮಾತನಾಡಿ, ’ಜೆಡಿಎಸ್, ಬಿಜೆಪಿಯ ಬೀ ಟೀಂ. ಮೈಸೂರಿನ ಮೇಯರ್ ಚುನಾವಣೆ, ರಾಷ್ಟ್ರಪತಿ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದೆ‘ ಎಂದರು.
’ಉಚಿತ ವಿದ್ಯುತ್, ಗೃಹಲಕ್ಷ್ಮಿ, 10 ಕೆ.ಜಿ. ಅಕ್ಕಿಯಂತಹ ಯೋಜನೆಗಳಿಗೆ ಹಣ ಎಲ್ಲಿಂದ ತರುತ್ತಾರೆ ಎಂದು ಬಿಜೆಪಿಯವರು ಕೇಳುತ್ತಾರೆ. ನೀವು ಪಡೆಯುವ ಶೇ 40 ಕಮಿಷನ್ ದಂಧೆಯನ್ನು ನಿರ್ಮೂಲನೆ ಮಾಡಿ, ಆ ಹಣವನ್ನು ಜನಕಲ್ಯಾಣಕ್ಕೆ ಬಳಸುತ್ತೇವೆ‘ ಎಂದು ಸುರ್ಜೇವಾಲ ಹೇಳಿದರು.
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ ಮಾತನಾಡಿ, ’ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ. ಇಲ್ಲಿಗೆ ಬರುವುದಕ್ಕೆ ಯಾವುದೇ ತೊಂದರೆ ಇಲ್ಲ. ಬಂದಾಗ ರಾಜ್ಯಕ್ಕೆ ಕೊಡುಗೆ ಕೊಟ್ಟು ಹೋಗಿ. ಅದನ್ನು ಬಿಟ್ಟು ಇಲ್ಲಿನ ಅಮುಲ್, ಕಾರ್ಖಾನೆ, ಶಿಕ್ಷಣ ಸಂಸ್ಥೆಗಳನ್ನು ತೆಗೆದುಕೊಂಡು ಹೋಗುವ ಕೆಲಸ ಮಾಡಬೇಡಿ‘ ಎಂದು ತಾಕೀತು ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.